ADVERTISEMENT

ಕರುಳ ಕುಡಿಗೆ ತಾಯಿಯ ಯಕೃತ್ ಕಸಿ: ಅರ್ಥಿಕ ನೆರವು ನೀಡಿದ ಸಿರಿಗೆರೆಶ್ರೀ

ಯಕೃತ್ ಕಸಿ ಚಿಕಿತ್ಸೆಗೆ ಅರ್ಥಿಕ ನೆರವು ನೀಡಿದ ಸಿರಿಗೆರೆಶ್ರೀ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 4:46 IST
Last Updated 24 ನವೆಂಬರ್ 2021, 4:46 IST
ಡಾ.ಶಿವಮೂರ್ತಿಶಿವಾಚಾರ್ಯಸ್ವಾಮೀಜಿ
ಡಾ.ಶಿವಮೂರ್ತಿಶಿವಾಚಾರ್ಯಸ್ವಾಮೀಜಿ   

ಸಿರಿಗೆರೆ: ಬಡ ಕುಟುಂಬದ 8 ವರ್ಷದ ದೀಕ್ಷಾಗೆ ತಾಯಿಯ ಯಕೃತ್‌ ಅನ್ನು ಕಸಿ ಮಾಡಲಾಗಿದೆ. ‘ಯಕೃತ್ ಕಸಿ’ ಶಸ್ತ್ರಚಿಕಿತ್ಸೆಗೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತರಳಬಾಳು ಬೃಹನ್ಮಠದಿಂದ ₹ 1 ಲಕ್ಷ ನೆರವು ನೀಡಿ ಆಸರೆಯಾಗಿದ್ದಾರೆ.

ಚನ್ನಗಿರಿಯ ತರಳಬಾಳು ಶಾಲೆಯ ಎರಡನೇ ತರಗತಿಯ ಪಿ.ಎಸ್. ದೀಕ್ಷಾಗೆ ಕೆಲ ದಿನಗಳ ಹಿಂದೆ ರಕ್ತಸ್ರಾವವಾಗುತಿತ್ತು. ಪೋಷಕರಾದ ಪ್ರಸನ್ನಕುಮಾರ್ ಮತ್ತು ಶ್ರುತಿ ಅವರು ಶಿವಮೊಗ್ಗ ನಗರದ ಆಸ್ಪತ್ರೆಯ ವೈದ್ಯರು ಮಗುವನ್ನು ಪರೀಕ್ಷಿಸಿ, ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು.

ಆಸ್ಪತ್ರೆಗೆ ಸೇರಿಸಿ ಅಲ್ಲಿನ ತಜ್ಞವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ದೇಹದಲ್ಲಿ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಯಕೃತ್‌ಗೆ ತೊಂದರೆಯಾಗಿತ್ತು. ಬೇರೆಯವರ ಯಕೃತ್ತನ್ನು ಕಸಿ ಮಾಡಿ ಜೋಡಿಸಬಹುದು ಎಂದು ವೈದ್ಯರು ಸಲಹೆ ನೀಡಿದರು.ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಬಹುದು. ಅಲ್ಲದೇ ಕಸಿ ಮಾಡಲು ಬೇರೊಬ್ಬರ ಯಕೃತ್ತಿನ ಭಾಗವು ಬೇಕು ಎಂದು ವೈದ್ಯರು ಸಲಹೆ ನೀಡಿದರು. ಆಗ ದೀಕ್ಷಾಳ ತಾಯಿ ಶ್ರುತಿ ಅವರೇ ತನ್ನ ಕರುಳಿನ ಕುಡಿಗೆ ತನ್ನದೇ ಯಕೃತ್ತನ್ನು ಕಸಿ ಮಾಡಿಸಲು ಮುಂದಾದರು. ಮಗುವಿಗೆ ಮತ್ತೊಮ್ಮೆ ಕರುಳಬಳ್ಳಿ ಬೆಸೆಯುವ ಅಪರೂಪದ ಸಂದರ್ಭ ಕಾಣಬಹುದಾಗಿದೆ.

ADVERTISEMENT

₹ 20 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದಾಗ ಇಷ್ಟೊಂದು ದುಬಾರಿ ವೆಚ್ಚದ ಚಿಕಿತ್ಸೆ ಕೊಡಿಸಲು ಸಾಮಾನ್ಯ ವರ್ಗದ ದೀಕ್ಷಾ ಕುಟುಂಬದವರಿಗೆ ಕಷ್ಟವಾಗಿತ್ತು. ಇದನ್ನು ಶ್ರೀಗಳ ಗಮನಕ್ಕೆ ತಂದಾಗ ಚಿಕಿತ್ಸೆಗೆ ₹ 1 ಲಕ್ಷ ಮೊತ್ತದ ಚೆಕ್ ನೀಡಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಸಲಹೆಯ ಮೇರೆಗೆ ಮುಖ್ಯಮಂತ್ರಿಗಳ ನಿಧಿಯಿಂದ ₹ 3 ಲಕ್ಷವನ್ನು ನೀಡಿದ್ದಾರೆ.

‘ಶ್ರೀಗಳು ನೀಡಿದ ಸಹಾಯ ಹಾಗೂ ಸಂಘ ಸಂಸ್ಥೆಗಳಿಂದ ನೆರವು ಬಂದಿದ್ದರಿಂದ ಚಿಕಿತ್ಸೆ ಸಾಧ್ಯವಾಯಿತು’ ಎಂದು ದೀಕ್ಷಾಳ ತಂದೆ ಪ್ರಸನ್ನಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.