ADVERTISEMENT

ಹೈಟೆನ್ಷನ್‌ ವೈರ್‌ ಇದ್ದಲ್ಲಿ ಡೋರ್‌ ನಂಬರ್‌ಗೆ ಆಕ್ಷೇಪ

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 6:28 IST
Last Updated 7 ಆಗಸ್ಟ್ 2022, 6:28 IST
ದಾವಣಗೆರೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು
ದಾವಣಗೆರೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು   

ದಾವಣಗೆರೆ: ಉದ್ಯಾನ ಒತ್ತುವರಿ, ಹೈಟೆನ್ಷನ್‌ ವೈರ್‌ ಇದ್ದ ಜಾಗದಲ್ಲಿ ಡೋರ್‌ನಂಬರ್‌ ನೀಡಿರುವುದು, ಈಗಾಗಲೇ ಹೆಸರು ಇರುವ ಬಡಾವಣೆಗೆ ಬೇರೆ ಹೆಸರಿಡಲು ಮುಂದಾಗಿರುವ ವಿಚಾರಗಳು ಮೇಯರ್‌ ಜಯಮ್ಮ ಗೋಪಿನಾಯ್ಕ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಇಲ್ಲಿನ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಒಳಗಾದವು.

ಅಂಬಿಕಾ ಬಡಾವಣೆಯಲ್ಲಿ ರಸ್ತೆ, ಉದ್ಯಾನ ಒತ್ತುವರಿ ಮಾಡಿರುವ ಜಾಗದಲ್ಲಿ ಹೈಟೆನ್ಷನ್ ವೈರ್ ಇದ್ದರೂ ಪರಿಶೀಲನೆ ಮಾಡದೆ ಡೋರ್ ನಂಬರ್ ನೀಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಎ.ನಾಗರಾಜ್ ಆರೋಪಿಸಿದರು.

‘ನಾನು ಮೇಯರ್ ಆಗಿದ್ದಾಗ ಸ್ಥಳಪರಿಶೀಲನೆ ನಡೆಸಿ ಡೋರ್ ನಂ ನೀಡಲಾಗಿದೆ. ಆಗ ಹೈಟೆನ್ಷನ್ ವೈರ್ ಇರಲಿಲ್ಲ. ಕಡಿಮೆ ಹಣದಲ್ಲಿ ಜನರಿಗೆ ನಿವೇಶನ ಸಿಗುತ್ತಿದೆ. ಇಂತಹ ಹೊತ್ತಲ್ಲಿ ಅವರಿಗೆ ಕಿರಿಕಿರಿ ಮಾಡುವುದು ಮಾನವೀಯತೆ ಅಲ್ಲ’ ಎಂದು ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಪ್ರತಿಕ್ರಿಯಿಸಿದರು.

ADVERTISEMENT

‘ನೀವು ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲದ ಹೈಟೆನ್ಷನ್ ವೈರ್ ಸಿಡಿಪಿಯಲ್ಲಿ ಮಾತ್ರ ಹೇಗೆ ದಾಖಲಾಯಿತು? ಜನರ ಜೀವಕ್ಕೆ ಅಪಾಯ ಇರುವ ಸ್ಥಳದಲ್ಲಿ ಡೋರ್ ನಂಬರ್‌ ಕೊಟ್ಟಿರುವುದು ಸರಿಯಲ್ಲ. ಕೂಡಲೇ ಡೋರ್ ನಂಬರ್‌ ರದ್ದುಪಡಿಸಿ’ ಎಂದು ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಸದಸ್ಯರಾದ ಕೆ. ಚಮನಸ್‌ಸಾಬ್, ಎ. ನಾಗರಾಜ್ ಒತ್ತಾಯಿಸಿದರು.

‘ಹೈಟೆನ್ಷನ್ ವೈರ್‌ ಇರುವ‌ ಬಗ್ಗೆ ದಾಖಲೆ ತಂದುಕೊಡಿ. ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲಾಗುವುದು’ ಎಂದುಮೇಯರ್ ಜಯಮ್ಮ ಗೋಪಿನಾಯ್ಕ್ ಚರ್ಚೆಗೆ ತೆರೆ ಎಳೆದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ದಾರಿಹೋಕರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಒಂದು ನಾಯಿಯ ಸಂತಾನ ಹರಣಕ್ಕೆ 1,040 ವ್ಯಯಿಸಲಾಗುತ್ತಿದೆ. ದಿನವೊಂದಕ್ಕೆ 25 ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುತ್ತಿದ್ದರೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಆದ್ದರಿಂದ, ಕೂಡಲೇ ಬೀದಿ ನಾಯಿಗಳಿಗೆ ಒಂದೆಡೆ ಸ್ಥಳಾಂತರಿಸಿ ಪಾಲಿಕೆಯಿಂದ ಆಹಾರ ಒದಗಿಸಿ ಕೊಡಿ ಎಂದು ಎ. ನಾಗರಾಜ್‌ ವಿನಂತಿಸಿದರು.

ಹೆಸರು ಬದಲಾವಣೆ ವಿವಾದ: ಇಲ್ಲಿನ ಶಿವಪಾರ್ವತಿ ಬಡಾವಣೆಯ ಹೆಸರನ್ನು ಜಿ. ಮಲ್ಲಿಕಾರ್ಜುನಪ್ಪ ಬಡಾವಣೆ ಎಂದು ನಾಮಕರಣ ಮಾಡುತ್ತಿರುವ ವಿಚಾರ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ ಸದಸ್ಯರ ನಡುವೆ ಭಾರಿ ಜಟಾಪಟಿಗೆ ಕಾರಣವಾಯಿತು.

ಈಗಾಗಲೇ ಶಿವಪಾರ್ವತಿ ಬಡಾವಣೆ ಎಂದು ಹೆಸರಿಡಲಾಗಿದೆ. ಅಲ್ಲಿನ ನಿವಾಸಿಗಳು ಆಧಾರ್‌ ಕಾರ್ಡ್‌ ಸಹಿತ ಎಲ್ಲ ದಾಖಲೆಗಳಿಗೆ ಅದೇ ಹೆಸರನ್ನು ನೀಡಿದ್ದಾರೆ. ಈಗ ಕೆಲವರು ಪಕ್ಷದ ನಾಯಕರನ್ನು ಓಲೈಸಲು ಜಿ.ಮಲ್ಲಿಕಾರ್ಜುನಪ್ಪ ಅವರ ಹೆಸರು ಇಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಎ. ನಾಗರಾಜ್‌ ಟೀಕಿಸಿದರು.

‘ಸರ್ಕಾರದ ಮಾರ್ಗಸೂಚಿಯಂತೆ ಬಡಾವಣೆಗೆ ಮರುನಾಮಕರಣ ಮಾಡಿದ್ದೇವೆ. ಕಾಂಗ್ರೆಸ್ ನವರು ಎಲ್ಲೆಲ್ಲಿ ಅನಧಿಕೃತವಾಗಿ ನಾಮಕರಣ ಮಾಡಿದ್ದಾರೆ ಆ ಬಗ್ಗೆ ತನಿಖೆ ನಡೆಸಬೇಕು’ ಎಂದುಎಸ್.ಟಿ. ವೀರೇಶ್, ಶಿವಾನಂದ, ಬಿ.ಜಿ. ಅಜಯಕುಮಾರ್ ಒತ್ತಾಯಿಸಿದರು. ಎರಡೂ ಪಕ್ಷಗಳ ಸದಸ್ಯರ ನಡುವೆ ಇದು ಜಟಾಪಟಿಗೆ ಕಾರಣವಾಯಿತು.

‘ಈಗಾಗಲೇ ಸರ್ಕಾರದ ಮಾರ್ಗದರ್ಶನದಂತೆ ಜಿ. ಮಲ್ಲಿಕಾರ್ಜುನಪ್ಪ ಹೆಸರು ನಾಮಕರಣ ಮಾಡಲಾಗಿದೆ. ಧೂಡಾದಿಂದ ಅಂಗೀಕರಿಸಲಾಗಿದೆ. ಬದಲಾಯಿಸುವ ಪ್ರಶ್ನೆಯಿಲ್ಲ’ ಎಂದು ಮೇಯರ್‌ ಜಯಮ್ಮ ಸ್ಪಷ್ಟಪಡಿಸಿದರು.

‘ಬೀದಿ ನಾಯಿಗಳ ವಿಷಯವನ್ನು ಗಂಭೀರವಾಗಿ ಪರಿಗಣಿಸಿ. ನನ್ನ ವಾರ್ಡ್‌ನಲ್ಲೂ ಚಿಕ್ಕ ಮಗುವಿಗೆ ನಾಯಿ ಕಚ್ಚಿದೆ. ನಾನೇ ಚಿಕಿತ್ಸೆ ಕೊಡಿಸಿದ್ದೆ. ನಮ್ಮ ವಾರ್ಡಲ್ಲು ಕೂಡ ಚಿಕ್ಕ ಮಗುವಿಗೆ ನಾಯಿ ಕಡಿದು ಗಾಯಗೊಳಿಸಿದ್ದು, ನಾನು ಆ ಮಗುವಿಗೆ ಚಿಕಿತ್ಸೆ ಕೊಡಿಸಿದೆ’ ಎಂದುಬಿಜೆಪಿ ಸದಸ್ಯ ಬಿ.ಜೆ. ಅಜಯಕುಮಾರ್ ಕೂಡ ದನಿಗೂಡಿಸಿದರು.

ರಸ್ತೆಗಳಲ್ಲಿ ಬೀಳುವ ಕೇಬಲ್‌ಗಳಿಂದ ಜನಸಾಮಾನ್ಯರ ಜೀವಹಾನಿ, ಪಾಲಿಕೆಯಲ್ಲಿ ಕಳೆದ ಬಾರಿಯೇ ₹ 60 ಕೋಟಿಗೆ ಕಾಮಗಾರಿ ಅಂಗೀಕಾರಗೊಳಿಸಿರುವುದರಿಂದ ಈ ಬಾರಿ ಕಾಮಗಾರಿ ಅನುಷ್ಠಾನಕ್ಕೆ ಆಗುತ್ತಿರುವ ತೊಂದರೆ, ಮದ್ಯದಂಗಡಿ ಪರವಾನಿಗೆ ನೀಡಿರುವುದನ್ನು ಪರಿಶೀಲನೆ ಮಾಡುವುದು ಸಹಿಒತ ಅನೇಕ ವಿಚಾರಗಳು ಚರ್ಚೆಗೆ ಒಳಗಾದವು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಉಪಮೇಯರ್ ಗಾಯತ್ರಿ ಖಂಡೋಜಿರಾವ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆ ಸದಸ್ಯರು ಇದ್ದರು.

‘ಚರ್ಚಿಸಬೇಕಾದ ವಿಷಯಗಳಿಲ್ಲ’

ಚರ್ಚೆ ನಡೆಸಬೇಕಾದ ವಿಷಯಗಳನ್ನು ಬಿಟ್ಟು ಅನುಕೂಲಕ್ಕೆ ಬಾರದ ವಿಷಯಗಳನ್ನು ಮಾತ್ರ ಇಲ್ಲಿ ಚರ್ಚೆಗೆ ತರಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಸಭೆಯ ಆರಂಭದಲ್ಲಿಯೇ ಆಕ್ಷೇಪಿಸಿದರು. ಇವು ಕೂಡ ಚರ್ಚಿಸಬೇಕಾದ ವಿಷಯಗಳೇ ಆಗಿವೆ ಎಂದು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರು. ಇದು ಕೂಡ ಎರಡೂ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.