ADVERTISEMENT

ಪುಸ್ತಕ ವಿತರಿಸಿ ಓದುವ ಹವ್ಯಾಸ ಹಚ್ಚುವ ಡಾ. ಓಬಳೇಶ್

ಬಾಲಕೃಷ್ಣ ಪಿ.ಎಚ್‌
Published 17 ಸೆಪ್ಟೆಂಬರ್ 2019, 11:14 IST
Last Updated 17 ಸೆಪ್ಟೆಂಬರ್ 2019, 11:14 IST
ಡಾ. ಕೆ.ಎ. ಓಬಳೇಶ್‌
ಡಾ. ಕೆ.ಎ. ಓಬಳೇಶ್‌   

ದಾವಣಗೆರೆ: ಇಲ್ಲಿನ ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಡಾ. ಕೆ.ಎ. ಓಬಳೇಶ್‌ ತಮ್ಮ ಕೈಯಿಂದ ದುಡ್ಡು ಹಾಕಿ ಮಕ್ಕಳಿಗೆ ಪುಸ್ತಕ ವಿತರಿಸಿ ಓದುವ ಹವ್ಯಾಸ ಮತ್ತು ಸಂವಿಧಾನದ ಅರಿವು ಮೂಡಿಸುತ್ತಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕ ಪಡೆದು ‘ಚಿನ್ನದ ಹುಡುಗ’ ಎಂಬ ಕೀರ್ತಿ ಪಡೆದವರು ಅವರು. ಪತ್ರಿಕೋದ್ಯಮದಲ್ಲಿಯೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಂಕಣಕಾರ, ನಾಟಕಕಾರ ಆಗಿರುವ ಓಬಳೇಶ್‌ ಅವರ ‘ವಿವೇಕಯಾನ’ ಕೃತಿಗೆ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ. ಕಾವ್ಯಕ್ಕೆ ‘ಸಾಹಿತ್ಯ ಸಿರಿ’ ಪ್ರಶಸ್ತಿ ಪಡೆದಿದ್ದಾರೆ. ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಬೇಕು ಎಂದು ಏಕೆ ಅನಿಸಿತು?

ADVERTISEMENT

ಇಂದು ಮಕ್ಕಳಲ್ಲಿ ಓದುವ ಹವ್ಯಾಸ ತೀರಾ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್. ಹೀಗಾಗಿ ಪುಸ್ತಕಗಳನ್ನು ಕೊಂಡು ಓದುವ ಮಕ್ಕಳ ಸಂಖ್ಯೆ ಮಾತ್ರವಲ್ಲ, ವಿದ್ಯಾವಂತ ವಲಯದಲ್ಲಿ ಇದರ ಕೊರತೆ ಎದ್ದು ಕಾಣುತ್ತದೆ. ಹೀಗಾಗಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದ ಮಕ್ಕಳಿಗೆ ಅವರ ವ್ಯಕ್ತಿತ್ವ ಹಾಗೂ ಅವರ ಅಸ್ಮಿತೆಯನ್ನು ಎತ್ತಿಹಿಡಿಯುವಂತಹ ಪುಸ್ತಕಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಸಣ್ಣ ಪ್ರಯತ್ನ ಕೈಗೊಂಡಿರುವೆ.

* ಯಾವ ತರಹದ ಪುಸ್ತಕಗಳನ್ನು ಮಕ್ಕಳಿಗೆ ನೀಡುತ್ತಿದ್ದೀರಿ?

ಮಕ್ಕಳ ವ್ಯಕ್ತಿತ್ವವನ್ನು ಹೆಚ್ಚಿಸುವಂತಹ ಸಂವಿಧಾನ ಮತ್ತು ಅಂಬೇಡ್ಕರ್ ಚಿಂತನಧಾರೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಉಡುಗೊರೆಯಾಗಿ ನೀಡಿರುವೆ. ಹಾಗೆಯೇ ವಿದ್ಯಾರ್ಥಿನಿಯರಿಗೆ ಸ್ತ್ರೀವಾದಿ ಸೈದ್ಧಾಂತಿಕ ಆಯಾಮಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಸಿರುವೆ.

* ನಿಮ್ಮ ಈ ಕೆಲಸಕ್ಕೆ ಪ್ರೇರಣೆ ಏನು?

ನಾನು ಬಡತನದಿಂದ ಬಂದು, ಬಾಬಾಸಾಹೇಬರು ನೀಡಿದ ಸಂವಿಧಾನಿಕ ಸವಲತ್ತಿನಿಂದ ಉನ್ನತ ಶಿಕ್ಷಣ ಪಡೆದು, ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡವನು. ಅಂಬೇಡ್ಕರ್ ವೈಚಾರಿಕ ಚಿಂತನೆಗಳೇ ನನ್ನ ಈ ಪ್ರಯತ್ನಕ್ಕೆ ಪ್ರೇರಣೆ. ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ; ಅವರೊಂದು ಶಕ್ತಿ. ಹೀಗಾಗಿ ಅವರನ್ನು ಭಾರತೀಯರೆಲ್ಲರೂ ಮುಕ್ತಮನಸಿನಿಂದ ಓದಿಕೊಳ್ಳಬೇಕು.

* ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಹುಟ್ಟಿಸಲು ಸಾಧ್ಯವಾಯಿತೇ?

ಮಕ್ಕಳಲ್ಲಿ ಒಂದು ವಿಶಿಷ್ಟ ಪ್ರತಿಭೆ ಇರುತ್ತದೆ. ಆದರೆ, ಅದನ್ನು ಎತ್ತಿಹಿಡಿಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು. ನಾನು ಉಪನ್ಯಾಸ ಮಾಡುತ್ತಿರುವ ಬಹುತೇಕ ಮಕ್ಕಳಲ್ಲಿ ವೈಚಾರಿಕತೆಯನ್ನು ಬಿತ್ತುವ ಪ್ರಯತ್ನ ಮಾಡುತ್ತೇನೆ. ಇದು ಮಕ್ಕಳಲ್ಲಿ ಗೊಂದಲವಾಗಬಹುದು. ಅದಕ್ಕೆ ಸೂಕ್ತವಾದ ಪುಸ್ತಕಗಳನ್ನು ನೀಡಿ, ಆ ಮೂಲಕ ತಿಳಿ ಹೇಳಿದರೆ ಅವರು ವೈಚಾರಿಕವಾಗಿ ಆಲೋಚನೆ ಮಾಡಲು ಮುಂದಾಗುತ್ತಾರೆ. ಇದರಿಂದ ಕೆಲವರಿಗಾದರೂ ತಮ್ಮ ಬದುಕನ್ನು ಹೊಸ ನೆಲೆಯಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಈ ಪುಸ್ತಕ ಪ್ರೀತಿಯಿಂದ ಕೆಲವು ವಿದ್ಯಾರ್ಥಿಗಳು ಓದುವ ಹವ್ಯಾಸಕ್ಕೆ ತೆರೆದುಕೊಂಡಿದ್ದಾರೆ.

* ಮಕ್ಕಳ ಪ್ರತಿಕ್ರಿಯೆ ಹೇಗಿದೆ?

ಸಮಕಾಲೀನ ಸಂದರ್ಭದ ತಲ್ಲಣಗಳ ಬಗ್ಗೆ ಚರ್ಚಿಸುವಷ್ಟು ಮಟ್ಟಿಗೆ ಈ ಪುಸ್ತಕ ಸಂಸ್ಕೃತಿಯು ಮಕ್ಕಳ ಮನಸಿನ‌ ಮೇಲೆ ಪ್ರಭಾವ ಬೀರಿದೆ. ಕೆಲವು ಮಕ್ಕಳು ಇಂತಹ ವೈಚಾರಿಕ ಪುಸ್ತಕಗಳನ್ನು ಓದಿ ತಾವು ಕವಿತೆ, ಲೇಖನ ಬರೆಯುವ ಪ್ರಯತ್ನ ನಡೆಸಿರುವುದು ಇದೆ. ನನ್ನ ವಿದ್ಯಾರ್ಥಿಗಳು ಇದರ ಆಸಕ್ತಿಯಿಂದ ರಚಿಸಿದ ಕೆಲವು ಕವಿತೆಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿ, ಅವರಲ್ಲಿ ಹೊಸತನವನ್ನು ಮೂಡಿಸಿರುವೆ. ಮುಂದಿನ‌ ದಿನಗಳಲ್ಲಿ ಅವರು ಪುಸ್ತಕಗಳೊಂದಿಗೆ ಉತ್ತಮವಾದ ಸಂಬಂಧ ಕಲ್ಪಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.

* ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರನ್ನು ಓದಲು ಪ್ರೇರೇಪಿಸಿಲ್ಲವೇ?

ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕಗಳನ್ನು ಖರೀದಿಸಿ ನೀಡಿಲ್ಲ. ಒಳ್ಳೆಯ ಪುಸ್ತಕಗಳನ್ನು ಖರೀದಿಸಿ ಸ್ನೇಹಿತರು ಹಾಗೂ ಸಹೋದ್ಯೋಗಿ ಮಿತ್ರರಿಗೂ ಕಾಣಿಕೆ ರೂಪದಲ್ಲಿ ನೀಡಿ ಓದುವಂತೆ ಭಿನ್ನವಿಸಿಕೊಂಡಿರುವೆ. ಕೆಲವು ಸ್ನೇಹಿತರ ಹುಟ್ಟು ಹಬ್ಬ ಹಾಗೂ ಶುಭ ಸಮಾರಂಭಗಳಲ್ಲಿ ಉತ್ತಮವಾದ ಕೃತಿಗಳನ್ನು ಕಾಣಿಕೆ ರೂಪದಲ್ಲಿ ನೀಡಿದ್ದೇನೆ. ಯುವಜನರಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಹೆಚ್ಚಿಸಬೇಕು ಎಂಬುದಷ್ಟೇ ನನ್ನ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.