ADVERTISEMENT

ನೂತನ ವಿಳಾಸದಲ್ಲಿ ಪತ್ತೆಯಾಗದ ಎಂಎಲ್‌ಸಿಗಳು

ಹೊಸ ವಿಳಾಸಗಳಿಗೆ ಭೇಟಿ ನೀಡಿದ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಹರ್ಷ ಗುಪ್ತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:50 IST
Last Updated 18 ಫೆಬ್ರುವರಿ 2020, 10:50 IST
ಚುನಾವಣಾ ವೀಕ್ಷಕ ಹರ್ಷ ಗುಪ್ತಾ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು.
ಚುನಾವಣಾ ವೀಕ್ಷಕ ಹರ್ಷ ಗುಪ್ತಾ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು.   

ದಾವಣಗೆರೆ: ಇಲ್ಲಿನ ಮೇಯರ್‌ ಹುದ್ದೆ ಹೇಗಾದರೂ ಹಿಡಿಯಲೇಬೇಕು ಎಂಬ ಕಾರಣಕ್ಕೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ವಿಧಾನಪರಿಷತ್ತಿನ ಸದಸ್ಯರು ನೀಡಿದ್ದ ದಾವಣಗೆರೆಯ ವಾಸದ ವಿಳಾಸಗಳಿಗೆ ಚುನಾವಣಾ ವೀಕ್ಷಕರಾಗಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಸೋಮವಾರ ಭೇಟಿ ನೀಡಿದರು. ಎಲ್ಲೂ ವಿಧಾನಪರಿಷತ್ತಿನ ಸದಸ್ಯರು ಅಥವಾ ಅವರ ಕುಟುಂಬ ಪತ್ತೆಯಾಗದೇ ಇದ್ದಿದ್ದರಿಂದ ಈ ಬಗ್ಗೆ ಚುನಾವಣಾ ಆಯುಕ್ತರಿಗೆ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಸುದ್ದಿಗಾರರ ಜತೆಗೆ ಹರ್ಷ ಗುಪ್ತ ಮಾತನಾಡಿ, ‘ಪಾಲಿಕೆ ಸದಸ್ಯರು ಮತ್ತು ಇತರೆ ಸಾರ್ವಜನಿಕರ ಮನವಿ ಮೇರೆಗೆ ಮತದಾರರ ಪಟ್ಟಿಯಲ್ಲಿರುವ ಎಂಎಲ್‌ಸಿಗಳ ವಿಳಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. 12 ಮಂದಿ ವಿಧಾನ ಪರಿಷತ್‌ ಸದಸ್ಯರು ಅವರು ನೀಡಿದ ವಿಳಾಸದಲ್ಲಿ ಕಂಡುಬಂದಿಲ್ಲ. ದಾಖಲೆಗಳನ್ನು ಪರಿಶೀಲಿಸಿದಾಗ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನೀಡಬೇಕಾದ ಸರಿಯಾದ ದಾಖಲೆ ಕೂಡ ನೀಡದಿರುವುದು ಕಂಡುಬಂದಿದೆ. ಬಾಡಿಗೆ ಕರಾರು ಪತ್ರ ಮಾತ್ರ ನೀಡಿದ್ದಾರೆ. ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6 ನೀಡಿದ್ದರೂ ಅದರಲ್ಲಿ ಚುನಾವಣಾ ನೋಂದಣಿ ಅಧಿಕಾರಿಯ ಆದೇಶ ಪತ್ರ ಇಲ್ಲ. ಅಧಿಕಾರಿಗಳಿಂದ ತಪ್ಪಾಗಿದೆಯೇ ಎಂಬುದನ್ನು ಕೂಡ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ದಾಖಲಾತಿಗಳನ್ನು ಪರಿಶೀಲಿಸಿ ಪ್ರಾದೇಶಿಕ ಆಯುಕ್ತರ ಕಚೇರಿ ಹಾಗೂ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗುವುದು. ಜಿಲ್ಲಾಧಿಕಾರಿ ಈ ಬಗ್ಗೆ ಚರ್ಚೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಪಾಲಿಕೆ ಸದಸ್ಯರು ನೀಡಿರುವ ಮನವಿಯ ಆಧಾರದಲ್ಲಿ ನಾಲ್ಕೈದು ಮನೆಗಳಿಗೆ ಭೇಟಿ ನೀಡಲಾಗಿದೆ. ಮೇಲ್ನೋಟಕ್ಕೆ ಯಾವ ಎಂಎಲ್‌ಸಿಯೂ ಇಲ್ಲಿ ವಾಸಿಸುತ್ತಿಲ್ಲ ಎಂದು ತಿಳಿದುಬಂದಿದೆ. ಪಾಲಿಕೆ ಸದಸ್ಯರ ಮನವಿಯನ್ನು ಅಪೀಲೆಂದು ಪರಿಗಣಿಸಲಾಗುವುದು. ಈ ವಿಷಯವನ್ನು ಪ್ರಾದೇಶಿಕ ಆಯುಕ್ತರು ಮತ್ತು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದು, 24 ಗಂಟೆಗಳೊಳಗೆ ವಿಧಾನ ಪರಿಷತ್‌ ಸದಸ್ಯರಿಗೆ ನೋಟಿಸ್‌ ನೀಡಲಾಗುವುದು. ವೀಕ್ಷಕರ ಮಾರ್ಗದರ್ಶನದಂತೆ ಮತ್ತು ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ಗಳಾದ ಸಂತೋಷ್‌ ಕುಮಾರ್‌, ಪ್ರಸಾದ್‌ ಅವರೂ ಇದ್ದರು.

ಎಂಎಲ್‌ಸಿಗಳ ಸೇರ್ಪಡೆ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಮನವಿ

ಬಿಬಿಎಂಪಿ ಮೇಯರ್‌ ಚುನಾವಣೆ, ಇತರ ಚುನಾವಣೆಗಳಲ್ಲಿ ಮತ ಚಲಾಯಿಸಿರುವ ಎಂಎಲ್‌ಸಿಗಳನ್ನು ಈಗ ದಾವಣಗೆರೆಯ ವಿಳಾಸ ತೋರಿಸಿ ಇಲ್ಲಿನ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಬಿಜೆಪಿ ಅಧಿಕಾರ ಹಿಡಿಯಲು ಹೀಗೆ ಮಾಡಿದೆ. ಹಾಗಾಗಿ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಇದ್ದ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕು ಎಂದು ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್‌, ಎ. ನಾಗರಾಜ್‌ ಮತ್ತು ತಂಡ ಹರ್ಷ ಗುಪ್ತಾ ಅವರಿಗೆ ಮನವಿ ಮಾಡಿತ್ತು.

ದಾವಣಗೆರೆ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹರ್ಷ ಗುಪ್ತ ಸೋಮವಾರ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್‌ಹೌಸ್‌ನಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುವ ವೇಳೆ ಈ ಮನವಿ ಸಲ್ಲಿಸಲಾಗಿದೆ.

ಫೆ.10ರಂದು ಬೆಳಿಗ್ಗೆ 10.30ಕ್ಕೆ ಪಾಲಿಕೆಯಿಂದ ಪಟ್ಟಿ ಕೇಳಿದಾಗ ಅದರಲ್ಲಿ ಪಾಲಿಕೆಯ 45 ಸದಸ್ಯರು ಸೇರಿ 61 ಮಂದಿಯ ಹೆಸರಿತ್ತು. ಆದರೆ ಅದೇ ದಿನ ರಾತ್ರಿ ಬಾಗಲಕೋಟೆಯ ಹನುಮಂತ ನಿರಾಣಿ ಅವರ ಹೆಸರು ಸೇರ್ಪಡೆಗೊಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿಯೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಆ ನಿಯೋಗದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ಅಯೂಬ್ ಪೈಲ್ವಾನ್, ಪಾಲಿಕೆಯ ಸದಸ್ಯರಾದ ಚಮನ್ ಸಾಬ್, ಸೈಯದ್ ಚಾರ್ಲಿ, ಗಣೇಶ್ ಹುಲ್ಮನಿ, ಕುಮಾರ್ ಅವರೂ ಇದ್ದರು.

ಇಂಗಳೇಶ್ವರ ಮನವಿ: 45 ಪಾಲಿಕೆ ಸದಸ್ಯರು ಸೇರಿ 50 ಮಂದಿ ಮಾತ್ರ ಮತ ಚಲಾಯಿಸಲು ಅರ್ಹರಿದ್ದರು. ಇದ್ದಕ್ಕಿದ್ದಂತೆ 12 ಹೆಸರುಗಳು ಸೇರ್ಪಡೆಗೊಂಡಿವೆ. ಅವುಗಳನ್ನು ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಎಸ್‌. ಮಲ್ಲಿಕಾರ್ಜುನ ಇಂಗಳೇಶ್ವರ ಮನವಿ ಸಲ್ಲಿಸಿದರು.

ವಿಳಾಸ ಪರಿಶೀಲನೆ ಸಂದರ್ಭದಲ್ಲಿ ಕೇಳಿಬಂದ ಅಭಿಪ್ರಾಯಗಳು

ವಿದ್ಯಾನಗರದ ಬಾಯ್ಸ್ ಹಾಸ್ಟೆಲ್ ರಸ್ತೆಯಲ್ಲಿ ಇರುವ ಕೆ.ಸಿ.ಕೊಂಡಯ್ಯ ಅವರ ವಿಳಾಸದ ಮನೆಗೆ ಭೇಟಿ ನೀಡಿದಾಗ ಈ ಕಟ್ಟಡದ ನಾಲ್ಕನೇ ಮಹಡಿಯ ಒಂದು ಪುಟ್ಟ ಮನೆಯಲ್ಲಿ ವಾಸವಿರಲಿಕ್ಕೆ ಬಾಡಿಗೆ ಪಡೆದಿದ್ದು, ಆಗಾಗ ಬಂದು ಹೋಗುತ್ತಾರೆ. ₹ 4,000 ಬಾಡಿಗೆ ನೀಡುತ್ತಾರೆ. ಆರು ತಿಂಗಳ ಹಿಂದೆ ಬಂದಿದ್ದರೆಂದು ಹಾಲಿ ವಾಸವಿರುವ ಬಾಡಿಗೆದಾರರು ಮಾಹಿತಿ ನೀಡಿದರು.

ವಿದ್ಯಾನಗರ ಶಿಕ್ಷಕರ ಬಡಾವಣೆಯಲ್ಲಿ ತೇಜಸ್ವಿನಿ ಗೌಡ ನೀಡಿದ್ದ ವಿಳಾಸಕ್ಕೆ ಭೇಟಿ ನೀಡಿದಾಗ, ‘ತೇಜಸ್ವಿನಿ ಗೌಡ ನಮ್ಮ ದೂರದ ಸಂಬಂಧಿ. ಅವರ ಪರವಾಗಿ ನಾವು ಈ ಮನೆಯಲ್ಲಿ ವಾಸಿಸುತ್ತಿದ್ದೇವೆ. ಹೀಗೆ ಎರಡು ವಾರಗಳ ಹಿಂದೆ ಬಂದು ಹೋಗಿದ್ದಾರೆ. ಅವರ ಮಕ್ಕಳು ಇಲ್ಲಿಯೇ ಓದುತ್ತಿದ್ದಾರೆ’ ಎಂದು ಅಲ್ಲಿ ವಾಸವಿದ್ದ ಶಿವಕುಮಾರ್‌ ತಿಳಿಸಿದರು.

ನಿಜಲಿಂಗಪ್ಪ ಬಡಾವಣೆಯಲ್ಲಿ ವೈ. ನಾರಾಯಣಸ್ವಾಮಿ ಅವರು ನೀಡಿದ ಮನೆಯ ಬಾಗಿಲು ತೆರೆದಿದ್ದರೂ ಯಾರೂ ಕಂಡುಬರಲಿಲ್ಲ. ‘ಈ ಮನೆಯಲ್ಲಿ ಶಿವಕುಮಾರ್ ಎಂಬುವರ ಕುಟುಂಬ ವಾಸವಿದೆ. ಬೇರೆ ಮಾಹಿತಿ ಇಲ್ಲ’ ಎಂದು ಎದುರು ಮನೆಯವರು ತಿಳಿಸಿದರು.

ನಿಜಲಿಂಗಪ್ಪ ಬಡಾವಣೆಯಲ್ಲಿ ಯು.ಬಿ. ವೆಂಕಟೇಶ್ ಅವರ ಹೆಸರಿನ ಫಲಕ ಹಾಕಲಾಗಿದೆ. ‘ಕಳೆದ 15 ದಿನಗಳಿಂದ ಆ ಕೊಠಡಿಗೆ ಯಾರೂ ಬಂದಿಲ್ಲ. ಅದಕ್ಕಿಂತ ಮುಂಚೆ ಎಂಎಲ್‌ಎ ಕಡೆಯವರು ಬರುತ್ತಾರೆಂದು ಹೇಳುತ್ತಿದ್ದರು’ ಎಂದು ಪಕ್ಕದ ಮನೆಯವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.