ADVERTISEMENT

ಬಸವಾಪಟ್ಟಣ: ಸಾವಯವ ಪದ್ಧತಿಯಲ್ಲಿ ಅರಳಿರುವ ತೋಟ

ಬಸವಾಪಟ್ಟಣ ಸಮೀಪದ ಕಾರಿಗನೂರು ಗ್ರಾಮದ ರೈತ ರಮೇಶ್‌

ಎನ್.ವಿ.ರಮೇಶ್
Published 8 ಸೆಪ್ಟೆಂಬರ್ 2021, 3:18 IST
Last Updated 8 ಸೆಪ್ಟೆಂಬರ್ 2021, 3:18 IST
ಬಸವಾಪಟ್ಟಣ ಸಮೀಪದ ಕಾರಿಗನೂರಿನ ರಮೇಶ್ ಅವರು ಸಾವಯವ ಪದ್ಧತಿಯಲ್ಲಿ ಬೆಳೆಸಿರುವ ತೋಟ
ಬಸವಾಪಟ್ಟಣ ಸಮೀಪದ ಕಾರಿಗನೂರಿನ ರಮೇಶ್ ಅವರು ಸಾವಯವ ಪದ್ಧತಿಯಲ್ಲಿ ಬೆಳೆಸಿರುವ ತೋಟ   

ಬಸವಾಪಟ್ಟಣ: ರೈತರು ಬುದ್ಧಿವಂತರಾದರೆ ಕೃಷಿಯಲ್ಲಿ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಕಾರಿಗನೂರಿನ ರೈತ ಕೆ.ಎಂ. ರಮೇಶ್‌ ಸಾಕ್ಷಿಯಾಗಿದ್ದಾರೆ.

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಮೇಶ್‌, ವಿದ್ಯಾನುಭವ ಹಾಗೂ ಕೃಷಿ ತಜ್ಞರ ಸಲಹೆಯಂತೆ ತಮ್ಮ ಆರು ಎಕರೆ ತೋಟದಲ್ಲಿ ಸಾವಯವ ಗೊಬ್ಬರದ ಬಳಕೆಯೊಂದಿಗೆ ನೀರು ನಿರ್ವಹಣೆಗೆ ಪ್ರಾಮುಖ್ಯತೆ ನೀಡಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚಿನ ಇಳುವರಿ ಪಡೆದು ಯಶಸ್ವಿಯಾಗಿದ್ದಾರೆ.

ತಮಗಿರುವ ಸ್ವಲ್ಪ ಜಮೀನನ್ನು ಸಂಪೂರ್ಣ ತೋಟವನ್ನಾಗಿ ಪರಿವರ್ತಿಸಿ, ಅದರಲ್ಲಿ ಮುಖ್ಯ ಬೆಳೆಯಾದ ಅಡಿಕೆಯೊಂದಿಗೆ ತೆಂಗು, ಹಲಸು, ಬಾಳೆ, ಮಾವು, ನಿಂಬೆ, ಮೋಸಂಬಿ, ಕಿತ್ತಲೆ, ಶುಂಠಿ, ಅರಿಶಿನ, ಸರ್ವ ಸಾಂಬಾರ (ಆಲ್‌ ಸ್ಪೈಸಿ) ಬೆಳೆದಿದ್ದಾರೆ.

ADVERTISEMENT

ನೀರು ನಿರ್ವಹಣೆಗೆ ಇಸ್ರೇಲ್‌ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಇವರ ಮತ್ತೊಂದು ವಿಶೇಷತೆ. ಅವೈಜ್ಞಾನಿಕವಾಗಿ ಬೆಳೆಗಳಿಗೆ ನೀರು ಹಾಯಿಸುವುದರಿಂದ ಉತ್ಪಾದನಾ ವೆಚ್ಚವೂ ಹೆಚ್ಚು, ಇಳುವರಿಯೂ ಕಡಿಮೆ. ಗಿಡ–ಮರಗಳ ಆಯಷ್ಯವೂ ಕ್ಷೀಣವಾಗುತ್ತದೆ. ತೋಟದ ಬೆಳೆಯಲ್ಲಿ ಗಿಡಮರಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಒದಗಿಸಿದರೆ ಶೇಕಡ 65ರಷ್ಟು ನೀರು ವ್ಯರ್ಥವಾಗುತ್ತದೆ. ರೈತರಿಗೆ ಈ ಬಗ್ಗೆ ತಿಳಿವಳಿಕೆ ಅಗತ್ಯ ಎನ್ನುತ್ತಾರೆ ರಮೇಶ್‌.

‘ನೀರು ನಿರ್ವಹಣೆಗಾಗಿ ತುಂತುರು ನೀರಾವರಿ ಮತ್ತು ಹನಿ ನೀರಾವರಿಯನ್ನು ಅಳವಡಿಸಿದ್ದಾರೆ. ರಾಸಾಯನಿಕ ಗೊಬ್ಬರವನ್ನು ಹೆಚ್ಚಾಗಿ ಬಳಸಿದರೆ ಭೂಸಾರ ಕುಂಠಿತವಾಗಿ ಪ್ರತಿ ಬಾರಿಯೂ ಭೂಮಿ ರಾಸಾಯನಿಕ ಗೊಬ್ಬರವನ್ನೇ ಅವಲಂಬಿಸುವಂತಾಗುತ್ತದೆ. ಆದ್ದರಿಂದ ನಮ್ಮ ಪೂರ್ವಿಕರು ಬಳಸುತ್ತಿದ್ದ ಕೊಟ್ಟಿಗೆ ಗೊಬ್ಬರವನ್ನೇ ನಂಬಿದ್ದೇನೆ’ ಎನ್ನುತ್ತಾರೆ ಅವರು.

ಸಾಯವಾಲ್‌, ಗಿರ್‌ ಜಾತಿಯ ಹಸುಗಳೊಂದಿಗೆ ಜವಾರಿ ಹಸುಗಳನ್ನೂ ಸಾಕಿದ್ದಾರೆ ರಮೇಶ್‌. ಅವರ ತೋಟದಲ್ಲಿ ಸಿಗುವ ಹಸಿರು ಮೇವು ಹಸುಗಳ ಪಾಲನೆಗೆ ಪೂರಕವಾಗಿದ್ದು, ಅವುಗಳಿಂದ ಸಾಕಷ್ಟು ಹೈನು ಪದಾರ್ಥಗಳೊಂದಿಗೆ ಸಗಣಿಯನ್ನೂ ಪಡೆಯಲು ಸಾಧ್ಯ. ಸಗಣಿಯಿಂದ ಇವರೇ ಸ್ವತಃ ಜೀವಾಮೃತ ತಯಾರಿಸಿ ಬೆಳೆಗಳಿಗೆ ಒದಗಿಸುತ್ತಿದ್ದಾರೆ. ನೀರು ನಿರ್ವಹಣೆ ಮತ್ತು ಸಾವಯವ ಗೊಬ್ಬರದ ಬಳಕೆಯಿಂದ ದೈಹಿಕ ಶ್ರಮ, ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ ಎನ್ನುತ್ತಾರೆ ರಮೇಶ್‌

ಹದಿನಾರು ವರ್ಷಗಳಿಂದ ಈ ನೂತನ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಇವರ ಸಾಧನೆ ಮೆಚ್ಚಿ ಕೃಷಿ ಇಲಾಖೆ ಇವರಿಗೆ ‘ಕೃಷಿ ಪಂಡಿತ’ ಪ್ರಶಸ್ತಿ, ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿವೆ. ಸದಾ ಕೃಷಿಯ ಬಗ್ಗೆ ಚಿಂತನೆ ನಡೆಸಿರುವ ಇವರು ಕೃಷಿ ಮಾಸ ಪತ್ರಿಕೆಗಳಾದ ‘ಕೃಷಿ ಜಗತ್ತು’, ‘ನೇಗಿಲಮಿಡಿತ’, ‘ಸುಜಾತ’ ಮುಂತಾದವುಗಳನ್ನು ಅಧ್ಯಯನ ಮಾಡುತ್ತಾ ಬಂದಿದ್ದು, ಕೃಷಿ ಮೇಳಗಳಲ್ಲಿ ಭಾಗವಹಿಸಿ ತಜ್ಞರಿಂದ ಅನುಭವ ಪಡೆಯುತ್ತಿದ್ದಾರೆ. ಕೃಷಿ ಮೇಳ ಹಾಗೂ ರೈತರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದರೊಂದಿಗೆ ದೂರದರ್ಶನ ಮತ್ತು ರೇಡಿಯೊ ಮೂಲಕವಾಗಿ ಕೃಷಿ ಉಪನ್ಯಾಸಗಳನ್ನು ನೀಡುತ್ತಿದ್ದು, ಮಾದರಿ ರೈತ ಎನಿಸಿದ್ದಾರೆ ಎನ್ನುತ್ತಾರೆ ಇಲ್ಲಿನ ಕೃಷಿ ಅಧಿಕಾರಿ ಡಾ.ಡಿ.ಎಂ. ರಂಗಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.