ವಂಚನೆ
ದಾವಣಗೆರೆ: ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಈಚೆಗೆ ₹52.30 ಲಕ್ಷ ವಂಚಿಸಲಾಗಿದೆ.
ಆಂಜನೇಯ ಬಡಾವಣೆಯ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಹಣ ಕಳೆದುಕೊಂಡವರು.
‘ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್‌ವೊಂದಕ್ಕೆ ಅಪರಿಚಿತರು ನನ್ನನ್ನು ಸೇರಿಸಿದ್ದರು. Paytm Money ಹೆಸರಿನ ಕಂಪನಿಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುತ್ತೇವೆ ಎಂದು ನಂಬಿಸಿದ್ದರು. ಲಿಂಕ್ ಕಳಿಸಿ, ನನ್ನ ಪ್ರೊಫೈಲ್ ಕೂಡಾ ತಯಾರಿಸಿದ್ದರು. ಆ ನಂತರ ಹೆಚ್ಚಿನ ಲಾಭಾಂಶ ನೀಡುವುದಾಗಿ ಆನ್‌ಲೈನ್ ಮೂಲಕ ₹52.30 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ನಂತರ ಹಣ ನೀಡದೇ, ಬೆದರಿಕೆಯೊಡ್ಡಿದ್ದಾರೆ’ ಎಂದು ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದಾರೆ.
ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ರಾಂಚೈಸಿ ನೀಡುವುದಾಗಿ ₹ 2.03 ಲಕ್ಷ ವಂಚನೆ
ದಾವಣಗೆರೆ: ಅಮೆಜಾನ್ ಕಂಪನಿಯ ಫ್ರಾಂಚೈಸಿ ನೀಡುವುದಾಗಿ ವ್ಯಕ್ತಿಯೊಬ್ಬರಿಗೆ ₹ 2.03 ಲಕ್ಷ ವಂಚಿಸಲಾಗಿದೆ. ಹರಿಹರ ತಾಲ್ಲೂಕಿನ ಗ್ರಾಮವೊಂದರ ನಿವಾಸಿ, ವೃತ್ತಿಯಲ್ಲಿ ವಕೀಲರಾಗಿರುವ ವ್ಯಕ್ತಿ ವಂಚನೆಗೊಳಗಾಗಿದ್ದಾರೆ.
‘ನನ್ನ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತರು ಅಮೆಜಾನ್ ಕಂಪನಿಯ ಫ್ರಾಂಚೈಸಿ ನೀಡುತ್ತೇವೆ. ಕಂಪನಿಯಿಂದ ಇಬ್ಬರು ಡೆಲಿವರಿ ಬಾಯ್ ಹಾಗೂ ಕೊಠಡಿಯ ಬಾಡಿಗೆ ಮೊತ್ತವನ್ನು ನೀಡುತ್ತೇವೆ. ಕಂಪನಿ ಕಳಿಸಿದ ಸಾಮಗ್ರಿಗಳನ್ನು ಡೆಲಿವರಿ ಬಾಯ್ಸ್ ಮೂಲಕ ಗ್ರಾಹಕರಿಗೆ ತಲುಪಿಸಿದರೆ ಕಮಿಷನ್ ನೀಡುವುದಾಗಿ ನಂಬಿಸಿದ್ದರು. ಆ ಬಳಿಕ ಫ್ರಾಂಚೈಸಿ ಶುಲ್ಕವಾಗಿ ₹ 2.03 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ’ ಎಂದು ಸಂತ್ರಸ್ತ ದೂರು ನೀಡಿದ್ದಾರೆ.
ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗಾರದ ಆಭರಣ ಕಳವು
ದಾವಣಗೆರೆ: ಮನೆಯೊಂದಕ್ಕೆ ನುಗ್ಗಿರುವ ಕಳ್ಳರು ಗಾಡ್ರೇಜ್‌ನಲ್ಲಿಟ್ಟಿದ್ದ ₹ 2.52 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ.
ಇಲ್ಲಿನ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿ ಫಾತೀಮಾ ಬಿ. ಅವರ ಮನೆಯಲ್ಲಿ ಶುಕ್ರವಾರ ಕಳವು ನಡೆದಿದೆ.
3 ಬಂಗಾರದ ಉಂಗುರು, ಕಿವಿಯೋಲೆಗಳನ್ನು ಖದೀಮರು ದೋಚಿದ್ದಾರೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.