ADVERTISEMENT

ಮಲೇಬೆನ್ನೂರು: ಅಚ್ಚುಕಟ್ಟು ಪ್ರದೇಶದಲ್ಲಿ ಆರಂಭಗೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 5:18 IST
Last Updated 7 ಜನವರಿ 2022, 5:18 IST
ಮಲೇಬೆನ್ನೂರು ಶಾಖಾ ನಾಲಾ ವ್ಯಾಪ್ತಿಯ ಎಕ್ಕೆಗೊಂದಿ ಬಳಿ ಬೇಸಿಗೆ ಭತ್ತದ ಬೆಳೆ ಬೆಳೆಯಲು ಸಸಿ ಮಡಿ ತಯಾರಿಕೆಗೆ ಬೀಜ ಚೆಲ್ಲುತ್ತಿರುವ ರೈತರು.
ಮಲೇಬೆನ್ನೂರು ಶಾಖಾ ನಾಲಾ ವ್ಯಾಪ್ತಿಯ ಎಕ್ಕೆಗೊಂದಿ ಬಳಿ ಬೇಸಿಗೆ ಭತ್ತದ ಬೆಳೆ ಬೆಳೆಯಲು ಸಸಿ ಮಡಿ ತಯಾರಿಕೆಗೆ ಬೀಜ ಚೆಲ್ಲುತ್ತಿರುವ ರೈತರು.   

ಮಲೇಬೆನ್ನೂರು: ಭದ್ರಾ ಜಲಾಶಯದಿಂದ ಪ್ರಸಕ್ತ ಬೇಸಿಗೆ ಹಂಗಾಮಿಗೆ ಭದ್ರಾನಾಲೆಗೆ ನೀರು ಬಿಡುಗಡೆ ಮಾಡಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಹೊಳೆಸಾಲು ಹಾಗೂ ದೇವರಬೆಳೆಕೆರೆ ಪಿಕಪ್ ಅಚ್ಚುಕಟ್ಟು, ಭದ್ರಾ ನಾಲಾ ವ್ಯಾಪ್ತಿ ಅಚ್ಚುಕಟ್ಟಿನ ಹಡ್ಲು, ತೋಟ, ತಗ್ಗು ಪ್ರದೇಶದ ಜಮೀನು ಮತ್ತು ಕೊಳವೆಬಾವಿ ವ್ಯವಸ್ಥೆ ಇದ್ದ ರೈತರು ಈಗಾಗಲೇ ಸಸಿ ತಯಾರಿಯಲ್ಲಿದ್ದಾರೆ.

ಭತ್ತದ ಬೆಳೆಯಲು ತಯಾರಿ ಅಗತ್ಯ. ಜ. 15ರ ನಂತರ ನಾಲೆ ನೀರು ಬೇಕು ಎಂದು ರೈತರಾದ ಹೊಳೆಸಿರಿಗೆರೆ ಬಸವನಗೌಡ, ಜಿಗಳಿ ಮಲ್ಲಪ್ಪ, ಹನುಮಗೌಡ ಜಿ.ಪಿ. ನಂದಿತಾವರೆ ಶಂಭಣ್ಣ ತಿಳಿಸಿದರು.

ADVERTISEMENT

ಸಣ್ಣ ಭತ್ತದ ಮಾದರಿ ಶ್ರೀರಾಮ್ ಸೋನಾ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಹಾಗೂ ಹೆಚ್ಚು ಬೆಲೆ. ಈ ಭಾಗದಲ್ಲಿ ಈ ಭತ್ತಕ್ಕೆ ಬೇಡಿಕೆ ಹೆಚ್ಚು ಎಂದು ಪ್ರಗತಿಪರ ರೈತರಾದ ಎಕ್ಕೆಗೊಂದಿ ಬಸವನಗೌಡ, ನಿಟ್ಟೂರು ನಾಗೇಂದ್ರಪ್ಪ, ಬೂದಾಳು ಬಸಣ್ಣ ಮಾಹಿತಿ ನೀಡಿದರು.

ಜಲಾಶಯ ಭರ್ತಿ- ನಾಲೆ ದುರಸ್ತಿ: ಪ್ರಸಕ್ತ ಹಂಗಾಮಿನಲ್ಲಿ ಭದ್ರಾ ಜಲಾಶಯ ಭರ್ತಿಯಾಗಿದ್ದು, ನೀರಿನ ಸಮಸ್ಯೆ ಇಲ್ಲ ಎನ್ನುವ ಆಶಾಭಾವ ಇಟ್ಟುಕೊಂಡಿರುವ ಅಚ್ಚುಕಟ್ಟಿನ ಕೊನೆಭಾಗದ ರೈತ ಸಮೂಹ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದೆ.

ಆದರೆ, ನಾಲೆ ಕಟ್ಟಡ ದುರಸ್ತಿ ಹಾಗೂ ಹೂಳು ಎತ್ತಿಸದ ಕಾರಣ ನಾಲೆ ನೀರು ಸುಲಲಿತವಾಗಿ ಕೊನೆಭಾಗ ತಲುಪುವುದು ಕಷ್ಟ. ಮುಖ್ಯ ನಾಲೆ, ಉಪನಾಲೆ ಹೊಲ ಗಾಲುವೆಗಳು ಹಾಳಾಗಿವೆ. ಭದ್ರಾ ನಾಲೆ ನೀರು ಕೊನೆಯ ಭಾಗ ತಲುಪಬೇಕೆಂದರೆ ರೈತರು ಹೋರಾಟ ಮಾಡಲೇಕಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ. ಪ್ರಭುಗೌಡ, ಹೊಳೆಸಿರಿಗೆರೆ ಫಾಲಾಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.