ADVERTISEMENT

ವೈದ್ಯರಲ್ಲಿ ಮಾಯವಾದ ಸೇವಾ ಮನೋಭಾವ

ಖಾಸಗಿ ನರ್ಸಿಂಗ್‌ಹೋಂಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ವೈದ್ಯರು

ಎಚ್.ವಿ.ನಟರಾಜ್
Published 6 ಏಪ್ರಿಲ್ 2022, 4:40 IST
Last Updated 6 ಏಪ್ರಿಲ್ 2022, 4:40 IST
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಎಸ್‌ಡಿಎಲ್‌ನಿಂದ ₹80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಎಸ್‌ಡಿಎಲ್‌ನಿಂದ ₹80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ.   

ಚನ್ನಗಿರಿ: ತಾಲ್ಲೂಕು 61 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ 23 ಸರ್ಕಾರಿ ಪ್ರಾಥಮಿಕ ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳು ಸೇರಿ ಒಟ್ಟು 25 ಆರೋಗ್ಯ ಕೇಂದ್ರಗಳು ಇವೆ. ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರಲ್ಲಿ ಸೇವಾ ಮನೋಭಾವನೆಯ ಕೊರತೆಯಿಂದಾಗಿ ಬಡ ವರ್ಗದ ಜನರು ಚಿಕಿತ್ಸೆ ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರದಿಂದ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾದ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೂ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವು ವೈದ್ಯರು ಅವರದ್ದೇ ಕ್ಲಿನಿಕ್‌ ಹೊಂದಿದ್ದಾರೆ. ತೀವ್ರತರ ರೋಗಗಳಿಗೆ ಚಿಕಿತ್ಸೆಯನ್ನು ನೀಡದೇ ದೂರದ ಶಿವಮೊಗ್ಗ, ದಾವಣಗೆರೆ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ.

ತಾಲ್ಲೂಕಿನಲ್ಲಿ ಇರುವ ಒಟ್ಟು 25 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇಲ್ಲ. ಪಟ್ಟಣದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 13 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಕ್ಕಳ ತಜ್ಞ ವೈದ್ಯರ ಅವಶ್ಯಕತೆ ಇದೆ. ಎಲ್ಲ ಆಸ್ಪತ್ರೆಗಳಲ್ಲೂ ಗುತ್ತಿಗೆ ಆಧಾರದ ಮೇಲೆ ದಾದಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಚನ್ನಗಿರಿ ಪಟ್ಟಣ ಹಾಗೂ ಸಂತೇಬೆನ್ನೂರು ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿವೆ.

ADVERTISEMENT

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದ್ದಾರೆ. ಆದರೂ ಮಧ್ಯಾಹ್ನದ ನಂತರ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಹೋದರೆ ವೈದ್ಯರೇ ಇರುವುದಿಲ್ಲ. ಈ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ವೈದ್ಯರು ಖಾಸಗಿ ನರ್ಸಿಂಗ್ ಹೋಂಗಳನ್ನು ಮಾಡಿಕೊಂಡಿದ್ದಾರೆ. ಮಧ್ಯಾಹ್ನ 1.30ರ ನಂತರ ಯಾವ ವೈದ್ಯರೂ ಸಿಗುವುದಿಲ್ಲ. ಬೆಳಿಗ್ಗೆ 10.30ಕ್ಕೆ ಆರೋಗ್ಯ ಕೇಂದ್ರಗಳಿಗೆ ಬಂದು ಬಯೋ ಮೆಟ್ರಿಕ್ ನೀಡಿ, ಮಧ್ಯಾಹ್ನ 1.30 ವರೆಗೆ ಕಾರ್ಯನಿರ್ವಹಿಸಿ, ನಂತರ ಮಾಯವಾಗಿ ಬಿಡುತ್ತಾರೆ. ಇಬ್ಬರು ವೈದ್ಯರು ಮಾತ್ರ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿಯ ವೇಳೆ ಚಿಕಿತ್ಸೆಗೆಂದು ಹೋದರೆ ದಾದಿಯರೇ ಚಿಕಿತ್ಸೆ ನೀಡುತ್ತಾರೆ ಎನ್ನುತ್ತಾರೆ ಪುರಸಭೆಯ ಸದಸ್ಯ ಜಿ. ನಿಂಗಪ್ಪ.

‘ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ದಾದಿಯರ ಕೊರತೆ ಇದೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ ನಮ್ಮ ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುವ
ಮೂಲಕ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ. ವಡ್ನಾಳ್ ಗ್ರಾಮದಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಕ್ಕೆ ಸಂಪುಟ ಸಭೆ ಅನುಮತಿಯನ್ನು ನೀಡಿಲ್ಲ. ಹಾಗಾಗಿ ಇನ್ನು ಲೋಕಾರ್ಪಣೆಯಾಗಿಲ್ಲ. ಕರೇಕಟ್ಟೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣ ಕಾರ್ಯ ಜಾಗದ ಸಮಸ್ಯೆಯಿಂದಾಗಿ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಸಮಸ್ಯೆ ನಿವಾರಣೆಯಾಗಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭು ತಿಳಿಸಿದರು.

ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ 100 ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವಿದೆ. 75 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ಯಾವುದೇ ಕೊರತೆ ಇಲ್ಲದಂತೆ ಆರೋಗ್ಯ ಕೇಂದ್ರ ನಡೆಯುತ್ತಿದೆ. ಆದರೂ ಕೆಲವೊಮ್ಮೆ ಚಿಕಿತ್ಸೆಗೆಂದು ಬರುವ ರೋಗಿಗಳ ಕುಟುಂಬದವರು ತಾಳ್ಮೆಯನ್ನು ಕಳೆದುಕೊಂಡು ವೈದ್ಯರ ಮೇಲೆಯೇ ಹಲ್ಲೆ ಮಾಡುತ್ತಾರೆ. ಹೀಗಾಗಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಹಿಂದೇಟು ಹಾಕುವಂತಾಗಿದೆ ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯ ಡಾ. ರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ ಕೊರತೆ ಇಲ್ಲ

ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭ ಮಾಡಲಾಗಿದೆ. 60 ಸಿಲಿಂಡರ್, 57 ಕಾನ್ಸನ್‌ಟ್ರೇಟರ್‌ಗಳನ್ನು ನೀಡಲಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ 1 ಆಂಬುಲೆನ್ಸ್ ವಾಹನವನ್ನು ಕೂಡ ಒದಗಿಸಲಾಗಿದೆ. ಒಟ್ಟು 4 ವಾಹನಗಳು ಪಟ್ಟಣದ ಆರೋಗ್ಯ ಕೇಂದ್ರದಲ್ಲಿವೆ. ಜನೌಷಧಿ ಕೇಂದ್ರ ಸೇರಿ ಎಲ್ಲ ರೀತಿಯ ಸೌಕರ್ಯಗಳಿವೆ. ನುಗ್ಗಿಹಳ್ಳಿ, ಮಾವಿನಕಟ್ಟೆ, ಸಂತೇಬೆನ್ನೂರು, ತಾವರೆಕೆರೆ, ಗೊಪ್ಪೇನಹಳ್ಳಿ, ಕೆರೆಬಿಳಚಿ, ಕೋಗಲೂರು, ತಣಿಗೆರೆ, ಚಿಕ್ಕಗಂಗೂರು, ಕೊಂಡದಹಳ್ಳಿ, ಕಗತೂರು, ನಲ್ಲೂರು, ಹೆಬ್ಬಳಗೆರೆ, ಹೊದಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ಪ್ರಾಮಾಣಿಕವಾಗಿ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಇದ್ದಾರೆ. ಕೆಲವೊಂದು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ ಎಂಬ ದೂರುಗಳು ಇವೆ. ಅದೇ ರೀತಿ ಸರ್ಕಾರಿ ವೈದ್ಯರ ಮೇಲೆ ಹಲ್ಲೆ ಮಾಡುವುದನ್ನು ಜನರು ಬಿಡಬೇಕು ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಲಹೆ ನೀಡಿದ್ದಾರೆ.

ಪಟ್ಟಣದಲ್ಲಿ 250 ಹಾಸಿಗೆ ಸಾಮರ್ಥ್ಯವುಳ್ಳ ವಿಭಾಗೀಯ ಆಸ್ಪತ್ರೆ ಪ್ರಾರಂಭಿಸಲು ಸಂಪುಟ ಸಭೆ ಅನುಮೋದನೆಯನ್ನು ನೀಡಿದೆ. ವಿಭಾಗೀಯ ಆಸ್ಪತ್ರೆ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಗಿದೆ. ಈ ಆಸ್ಪತ್ರೆ ಆರಂಭವಾದರೆ ಜನರು ಶಿವಮೊಗ್ಗ, ದಾವಣಗೆರೆಗೆ ಹೋಗುವುದು ತಪ್ಪಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.