ADVERTISEMENT

ಹಸಿರು ನಿಶಾನೆ ಸಿಕ್ಕರೂ ಸಿನಿಮಾ ಪ್ರದರ್ಶನವಿಲ್ಲ

ಸ್ಟಾರ್ ನಟರ ಸಿನಿಮಾ ಬಿಡುಗಡೆಗೆ ಕಾದಿರುವ ಚಿತ್ರಮಂದಿರ ಮಾಲೀಕರು

ಡಿ.ಕೆ.ಬಸವರಾಜು
Published 20 ಜುಲೈ 2021, 6:04 IST
Last Updated 20 ಜುಲೈ 2021, 6:04 IST
ದಾವಣಗೆರೆಯಲ್ಲಿ ಚಿತ್ರಮಂದಿರಗಳು ಆರಂಭಗೊಂಡಿಲ್ಲ.
ದಾವಣಗೆರೆಯಲ್ಲಿ ಚಿತ್ರಮಂದಿರಗಳು ಆರಂಭಗೊಂಡಿಲ್ಲ.   

ದಾವಣಗೆರೆ:ಕೋವಿಡ್‌ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿ ಚಿತ್ರಮಂದಿರ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದರೂ ನಗರದ ಥಿಯೇಟರ್‌ ಮಾಲೀಕರು ಉತ್ಸಾಹ ತೋರಿಲ್ಲ.

ಶೇ 50ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೂ ನಗರದ ಚಿತ್ರಮಂದಿರಗಳು ಚಿತ್ರ ಪ್ರದರ್ಶನಕ್ಕೆ ಸಜ್ಜುಗೊಳಿಸಿಲ್ಲ.ಪ್ರೇಕ್ಷಕರ ಸಂಖ್ಯೆಯನ್ನು ನಿರ್ಬಂಧಿಸಿರುವ ಕಾರಣ ಸದ್ಯಕ್ಕೆ ಹೊಸ ಚಿತ್ರಗಳ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಶುಕ್ರವಾರದಿಂದ ಹಳೆಯ ಚಿತ್ರಗಳು ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

ನಗರದಲ್ಲಿ ಥಿಯೇಟರ್‌ಗಳ ಪ್ರವೇಶ ದ್ವಾರಕ್ಕೆ ಹಲವು ತಿಂಗಳ ಹಿಂದೆ ಹಾಕಿರುವ ಬೀಗ ಈಗಲೂ ಹಾಗೆಯೇ ಇದೆ. ಭದ್ರತಾ ಸಿಬ್ಬಂದಿ ಬಿಟ್ಟರೆ ಅಲ್ಲಿ ಬೇರೆ ಯಾರೊಬ್ಬರೂ ಕಾಣಿಸಲಿಲ್ಲ. ಕೊರೊನಾ ಎರಡನೇ ಅಲೆಯಿಂದಾಗಿ 14 ವಾರಗಳ ಕಾಲ ಚಿತ್ರಮಂದಿರಗಳು ಬಂದ್‌ ಆಗಿದ್ದು, ಬಾಡಿಗೆ, ವಿದ್ಯುತ್ ಬಿಲ್ ಹಾಗೂ ನಿರ್ವಹಣೆ ಮಾಡಲಾರದೇ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ADVERTISEMENT

ಕೊರೊನಾ ಮೊದಲನೇ ಅಲೆಯ ಬಳಿಕ ‘ಪೊಗರು’, ‘ಯುವರತ್ನ’ ಹಾಗೂ ‘ರಾಬರ್ಟ್‌’ ಚಿತ್ರಗಳಿಂದ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೊಮ್ಮೆ ಲಾಕ್‌ಡೌನ್ ಘೋಷಣೆಯಿಂದಾಗಿ ಜನರು ಥಿಯೇಟರ್‌ಗಳತ್ತ ಮುಖ ಮಾಡಬೇಕು ಎಂದರೆ ಸ್ವಲ್ಪ ದಿವಸ ಕಾಯಬೇಕು.

‘ಲಾಕ್‌ಡೌನ್ ಅವಧಿಯಲ್ಲಿ ಚಿತ್ರಗಳು ಪ್ರದರ್ಶನಗೊಳದಿದ್ದರೂ ಕನಿಷ್ಠ ವಿದ್ಯುತ್ ಬಾಡಿಗೆಯನ್ನು ಕಟ್ಟಲೇಬೇಕು. ಜಿಎಸ್‌ಟಿಯಲ್ಲಿ ವಿನಾಯಿತಿ ಕೇಳಿದ್ದೇವೆ. ಅದು ಯಾವ ರೀತಿ ನಿರ್ಧಾರವಾಗುತ್ತೋ ಗೊತ್ತಿಲ್ಲ’ ಎನ್ನುತ್ತಾರೆ ಗೀತಾಂಜಲಿ ಥಿಯೇಟರ್ ಮ್ಯಾನೇಜರ್‌ ಎಚ್‌.ಬಿ. ಮಹದೇವಗೌಡ.

‘ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಿ ದಿನಕ್ಕೆ ನಾಲ್ಕು ಪ್ರದರ್ಶನಗೊಂಡರೆ ಮಾತ್ರ ನಿರ್ವಹಣೆ ಸುಲಭವಾಗುತ್ತದೆ’ ಎನ್ನುತ್ತಾರೆ ಅವರು.

‘ಥಿಯೇಟರ್ ನಿರ್ವಹಣೆಗೆ ತಿಂಗಳಿಗೆ ₹ 2 ಲಕ್ಷ ಬೇಕಾಗುತ್ತದೆ. ವಿದ್ಯುತ್ ಕನಿಷ್ಠ ಬಿಲ್ ತಿಂಗಳಿಗೆ
₹ 8 ಸಾವಿರ ಬರುತ್ತದೆ. ಕೆಲಸಗಾರರಿಗೆ ಅರ್ಧ ಸಂಬಳ ನೀಡುತ್ತಿದ್ದೇವೆ. ಇದು ನಮಗೆ ಹೊರೆಯಾಗಿದೆ.ಜನ ಥಿಯೇಟರ್ ಕಡೆ ಮುಖ ಮಾಡಬೇಕು. ಮೂರು ತಿಂಗಳಾದರೂ ಬೇಕು. ಹಳೇ ಸಿನಿಮಾ ಪ್ರದರ್ಶನ ಮಾಡಿದರೆ ನಮಗೆ ನಷ್ಟವೇ ಹೆಚ್ಚು’ ಎಂದು ಹೇಳುತ್ತಾರೆ. ಥಿಯೇಟರ್ ಮಾಲೀಕರು ‘ಸಲಗ’, ‘ಕೋಟಿಗೊಬ್ಬ–3’, ‘ಭಜರಂಗಿ–2’, ‘ಕೆಜಿಎಫ್‌–2’, ‘ವಿಕ್ರಾಂತ್‌ ರೋಣ’ದಂತಹ ಬಿಗ್‌ ಬಜೆಟ್‌ ಚಿತ್ರಗಳು ಬಿಡುಗಡೆಯಾದರೆ ಮಾಲೀಕರ ಸಂಕಷ್ಟಗಳಿಗೆ ಪರಿಹಾರ ಸಿಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.