ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಖಾಸಗಿ ನರ್ಸರಿಗಿಂತ ಕಡಿಮೆ ದರದಲ್ಲಿ ನೀಡುತ್ತಿದ್ದರೂ, ರೈತರು ಖರೀದಿಗೆ ಹೆಚ್ಚಿನ ಉತ್ಸಾಹ ತೋರುತ್ತಿಲ್ಲ.
‘ಸರ್ಕಾರ ನೀಡುವ ಸಸಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ’ ಎಂಬ ‘ತಪ್ಪು ಕಲ್ಪನೆ’ ಸಾರ್ವಜನಿಕರಲ್ಲಿ ಇರುವುದು ತೋಟಗಾರಿಕೆ ಇಲಾಖೆಗೆ ಹಿನ್ನಡೆ ಉಂಟುಮಾಡುತ್ತಿದೆ.
ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಇಲಾಖೆಯ ಒಟ್ಟು 11 ಸಸ್ಯಕ್ಷೇತ್ರಗಳಿವೆ. ಅಡಿಕೆ, ತೆಂಗು, ಕರಿಬೇವು, ನುಗ್ಗೆ, ನಿಂಬೆ ಹಾಗೂ ಅಲಂಕಾರಿಕ ಸಸಿಗಳು ಸೇರಿದಂತೆ ಪ್ರತೀ ವರ್ಷವೂ ಲಕ್ಷಾಂತರ ಸಸಿಗಳನ್ನು ಇಲ್ಲಿ ವೈಜ್ಞಾನಿಕವಾಗಿ ಬೆಳೆಸಿ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ರೈತರು ಖಾಸಗಿ ನರ್ಸರಿಗಳಲ್ಲಿ ಬೆಳೆಸುವ ಸಸಿಗಳತ್ತಲೇ ಹೆಚ್ಚಿನ ಒಲವು ನೀಡುತ್ತಿದ್ದಾರೆ.
ತೆಂಗು, ಕರಿಬೇವು, ನುಗ್ಗೆ ಹಾಗೂ ನಿಂಬೆ ಸಸಿಗಳನ್ನು ರೈತರು ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರಗಳಿಂದ ಖರೀದಿಸಿದರೂ, ಸಸಿಗಳ ಖರೀದಿಗೆ ಮಾತ್ರ ಖಾಸಗಿ ನರ್ಸರಿಗಳ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ತಮ್ಮದೇ ಅಡಿಕೆ ತೋಟಗಳಿಂದ ಸಸಿ ತಯಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಡಿಕೆ ಸಸಿಗಳು ಪ್ರತೀ ವರ್ಷವೂ ಮಾರಾಟವಾಗದೇ ಉಳಿಯುತ್ತಿವೆ.
ತೋಟಗಾರಿಕೆ ಇಲಾಖೆಯು 2022–23ನೇ ಸಾಲಿನಲ್ಲಿ 1.95 ಲಕ್ಷ ವಿವಿಧ ಪ್ರಭೇದದ ಸಸಿಗಳನ್ನು ಬೆಳೆಸಿ, ಮಾರಾಟಕ್ಕೆ ಮುಂದಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಸಾಕಷ್ಟು ಸಸಿಗಳು ಮಾರಾಟವಾಗದೇ ಉಳಿದಿದ್ದವು. ಅಡಿಕೆಯ ಶೇ 90ರಷ್ಟು ಸಸಿಗಳೇ ಮಾರಾಟವಾಗದೇ ಉಳಿದ ಸಸಿಗಳಲ್ಲಿವೆ.
ನರ್ಸರಿಗಳಲ್ಲಿ 2024ರ ಏಪ್ರಿಲ್‌ನಿಂದ ಮೇ 20ರವರೆಗೂ 20,000 ತೆಂಗಿನ ಸಸಿಗಳನ್ನು (ಜವಾರಿ ಹಾಗೂ ಹೈಬ್ರಿಡ್ ತಳಿ) ಮಾರಾಟ ಮಾಡಿದ್ದು, ಇನ್ನೂ 6,500 ಸಸಿಗಳು ಸಸ್ಯಕ್ಷೇತ್ರಗಳಲ್ಲಿ ಉಳಿದಿವೆ. 28,000 ಅಡಿಕೆ (ಲೋಕಲ್ ತಳಿ) ಸಸಿಗಳನ್ನು ಮಾರಾಟ ಮಾಡಲಾಗಿದ್ದು, 65,000ದಷ್ಟು ಮಾರಾಟಕ್ಕಿವೆ.
ನುಗ್ಗೆ, ನಿಂಬೆ ಹಾಗೂ ಕರಿಬೇವಿನ 7,500 ಸಸಿಗಳನ್ನು ರೈತರು ಖರೀದಿಸಿದ್ದಾರೆ. ನುಗ್ಗೆ– 45,00, ನಿಂಬೆ– 2,800 ಹಾಗೂ ಕರಿಬೇವು– 3,250 ಸಸಿಗಳು ಸಸ್ಯಕ್ಷೇತ್ರಗಳಲ್ಲಿ ನಳನಳಿಸುತ್ತಿವೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಅಧಿಕ ಪ್ರಮಾಣದ ಸಸಿಗಳು ಮಾರಾಟವಾಗುವ ಆಶಾಭಾವವನ್ನು ಇಲಾಖೆ ಅಧಿಕಾರಿಗಳು ಹೊಂದಿದ್ದಾರೆ.
ಅಡಿಕೆ ಸಸಿಗಳಿಗೆ (ಲೋಕಲ್ ತಳಿ) ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ₹ 25 ದರವಿದೆ. ಖಾಸಗಿ ನರ್ಸರಿಗಳಲ್ಲಿ ₹ 30ರವರೆಗೆ ಇದೆ. ಪ್ರತೀ ಸಸಿಗೆ ₹ 5ರವರೆಗೆ ಹೆಚ್ಚು ದರವಿದ್ದರೂ ಬೆಳೆಗಾರರು ಖಾಸಗಿ ನರ್ಸರಿಗಳತ್ತಲೇ ಅಧಿಕ ಒಲವು ತೋರಿಸುತ್ತಿದ್ದಾರೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಭಾಗದಲ್ಲಿ ರೈತರೇ ಅಡಿಕೆ ಸಸಿಗಳನ್ನು ಬೆಳೆಸುತ್ತಿದ್ದಾರೆ. ತೆಂಗಿನ ಸಸಿಯ ದರ ₹ 75, ಕರಿಬೇವು, ನುಗ್ಗೆ, ನಿಂಬೆ ಗಿಡಗಳ ದರ ₹ 10 ಇದೆ.
‘ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ವೈಜ್ಞಾನಿಕವಾಗಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ತಂತ್ರಜ್ಞರ ನೆರವು ಪಡೆದು ಉತ್ತಮ ಇಳುವರಿ ನೀಡುವಂತಹ, ಗುಣಮಟ್ಟದ ಗೋಟು ಖರೀದಿಸಿ ತಂದು ವಿಜ್ಞಾನಿಗಳ ಸಲಹೆಯಂತೆ ಪೋಷಿಸಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಕೆ. ಪ್ರಶಾಂತ್.
‘ನಮ್ಮಲ್ಲಿ ಖರೀದಿಸಿದ ಸಸಿಗಳು ಉತ್ತಮ ಇಳುವರಿಯನ್ನೇ ನೀಡುತ್ತಿವೆ. ಬೆಳವಣಿಗೆ ಕುಂಠಿತ ಹಾಗೂ ಇನ್ನಿತರ ರೋಗ ಕಂಡುಬಂದರೆ ಗಿಡಗಳ ಬಗ್ಗೆ ಪೂರ್ಣವಾಗಿ ತಿಳಿದಿರುವ ಕಾರಣ ಸೂಕ್ತ ಸಲಹೆಗಳನ್ನು ನೀಡಲೂ ನಮಗೆ ಅನುಕೂಲವಾಗಲಿದೆ’ ಎಂದೂ ಅವರು ಹೇಳುತ್ತಾರೆ.
ಸಸಿಗಳ ಖರೀದಿ ಹಾಗೂ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಮೊಬೈಲ್ ಸಂಖ್ಯೆ 9972496485, 9744360233 ಸಂಪರ್ಕಿಸಬಹುದು.
ಇಲಾಖೆ ನೀಡುವ ಗುಣಮಟ್ಟದ ಸಸಿಗಳನ್ನು ಖರೀದಿಸುವುದರಿಂದ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಜನರು ತಪ್ಪು ಮಾಹಿತಿಗೆ ಕಿವಿಗೊಡಬಾರದು. ತರಕಾರಿ ಹಣ್ಣು ಸೇರಿದಂತೆ ಇನ್ನಿತರ ಸಸಿಗಳಿಗೆ ಬೇಡಿಕೆ ಇಟ್ಟರೆ ಪೂರೈಸಲಾಗುವುದು
ರಾಘವೇಂದ್ರ ಪ್ರಸಾದ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ತಾಲ್ಲೂಕುವಾರು ನರ್ಸರಿ ಆವರಗೊಳ್ಳ ದಾವಣಗೆರೆ;ಕಚೇರಿ ಹರಿಹರದ ಬುಳ್ಳಾಪುರ ಎಕ್ಕೆಗೊಂದಿ ಕಡರನಾಯ್ಕನಹಳ್ಳಿ ಪಾಳ್ಯ ಹೊನ್ನಾಳಿ ಕಚೇರಿ ಹಾಗೂ ಬೇಲಿಮಲ್ಲೂರು ಜಗಳೂರಿನ ವ್ಯಾಸಗೊಂಡನಹಳ್ಳಿ ಹಾಗೂ ಜಗಳೂರು ಕಚೇರಿ ಚನ್ನಗಿರಿಯ ಗರಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.