ಕುರುವ (ನ್ಯಾಮತಿ): ತಮ್ಮ ಭವಿಷ್ಯಕ್ಕಾಗಿ ಪಾಲಕರು ಎಷ್ಟು ಶ್ರಮಿಸಿದ್ದಾರೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಅರಿಯುವಂತೆ ಮಾಡಬೇಕು ಎಂದು ರಾಂಪುರ ಹಾಲಸ್ವಾಮಿ ಮಠದ ಶಿವಕುಮಾರ ಹಾಲಸ್ವಾಮೀಜಿ ಸಲಹೆ ನೀಡಿದರು.
ನ್ಯಾಮತಿ ತಾಲ್ಲೂಕು ಕುರುವ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾತೇಂಗಮ್ಮ ದೇವಾಲಯದ ಪ್ರವೇಶ, ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಪಾಲಕರು ತಮಗಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದು ಇಂದಿನ ಪೀಳಿಗೆಗೆ ಅರ್ಥವೇ ಆಗುತ್ತಿಲ್ಲ. ಶ್ರಮಪಟ್ಟ ಪೋಷಕರ ಬದುಕು ಸಂಕಷ್ಟದಲ್ಲಿದೆ. ತಂದೆ– ತಾಯಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ, ಅವರು ಕೊನೆಯವರೆಗೂ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದರು.
‘ನಮ್ಮ ಜೀವನ ಸಾರ್ಥಕಪಡಿಸಿಕೊಳ್ಳಲು ಗುರುವಿನ ಮಾರ್ಗದಲ್ಲಿ ನಡೆಯಬೇಕಿದೆ. ಗುರುವಿನ ಆರ್ಶಿರ್ವಾದ ಇಲ್ಲದೆ ನಮ್ಮ ಗುರಿ ಈಡೇರಿಸಿಕೊಳ್ಳಲು ಅಸಾಧ್ಯ. ತಂದೆ–ತಾಯಿ, ಗುರುವನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆ ಮುಂಚೂಣಿಗೆ ಬರಬೇಕಿದೆ’ ಎಂದು ಗೋವಿನಕೋವಿ ಹಾಲಸ್ವಾಮಿ ಮಠದ ಪೀಠಾಧ್ಯಕ್ಷ ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಹೇಳಿದರು.
ಸಿದ್ಧಲಿಂಗ ಶಾಸ್ತ್ರಿ ಹೊಳೆಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುರೇಶ ನವುಲೆ, ಹಾಲಸಿದ್ದಪ್ಪ, ಜಗದೀಶ, ಮಂಜುನಾಥ, ಕುಬೇರಪ್ಪ, ಸತೀಶಪ್ಪ, ಬಸವರಾಜ, ನಾಗರಾಜ, ದೇಗುಲ ನಿರ್ಮಾಣ ಮಾಡಿದ ರವಿಕುಮಾರ, ಕೃಷ್ಣಪ್ಪ ಭೋವಿ, ಮಂಜುನಾಥಾಚಾರ್, ಕೆ.ಎಂ.ರಮೇಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.