ADVERTISEMENT

ಬ್ಯಾನರ್‌ಗಳ ಹಾವಳಿಗೆ ಲಂಗು–ಲಗಾಮಿಲ್ಲ!

ಶುಭಕೋರುವ ಫ್ಲೆಕ್ಸ್‌ಗಳಿಂದ ಮರೆಯಾದ ಪಾಲಿಕೆ ಕಚೇರಿ; ನಿಷೇಧಿತ ಪ್ಲಾಸ್ಟಿಕ್‌ ಬಳಕೆ

ಬಾಲಕೃಷ್ಣ ಪಿ.ಎಚ್‌
Published 6 ಜುಲೈ 2022, 4:32 IST
Last Updated 6 ಜುಲೈ 2022, 4:32 IST
ದಾವಣಗೆರೆ ನಗರದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಹಾಕಿರುವ ಫ್ಲೆಕ್ಸ್‌ಗಳು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆ ನಗರದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಹಾಕಿರುವ ಫ್ಲೆಕ್ಸ್‌ಗಳು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್   

ದಾವಣಗೆರೆ: ಮಣ್ಣಲ್ಲಿ ಕರಗದ ಪ್ಲಾಸ್ಟಿಕ್‌ ಅನ್ನು ಒಂದು ಕಡೆ ಸರ್ಕಾರ ನಿಷೇಧಿಸಿದೆ.ಆದರೆ, ಸರ್ಕಾರ ಜಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಜಾಹೀರಾತುಗಳು, ಜನಪ್ರತಿನಿಧಿಗಳಿಗೆ ಶುಭ ಕೋರುವ ಫ್ಲೆಕ್ಸ್‌ ಬೋರ್ಡ್‌ಗಳು ನಿಷೇಧಿತ ಪ್ಲಾಸ್ಟಿಕ್‌ನಲ್ಲೇ ತಯಾರಾಗಿವೆ. ಇವುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾದ ಮಹಾನಗರ ಪಾಲಿಕೆಯ ಕಚೇರಿಯೇ ಇಂತಹ ಫ್ಲೆಕ್ಸ್‌ಗಳ ಮಧ್ಯೆ ಮುಚ್ಚಿ ಹೋಗಿ, ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಉಂಟಾಗಿದೆ.

ಫ್ಲೆಕ್ಸ್‌, ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಬೇಕಿದ್ದರೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿರಬೇಕು. ಅನುಮತಿಗೆ ನೀಡುವ ಸಂಖ್ಯೆಯನ್ನು ಫ್ಲೆಕ್ಸ್‌, ಬ್ಯಾನರ್‌ಗಳಲ್ಲಿ ನಮೂದಿಸಬೇಕು. ಆದರೆ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿ ಬೀದಿಗಳಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಈ ಸಂಖ್ಯೆಗಳಿಲ್ಲ.

ಜೂನ್‌, ಜುಲೈ ತಿಂಗಳಲ್ಲಂತೂ ಪ್ರಮುಖ ಜನಪ್ರತಿನಿಧಿಗಳ, ರಾಜಕೀಯ ಮುಖಂಡರ ಜನ್ಮದಿನಗಳು ಬಂದಿರುವುದರಿಂದ ಇವುಗಳ ಹಾವಳಿ ಇನ್ನಷ್ಟು ಹೆಚ್ಚಾಗಿದೆ.

ADVERTISEMENT

‘ಫ್ಲೆಕ್ಸ್‌, ಬ್ಯಾನರ್‌ಗಳನ್ನು ನಿಷೇಧಿಸಬೇಕು ಎಂದು ನಾವು ಹಲವು ಬಾರಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜುಲೈ 1ರಿಂದ ಸರ್ಕಾರವೇ ಪ್ಲಾಸ್ಟಿಕ್‌ ನಿಷೇಧಿಸಿದೆ. ಆದರೆ, ಇಲ್ಲಿ ಆ ನಿಷೇಧದ ಆದೇಶ ಜಾರಿಯಾಗಿಲ್ಲ. ಈಗ ಅಳವಡಿಸುತ್ತಿರುವ ಬ್ಯಾನರ್‌, ಫ್ಲೆಕ್ಸ್‌ಗಳು ಹೆಚ್ಚಿನವು ಅನಧಿಕೃತವಾಗಿವೆ. ಎಲ್ಲವನ್ನೂ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಮುಂದೆ ಅನಧಿಕೃತವಾಗಿ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂಬುದು ಪಾಲಿಕೆಯ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರೂ ಆಗಿರುವ ಪರಿಸರ ಪ್ರೇಮಿಗಳ ಸಂಘದ ಗಿರೀಶ್‌ ದೇವರಮನೆ ಒತ್ತಾಯವಾ‌ಗಿದೆ.

‘ಮಂಗಳವಾರ ನಗರದ ಫ್ಲೆಕ್ಸ್‌, ಬಂಟಿಂಗ್ಸ್‌, ಬ್ಯಾನರ್‌ ತಯಾರಕರ ಸಭೆ ಕರೆದು, ಎಲ್ಲಾದರೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಯಿಂದ ಅನುಮತಿ ಪಡೆಯದೇ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಿದರೆ, ಅದರಲ್ಲಿ ಶುಭಕೋರಿರುವ ವ್ಯಕ್ತಿ, ಸಂಘ–ಸಂಸ್ಥೆಗಳನ್ನೇ ಜವಾಬ್ದಾರರನ್ನಾಗಿ ಮಾಡಿ ದಂಡ ವಿಧಿಸಲಾಗುವುದು. ಅನಧಿಕೃತವಾಗಿ ಇರುವಂಥ ಬ್ಯಾನರ್‌ ಗುರುತಿಸಿ ತೆರವುಗೊಳಿಸಲು, ಅಳವಡಿಸಿದವರ ಮೇಲೇ ಕ್ರಮ ಕೈಗೊಳ್ಳಲು ನಮ್ಮಸಿಬ್ಬಂದಿಗೆ ತಿಳಿಸಿದ್ದೇನೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.