ADVERTISEMENT

ನೂತನ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದ ಶಾಸಕ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:06 IST
Last Updated 7 ಆಗಸ್ಟ್ 2021, 2:06 IST
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿರುವ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿರುವ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಅಭಿನಂದಿಸಿದರು.   

ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹೊನ್ನಾಳಿ- ನ್ಯಾಮತಿ ಅವಳಿ ತಾಲ್ಲೂಕಿನ ಮುಖಂಡರೊಂದಿಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಸಚಿವ ಸ್ಥಾನ ನೀಡುವಂತೆ ಮುಖಂಡರೊಂದಿಗೆ ಬಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಲ್ಲ. ಬದಲಾಗಿ ಹೊನ್ನಾಳಿ– ನ್ಯಾಮತಿ ಅವಳಿ ತಾಲ್ಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಅವಳಿ ತಾಲ್ಲೂಕಿನ ಬಗ್ಗೆ ವಿಶೇಷವಾದ ಪ್ರೀತಿ ಹೊಂದಿದ್ದ ಕಾರಣ ಸಾಕಷ್ಟು ಅನುದಾನ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದರು. ಅದೇ ರೀತಿ ನಿಮ್ಮ ಅವಧಿಯಲ್ಲೂ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಯಿತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ನನಗೆ ಸಚಿವ ಸ್ಥಾನ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಕಾರ್ಯಕರ್ತರು ಯಾರೂ ಬೇಸರ ಮಾಡಕೊಳ್ಳಬಾರದು. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷ ಸಂಘಟನೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.

‘ನನಗೆ ನಮ್ಮ ಜನ್ಮಭೂಮಿ ಮತ್ತು ಕರ್ಮಭೂಮಿ ಎರಡೂ ನಮ್ಮ ಅವಳಿ ತಾಲ್ಲೂಕುಗಳು. ಅಧಿಕಾರ ನೀರ ಮೇಲಿನ ಗುಳ್ಳೆ ಇದ್ದಂತೆ. ಜನರು ಅವರ ಹೃದಯದಲ್ಲಿ ನನಗೆ ಸ್ಥಾನ ನೀಡಿದ್ದು, ನನ್ನ ಕೊನೆಯ ಉಸಿರು ಇರುವವರೆಗೂ ಚಿರಋಣಿಯಾಗಿರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.