ADVERTISEMENT

ತ್ರಿಪುರ ಕೋಮುಗಲಭೆಗೆ ಖಂಡನೆ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ತ್ರಿಪುರದಲ್ಲಿ ನಡೆದ ಕೋಮುಗಲಭೆ ಖಂಡಿಸಿ ಮುಸ್ಲಿಮರ ಅಂಗಡಿ ಬಂದ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 15:40 IST
Last Updated 12 ನವೆಂಬರ್ 2021, 15:40 IST
ತ್ರಿಪುರ ರಾಜ್ಯದಲ್ಲಿ ಮುಸ್ಲಿಮರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ‌‌‌ದಾವಣಗೆರೆಯಲ್ಲಿ ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ತ್ರಿಪುರ ರಾಜ್ಯದಲ್ಲಿ ಮುಸ್ಲಿಮರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ‌‌‌ದಾವಣಗೆರೆಯಲ್ಲಿ ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ತ್ರಿಪುರ ರಾಜ್ಯದಲ್ಲಿ ಕೋಮುಗಲಭೆ ವೇಳೆ ಮಸೀದಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ನಗರದ ಮುಸ್ಲಿಮರು ಶುಕ್ರವಾರ ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು.

ತ್ರಿಪುರದ ಘಟನೆಯನ್ನು ಖಂಡಿಸಿ ತಂಜಿಮುಲ್‌ ಮುಸ್ಲಿಮೀನ್‌ ಫಂಡ್‌ ಅಸೋಸಿಯೇಷನ್‌ ಕರೆ ನೀಡಿದಂತೆ ನಗರದ ಬಹುತೇಕ ಮುಸ್ಲಿಮರು ಬೆಳಿಗ್ಗೆಯಿಂದಲೇ ತಮ್ಮ ಅಂಗಡಿಗಳ ಬಾಗಿಲನ್ನು ತೆರೆಯದೇ, ‘ತ್ರಿಪುರದ ಮುಸ್ಲಿಮರ ಜೊತೆಗಿದ್ದೇವೆ’ ಎಂಬ ಸಂದೇಶವನ್ನು ಸಾರಿದರು. ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಹಳೇ ದಾವಣಗೆರೆ ಭಾಗದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣಗೊಂಡಿತ್ತು. ತ್ರಿಪುರದಲ್ಲಿ ಮಸೀದಿ ಹಾಗೂ ಮುಸ್ಲಿಮರ ಮೇಲೆ ದಾಳಿ ನಡೆಸಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ಕೂಗು ಪ್ರತಿಭಟನಾ ಸಭೆಯಲ್ಲಿ ಪ್ರತಿಧ್ವನಿಸಿತು.

ಮಧ್ಯಾಹ್ನ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿದ ಬಳಿಕ ಆಜಾದ್‌ನಗರ ಪೊಲೀಸ್‌ ಠಾಣೆ ಎದುರಿನ ಮಾಗಾನಹಳ್ಳಿ ರಸ್ತೆಯ ಮೈದಾನಕ್ಕೆ ನಗರದ ಮೂಲೆ ಮೂಲೆಗಳಿಂದ ಮುಸ್ಲಿಮರು ಸಾಗರೋಪಾದಿಯಲ್ಲಿ ಬಂದು ಸೇರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ತ್ರಿಪುರದ ಘಟನೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸುವ ನಾಮಫಲಕಗಳನ್ನು ಹಿಡಿದು ಗಮನ ಸೆಳೆದರು.

ADVERTISEMENT

ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ತ್ರಿಪುರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ಕೋಮುಗಲಭೆಗೆ ಕಾರಣವಾಯಿತು. ಪ್ರತಿಭಟನಕಾರರು ಮಸೀದಿಗಳ ಮೇಲೆ, ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಮಸೀದಿಯಲ್ಲಿದ್ದ ಧರ್ಮಗ್ರಂಥಗಳಿಗೆ ಬೆಂಕಿ ಹಚ್ಚಿಸಿದ್ದಾರೆ. ಇಂತಹ ಕೋಮುಗಲಭೆಗಳು ಜಾತಿ–ಧರ್ಮಗಳ ನಡುವೆ ನಡೆಯುತ್ತಿದ್ದರೆ ದೇಶದ ಪ್ರಗತಿಗೆ ಮಾರಕವಾಗಲಿದೆ ಎಂದು ಮುಸ್ಲಿಂ ಮುಖಂಡರು ಅಭಿಪ್ರಾಯಪಟ್ಟರು.

ತ್ರಿಪುರದಲ್ಲಿ ಪೊಲೀಸ್‌ ಇಲಾಖೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಮುಖಂಡರು ರಾಷ್ಟ್ರಪತಿಯನ್ನು ಒತ್ತಾಯಿಸಿದರು.

ದೇಶದಲ್ಲಿ ಕೆಲವರು ಅಧಿಕಾರದ ಚುಕ್ಕಾಣಿ ಹಿಡಿಯಲು ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯುವ ಜನತೆ ಪ್ರಚೋದನೆಗೆ ಒಳಗಾಗಿ ಹಿಂಸಾತ್ಮಕ ಕೃತ್ಯಗಳಿಗೆ ಕೈಹಾಕುತ್ತಿದ್ದಾರೆ. ಹಿಂಸಾತ್ಮಕ ಕೃತ್ಯಗಳಿಂದ ದೇಶದ ಜನರ ನೆಮ್ಮದಿ ಹಾಳಾಗುವುದರ ಜೊತೆಗೆ ಆಸ್ತಿ–ಜೀವಗಳಿಗೂ ಹಾನಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಗೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರಿಗೆ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದರು.

ಮುಸ್ಲಿಂ ಮುಖಂಡರಾದ ಸಾಧಿಕ್‌ ಪೈಲ್ವಾನ್‌, ಹನೀಫ್ ಮೌಲಾನಾ, ಆಯೂಬ್ ಪೈಲ್ವಾನ್, ಸಯ್ಯದ್ ಸೈಫುಲ್ಲಾ, ಅಮಾನುಲ್ಲಾ ಖಾನ್,ಅಬ್ದುಲ್ ಸಾಬ್ ಹಾಗೂ ತಂಜಿಮುಲ್‌ ಮುಸ್ಲಿಮೀನ್‌ ಫಂಡ್‌ ಅಸೋಸಿಯೇಷನ್‌ನ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.