ADVERTISEMENT

ದಾವಣಗೆರೆ | 'ಬಡ್ಡಿ ಸಹಿತ ಬಾಕಿ ವೇತನ ಪಾವತಿಸಿ'

ಹೊರಗುತ್ತಿಗೆ ನೌಕರರ ಏಜೆನ್ಸಿಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಾಕೀತು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:03 IST
Last Updated 16 ಏಪ್ರಿಲ್ 2025, 16:03 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಕಣ್ಣೀರು ಹಾಕಿದ ಮಹಿಳೆಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಸಮಾಧಾನಪಡಿಸಲು ಯತ್ನಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಕಣ್ಣೀರು ಹಾಕಿದ ಮಹಿಳೆಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಸಮಾಧಾನಪಡಿಸಲು ಯತ್ನಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿಸುವುದು ಏಜೆನ್ಸಿ ಜವಾಬ್ದಾರಿ. ನೆಪಗಳನ್ನು ಹೇಳಿ ವೇತನ ತಡೆಹಿಡಿಯುವುದನ್ನು ಸಹಿಸಲು ಸಾಧ್ಯವಿಲ್ಲ. ಬಾಕಿ ಉಳಿಸಿಕೊಂಡ ವೇತನವನ್ನು ಬಡ್ಡಿ ಸಹಿತ ಪಾವತಿಸಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾಧಿಕರಿ ಕಚೇರಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

‘ಜಗಳೂರು ತಾಲ್ಲೂಕು ಆಸ್ಪತ್ರೆಯ ಹೊರಗುತ್ತಿಗೆ ನೌಕರರಿಗೆ ಮೂರು ತಿಂಗಳಿಂದ ವೇತನ ಸಿಕ್ಕಿಲ್ಲ. ಬಾಕಿ ವೇತನಕ್ಕೆ ಏಜೆನ್ಸಿ ಲಂಚಕ್ಕ ಬೇಡಿಕೆ ಇಟ್ಟಿದೆ. ವೇತನ ಇಲ್ಲದೇ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಅಧಿಕಾರಿಗಳು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಎಂಥ ವ್ಯವಸ್ಥೆ’ ಎಂದು ಪ್ರಶ್ನಿಸಿದರು.

ADVERTISEMENT

‘ಪ್ರತಿ ನೌಕರರಿಗೆ ಸರ್ಕಾರ ₹ 18,000 ಕನಿಷ್ಠ ವೇತನ ಪಾವತಿಸುತ್ತಿದೆ. ಈ ಹಣದಲ್ಲಿ ಬಹುಪಾಲನ್ನು ಏಜೆನ್ಸಿಗಳು ಕಬಳಿಸುತ್ತಿರುವಂತೆ ಕಾಣುತ್ತಿದೆ. ನೌಕರರಿಗೆ ₹ 6,000ದಿಂದ ₹ 8,000 ಮಾತ್ರ ನೀಡುತ್ತಿವೆ. ಜಿಲ್ಲೆಯ ಎಲ್ಲ ಆಸ್ಪತ್ರೆಯಲ್ಲಿ ಇಂತಹ ವ್ಯವಸ್ಥೆ ಇರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ಬಸ್‌ ಸೌಲಭ್ಯಕ್ಕೆ ಸೂಚನೆ:

‘ಜಗಳೂರು ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಮೂಲಸೌಲಭ್ಯದಿಂದ ಬಳಲುತ್ತಿದೆ. ಕಡಿತಗೊಂಡ ವಿದ್ಯುತ್‌ ಸಂಪರ್ಕ ಎರಡು ದಿನಗಳಾದರೂ ಬರುವುದಿಲ್ಲ. ಸಾರಿಗೆ ಸೌಲಭ್ಯ ಇಲ್ಲದೇ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ ಅಪಾಯವಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಏನು ಸಮಸ್ಯೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಗ್ರಾಮಕ್ಕೆ ನಾಳೆಯಿಂದಲೇ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯುತ್‌ ಸಂಪರ್ಕಕ್ಕೆ ಅಗತ್ಯ ಪರಿವರ್ತಕ ಅಳವಡಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ಭರವಸೆ ನೀಡಿದರು.

19 ಮಹಿಳೆಯರ ಕೊಲೆ:

‘2023ರಿಂದ 2025ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 19 ಮಹಿಳೆಯರ ಕೊಲೆ ನಡೆದಿದೆ. 2023ರಲ್ಲಿ 3, 2024ರಲ್ಲಿ 11 ಹಾಗೂ 2025ರಲ್ಲಿ ಈವರೆಗೆ 5 ಮಹಿಳೆಯರು ಕೊಲೆಗೀಡಾಗಿದ್ದಾರೆ. ಕೌಟುಂಬಿಕ ಕಲಹ, ಅನೈತಿಕ ಸಂಬಂಧ, ಮದ್ಯ ವ್ಯಸನ ಸೇರಿ ಹಲವು ಕಾರಣಗಳಿಂದ ಈ ಕೊಲೆಗಳು ನಡೆದಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸಭೆಗೆ ಮಾಹಿತಿ ನೀಡಿದರು.

‘ಕಳೆದ ವರ್ಷ ಜಿಲ್ಲೆಯಲ್ಲಿ 93 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಹುತೇಕವು ಪ್ರೀತಿ–ಪ್ರೇಮಕ್ಕೆ ಸಂಬಂಧಪಟ್ಟವು. ಶಿಕ್ಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಒಂದೆರಡು ಪ್ರಕರಣ ನಡೆದಿವೆ. ಈ ಕುರಿತು ಜಾಗೃತಿ ಮೂಡಿಸಲು ಗಮನ ಹರಿಸುತ್ತೇವೆ’ ಎಂದು ಹೇಳಿದರು.

ಕಣ್ಣೀರು ಹಾಕಿದ ಮಹಿಳೆ ‘₹ 30 ದಿನಗೂಲಿ ಕೊಡುತ್ತಿದ್ದ ಕಾಲದಿಂದಲೂ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. 20 ವರ್ಷಕ್ಕೂ ಹೆಚ್ಚು ಸೇವಾ ಅನುಭವ ಇದೆ. ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿದೆ. ಬದುಕಿಗೆ ಆಸರೆಯಾಗಿದ್ದ ಉದ್ಯೋಗ ಕಳೆದುಕೊಂಡು ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದೇನೆ..’ ಎಂದ ದುಗ್ಗಮ್ಮ ಕೈಮುಗಿದು ಬಿಕ್ಕಿ ಬಿಕ್ಕಿ ಅತ್ತರು. ಮಹಿಳೆಯನ್ನು ಸಮಾಧಾನಪಡಿಸಿದ ನಾಗಲಕ್ಷ್ಮಿ ಚೌಧರಿ ‘ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಏಕಾಏಕಿ ತೆಗೆದುಹಾಕುವುದು ಸರಿಯಲ್ಲ. ಏಜೆನ್ಸಿ ಬದಲಾದರೂ ಅನುಭವ ಇರುವವರನ್ನು ಪರಿಗಣಿಸಬೇಕು. ಮಹಿಳೆಯನ್ನು ಮತ್ತೆ ನೇಮಕ ಮಾಡಿಕೊಳ್ಳಿ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗೇಂದ್ರಪ್ಪ ಅವರಿಗೆ ತಾಕೀತು ಮಾಡಿದರು.

ವಿವಾಹಪೂರ್ವ ಸಮಾಲೋಚನಾ ಕೇಂದ್ರ ‘ಕೌಟುಂಬಿಕ ಕಲಹದ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹ ಪೂರ್ವ ಸಮಾಲೋಚನೆ ನಡೆಸಿದರೆ ಅನುಕೂಲ ಎಂಬುದು ರಾಷ್ಟ್ರೀಯ ಮಹಿಳಾ ಆಯೋಗದ ಸಲಹೆ. ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಸಮಾಲೋಚನಾ ಕೇಂದ್ರ ತೆರೆಯಬೇಕಿದೆ. ಇದು ದಾವಣಗೆರೆಯಿಂದಲೇ ಆರಂಭವಾಗಲಿ’ ಎಂದು ನಾಗಲಕ್ಷ್ಮಿ ಚೌಧರಿ ಸೂಚನೆ ನೀಡಿದರು. ‘ಮಧುವೆಗೂ ಮುನ್ನ ವಧು–ವರ ಹಾಗೂ ಕುಟುಂಬದ ಸದಸ್ಯರನ್ನು ಸಮಾಲೋಚನೆಗೆ ಒಳಪಡಿಸಬೇಕಿದೆ. ಅತ್ತೆ ಮಾವ ನಾದಿನಿ ಸೇರಿ ಹಲವರಿಗೆ ಅರಿವು ಮೂಡಿಸುವ ಅಗತ್ಯವಿದೆ. ಇದರಿಂದ ಕೌಟುಂಬಿಕ ಕಲಹ ನಿಯಂತ್ರಣ ಸಾಧ್ಯವಿದೆ’ ಎಂದು ಹೇಳಿದರು.

‘ಅಕ್ರಮ ಮದ್ಯ ಮಾರಾಟ ನಿಯಂತ್ರಿಸಿ’ ‘ಜಿಲ್ಲೆಯ ಗ್ರಾಮೀಣ ಪ್ರದೇಶದ ಎಲ್ಲೆಂದರಲ್ಲಿ ಸಿಗುತ್ತಿರುವ ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಕಡಿವಾಣ ಹಾಕಬೇಕು’ ಎಂದು ನಾಗಲಕ್ಷ್ಮಿ ಚೌಧರಿ ಸೂಚನೆ ನೀಡಿದರು. ‘ಕೆಲ ಗ್ರಾಮಗಳಲ್ಲಿ ಚಿಕ್ಕ ಅಂಗಡಿಗಳಲ್ಲಿ ಮದ್ಯ ಸಿಗುತ್ತಿದೆ. ಮದ್ಯ ಸೇವನೆ ಮಾಡುವ ಪುರುಷರಿಂದ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸುಲಭವಾಗಿ ಮದ್ಯ ಲಭ್ಯ ಆಗುತ್ತಿರುವುದರಿಂದ ಮಕ್ಕಳು ಕೂಡ ದಾರಿತಪ್ಪುವ ಅಪಾಯವಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮದ್ಯ ಅಕ್ರಮ ಮಾರಾಟ ನಿಯಂತ್ರಿಸುವುದು ಸೂಕ್ತ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.