ADVERTISEMENT

5 ಸಾವಿರ ಹಿಮೋಫಿಲಿಯಾ ರೋಗಿಗಳಿಗಿಲ್ಲ ಸೌಲಭ್ಯ

ರಾಜ್ಯದಲ್ಲಿ 588 ಮಂದಿಗಷ್ಟೇ ಅಂಗವಿಕಲರ ಸವಲತ್ತು

ಡಿ.ಕೆ.ಬಸವರಾಜು
Published 17 ಫೆಬ್ರುವರಿ 2020, 5:46 IST
Last Updated 17 ಫೆಬ್ರುವರಿ 2020, 5:46 IST
ಡಾ.ಸುರೇಶ್, ಹನಗವಾಡಿ
ಡಾ.ಸುರೇಶ್, ಹನಗವಾಡಿ   

ದಾವಣಗೆರೆ: ಹಿಮೋಫಿಲಿಯಾ ರೋಗಿಗಳ ರಕ್ತ ಪರೀಕ್ಷೆ ಮಾಡುವ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ. ಈ ಸೌಲಭ್ಯ ಇಲ್ಲದೇ ಇರುವುದರಿಂದ, ಐದು ಸಾವಿರಕ್ಕೂ ಹೆಚ್ಚು ಮಂದಿಅಂಗವಿಕಲರಿಗೆ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ 2019ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಹಿಮೋಫಿಲಿಯಾ ರೋಗಿಗಳಿದ್ದಾರೆ. ಅವರಲ್ಲಿ 588 ಮಂದಿಗಷ್ಟೇ ಅಂಗವಿಕಲರಿಗೆ ನೀಡಲಾಗುವ ಸೌಲಭ್ಯ ಸಿಕ್ಕಿದೆ.

‘ಅಂಗವಿಕಲರ ಕಾಯ್ದೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಹಿಮೋಫಿಲಿಯಾ, ತಲಸೇಮಿಯಾ, ಸಿಕಲ್‌ ಸೆಲ್ ಡಿಸೀಸ್ (ಕುಡುಗೋಲು ರಕ್ತಹೀನತೆ) ಸೇರಿ 21 ರೋಗಗಳನ್ನು ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ. ಅಂದರೆ, ರಕ್ತಕ್ಕೆ ಸಂಬಂಧಿಸಿದ ಈ ರೋಗಗಳನ್ನು ಅಂಗವೈಕಲ್ಯ ಎಂದು ಗುರುತಿಸಲಾಗಿರುವುದರಿಂದ ಅಂಗವಿಕಲರಿಗೆ ಸಿಗುವ ಸೌಲಭ್ಯಗಳು ಈ ರೋಗ ಪೀಡಿತರಿಗೂ ಸಿಗಬೇಕು. ಆದರೆ, ಇಂತಹ ರೋಗಿಗಳನ್ನು ಗುರುತಿಸುವುದು ಸವಾಲಿನ ಕೆಲಸ’ ಎನ್ನುತ್ತಾರೆ ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ.

ADVERTISEMENT

‘ಆರೋಗ್ಯವಂತ ವ್ಯಕ್ತಿಯಲ್ಲಿ ಫ್ಯಾಕ್ಟರ್‌ 8 ಹಾಗೂ 9 ಪ್ರಮಾಣವು ಶೇ 50ಕ್ಕಿಂತ ಹೆಚ್ಚು ಇರಬೇಕು. ಅದಕ್ಕಿಂತ ಕಡಿಮೆ ಇದ್ದರೆ ಹಿಮೋಫಿಲಿಯಾ ರೋಗಿಗಳೆಂದು ಗುರುತಿಸಲಾಗುತ್ತದೆ. ಈ ಎರಡು ಅಂಶಗಳನ್ನು ರಕ್ತ ಪರೀಕ್ಷೆಯ ಮೂಲಕ ಗುರುತಿಸಬಹುದಾಗಿದೆ. ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಹಾಗೂ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗಳನ್ನು ಬಿಟ್ಟರೆ ರಾಜ್ಯದ ಯಾವ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಸೌಲಭ್ಯವಿಲ್ಲ’ ಎಂದು ಸುರೇಶ್ ಬೇಸರ ವ್ಯಕ್ತಪಡಿಸಿದರು.

‘ಹಿಮೋಫಿಲಿಯಾದಲ್ಲಿ ಅಂಗವೈಕಲ್ಯ ಪ್ರಮಾಣವನ್ನು ಗುರುತಿಸಲು ಮೂರು ಹಂತಗಳಲ್ಲಿ ಪರೀಕ್ಷೆ ಮಾಡಿಸಬೇಕಾಗುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲಾಗುತ್ತದೆ. ಆದರೆ, ಇದಕ್ಕೆ ದುಬಾರಿ ವೆಚ್ಚ ತಗಲುತ್ತದೆ. ಆರಂಭಿಕ ಹಂತವನ್ನು ಪರೀಕ್ಷಿಸಲು ₹ 3 ಸಾವಿರದಿಂದ ₹ 4 ಸಾವಿರ ಬೇಕು. ಅಲ್ಲದೇ ಮುಂದುವರಿದ ಪರೀಕ್ಷೆ ಅಂದರೆ ಪ್ಲೇಟ್‍ಲೆಟ್ ಗುಣಮಟ್ಟ, ವಾನ್ ವಿಲಿಬ್ರಾಂಡ್ಸ್ ಡಿಸೀಸ್‌ಗಳನ್ನು ಪರೀಕ್ಷಿಸಲು ₹ 10 ಸಾವಿರ ಬೇಕು. ಕಡುಬಡವರು ಇದನ್ನು ಭರಿಸುವುದು ಕಷ್ಟ. ಇದರಿಂದಾಗಿ ಅವರು ಅಂಗವಿಕಲರಿಗೆ ದೊರೆಯುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂಬುದು ಅವರ ಅಭಿಪ್ರಾಯ.

ಹಿಮೋಫಿಲಿಯಾ ರೋಗಿಗಳಿಗೆ ಅಂಗವಿಕಲ ಕಾರ್ಡ್‌ಗಳನ್ನು ನೀಡುವ ಸಂಬಂಧ ನೋಂದಣಿ ಕಾರ್ಯ ಆರಂಭವಾಗಿದ್ದು, ಅರ್ಹರಿಗೆ ಸೌಲಭ್ಯ ತಲುಪಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೀದರ್ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಯಾರಿಗೂ ಸೌಲಭ್ಯ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.