ADVERTISEMENT

30ಕ್ಕೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 4:03 IST
Last Updated 23 ಸೆಪ್ಟೆಂಬರ್ 2021, 4:03 IST
ದಾವಣಗೆರೆಯ ಸದ್ಯೋಜಾತ ಮಠದಲ್ಲಿ ಆಯೋಜಿಸಿದ್ದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಜಿಲ್ಲಾ ಸಭೆಯನ್ನು ಲಿಂಗೈಕ್ಯ ಮಹಾಂತ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮುಖಂಡ ಎಚ್.ಎಸ್. ಶಿವಶಂಕರ ಉದ್ಘಾಟಿಸಿದರು.–ಪ್ರಜಾವಾಣಿ ಚಿತ್ರ
ದಾವಣಗೆರೆಯ ಸದ್ಯೋಜಾತ ಮಠದಲ್ಲಿ ಆಯೋಜಿಸಿದ್ದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಜಿಲ್ಲಾ ಸಭೆಯನ್ನು ಲಿಂಗೈಕ್ಯ ಮಹಾಂತ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮುಖಂಡ ಎಚ್.ಎಸ್. ಶಿವಶಂಕರ ಉದ್ಘಾಟಿಸಿದರು.–ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಹಾಂತ ಸ್ವಾಮೀಜಿ ಅವರ ಜಯಂತ್ಯುತ್ಸವ ಮತ್ತು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಕಾರ್ಯಕ್ರಮವನ್ನು ಸೆ. 30ರಂದು ಮಧ್ಯಾಹ್ನ 3ಕ್ಕೆ ತ್ರಿಶೂಲ್ ಕಲಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದಿಂದ ಬುಧವಾರ ಸದ್ಯೋಜಾತ ಮಠದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

2ಎ ಮೀಸಲಾತಿ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಶಿವಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಆರು ತಿಂಗಳ ಸಮಯಾವಕಾಶ ಕೇಳಿದ್ದರು. ಆದರೆ, ಈಗ ಅವರು ಮುಖ್ಯಮಂತ್ರಿ ಸ್ಥಾನದಲ್ಲಿಲ್ಲ. ಅಲ್ಲದೇ ನಾವು ನೀಡಿದ್ದ ಗಡುವು ಸೆ.15ಕ್ಕೆ ಮುಗಿದುಹೋಗಿದೆ. ಹಾಗಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಆಗಬೇಕು. ಈ ಅಭಿಯಾನದ ಮೂಲಕ ಮುಂದಿನ ಹೋರಾಟದ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು. ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ಕಳುಹಿ ಸಲಾಗುವುದು’ ಎಂದು ತಿಳಿಸಿದರು.

ADVERTISEMENT

2ಎ ಮೀಸಲಾತಿಗೆ ಆಗ್ರಹಿಸಿ ಅಕ್ಟೋಬರ್‌ 1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಸೆ.30ರಂದು ನಡೆಯುವ ಅಭಿಯಾನ ಮುನ್ನುಡಿಯಾಗಲಿದೆ. ಈ ಅಭಿಯಾನದಲ್ಲಿ ಸುಮಾರು 25 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಹೋರಾಟದ ಮುಂಚೂಣಿ ಯಲ್ಲಿರುವ ಸ್ವಾಮೀಜಿಗಾಗಿ, ಸಮಾಜದ ನಾಯಕರಿಗಾಗಿ ಈ ಹೋರಾಟ ನಡೆಸುತ್ತಿಲ್ಲ. ಮುಂದಿನ ಪೀಳಿಗೆಗಾಗಿ, ಸಮಾಜದ ಕಟ್ಟಕಡೆಯ ಕುಟುಂಬದ ಏಳಿಗೆಗಾಗಿ ನಡೆಯುವ ಹೋರಾಟ ಇದು. ಕೂಡಲಸಂಗಮದಿಂದ ಆರಂಭವಾದ ಪಾದಯಾತ್ರೆ, ಬೆಂಗಳೂರಿನ ಸತ್ಯಾಗ್ರಹ, ಶರಣು ಶರಣಾರ್ಥಿ ಪಾದಯಾತ್ರೆ ಹೀಗೆ ಪ್ರತಿ ಹಂತದಲ್ಲೂ ಸಮಾಜದವರು ಸ್ಪಂದಿಸಿದ್ದಾರೆ. ಮೀಸಲಾತಿ ಸಿಗುವ ವರೆಗೂ ಇದೇ ಸ್ಪಂದನ ಇರಲಿ ಎಂದು ಕೋರಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಅಭಿಯಾನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ವಿನಯ್ ಕುಲಕರ್ಣಿ, ಸಚಿವ ಅರವಿಂದ ಬೆಲ್ಲದ್, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಕಿತ್ತೂರು ರಾಣಿ ಚನ್ನಮ್ಮ ಬಳಗದ ವೀಣಾ ಕಾಶಪ್ಪನವರ ಸೇರಿ ಸಮಾಜದ ಶಾಸಕರು, ಸಚಿವರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಿಎಸ್‌ಎನ್‌ಎಲ್ ಕಚೇರಿಯಿಂದ ಗಾಂಧಿವೃತ್ತದವರೆಗೆ ಬೈಕ್ ರ್‍ಯಾಲಿ ನಡೆಯಲಿದೆ. ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆ ತರಲಾಗುವುದು ಎಂದು ವಿವರಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ ಗೋಪನಾಳ್‌, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಎಪಿಎಂಸಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಶೇಖರ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮುಖಂಡರಾದ ಮಹಾಂತೇಶ್ ಒಣರೊಟ್ಟಿ, ಅಕ್ಕಿ ಪ್ರಭು ಕಲಬುರ್ಗಿ, ಮಲೆಬೆನ್ನೂರು ಚಿದಾನಂದಪ್ಪ, ಜಯಪ್ರಕಾಶ್ ಸುತ್ತೂರು, ಮುರುಗೇಶ್ ಸೋಗಿ,ಟಿ. ಶಂಕ್ರಪ್ಪ, ಅಶೋಕ್, ದೀಟೂರು ಶೇಖರಪ್ಪ, ಗೌರಮ್ಮ ಪಾಟೀಲ್‌,ಹರಿಹರದ ಪರಮೇಶ್ವರ ಗೌಡ, ಮೋತಿ ಶಂಕರಪ್ಪ, ವಿಜಯ ಬೆಂಡಿಗೇರಿ, ಎಸ್. ಓಂಕಾರಪ್ಪ, ಸಿರಿಗೆರೆ ಚಂದ್ರಪ್ಪ, ನಿಜಲಿಂಗಪ್ಪ ಕಾಶೀಪುರ, ರುದ್ರೇಶ ಮಾಯಕೊಂಡ, ಬೆಳ್ಳೂಡಿ ಶಿವಕುಮಾರ, ಬಾದಾಮಿ ಮಲ್ಲಿಕಾರ್ಜುನ, ಅಣಜಿ ಪ್ರಶಾಂತ, ಬೆಳ್ಳೂಡಿ ಮಂಜುನಾಥ, ನಂದ್ಯಪ್ಪ ಹರಿಹರ, ಸಿ.ನಾಗೇಂದ್ರಪ್ಪ ಸಂಕ್ಲೀಪುರ ಸಭೆಯಲ್ಲಿ ಉಪಸ್ಥಿತರಿದ್ದರು.

‘ವಚನಾನಂದ ಶ್ರೀ ಬಂದರೆ ಸ್ವಾಗತ’

‘ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ 2ಎ ಮೀಸಲಾತಿ ಹೋರಾಟದಲ್ಲಿ ಹಿಂದೆ ಪಾಲ್ಗೊಂಡಿದ್ದರು. ಈಗಲೂ ಬಂದರೆ ಸ್ವಾಗತಿಸುತ್ತೇವೆ. ಹೋದರೆ ಗೌರವಯುತವಾಗಿ ಕಳುಹಿಸಿಕೊಡುತ್ತೇವೆ. ನಮ್ಮದೇನೂ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕ್ರಮಕ್ಕೆ ಅವರಿಗೂ ಆಹ್ವಾನ ನೀಡಲಾಗಿದೆ’ ಎಂದು 2ಎ ಮೀಸಲಾತಿ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಶಿವಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.