ಬಸವನಹಳ್ಳಿ (ನ್ಯಾಮತಿ): ಕುರುವ ಗಡ್ಡೆ ರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಾದನಬಾವಿ ಗ್ರಾಮಸ್ಥರು ಬೀರಲಿಂಗೇಶ್ವರಸ್ವಾಮಿ, ರಂಗನಾಥಸ್ವಾಮಿ, ಮುರುಡಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪಕ್ಕದ ಬಸವನಹಳ್ಳಿ ಗ್ರಾಮದ ಮುಖಾಂತರ ಮೆರವಣಿಗೆ ಮೂಲಕ ತೆರಳುವಾಗ ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆದಿದೆ.
ರಥೋತ್ಸವದ ನಂತರ ಮಾದನಬಾವಿ ಗ್ರಾಮಸ್ಥರು ಬಸವನಹಳ್ಳಿ ಮೂಲಕವೇ ಮರಳಿ ಬರುವುದು ವಾಡಿಕೆ. ಮಾದನಬಾವಿ ಗ್ರಾಮಸ್ಥರನ್ನು ತಡೆಯುವ ಸಲುವಾಗಿ ಬಸವನಹಳ್ಳಿ ಗ್ರಾಮಸ್ಥರು ಗುಂಪುಗೂಡಿದ್ದರಿಂದ ಎರಡೂ ಗ್ರಾಮಗಳಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ.
ಎರಡು ಗ್ರಾಮಗಳ ಮಧ್ಯೆ ದೇವರ ವಿಚಾರದಲ್ಲಿ ತಲೆತಲಾಂತರದಿಂದ ತಕರಾರು ಇದೆ. ‘ಯುಗಾದಿ ಚಂದ್ರದರ್ಶನ ನಂತರ ಗಡ್ಡೆ ರಾಮೇಶ್ವರಕ್ಕೆ ಉತ್ಸವ ಮೂರ್ತಿಗಳನ್ನು ಬಸವನಹಳ್ಳಿ ಮೂಲಕ ತೆಗೆದುಕೊಂಡು ಹೋಗುತ್ತೇವೆ. ಆ ವಿಚಾರವಾಗಿ ಬಸವನಹಳ್ಳಿ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ’ ಎಂದು ಮಾದನಬಾವಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಮಾದನಬಾವಿ ಗ್ರಾಮಸ್ಥರು ಗ್ರಾಮದ ಮೂಲಕ ತೆರಳುವಾಗ ಗಲಾಟೆ ಮಾಡಿದರು ಎಂದು ಬಸವನಹಳ್ಳಿ ಗ್ರಾಮಸ್ಥರು ಪ್ರತ್ಯಾರೋಪ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಿ. ಬಸರಂಗಿ, ಚನ್ನಗಿರಿ ಸಿಪಿಐ ಮಧು, ಹರಿಹರ ಸಿಪಿಐ ಸತೀಶ, ಹೊನ್ನಾಳಿ ಎಸ್‌ಐ ಬಸವನಗೌಡ, ನ್ಯಾಮತಿ ಎಸ್‌ಐ ಪಿ.ಎಸ್. ರಮೇಶ, ಹದಡಿ ಎಸ್‌ಐ ರೂಪಾ ತೆಂಬದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.