ದಾವಣಗೆರೆ: ‘ಭಾರತವು ಅಹಿಂಸೆ ಮತ್ತು ಶಾಂತಿಯ ತತ್ವವನ್ನು ಮಹಾತ್ಮ ಗಾಂಧೀಜಿ ಅವರಿಂದ ಕಲಿತದ್ದಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ದೇಶ ಶಾಂತವಾಗಿಯೇ ಇತ್ತು. ಶಾಂತಿ, ಸಹನೆ ಮತ್ತು ಸಹಬಾಳ್ವೆ ಭಾರತೀಯರ ‘ಸ್ವ’ತ್ವ. ಎಲ್ಲರನ್ನೂ ಒಳಗೊಳ್ಳುವುದು ದೇಶದ ಸ್ವಂತಿಕೆ ಎಂದು ಸಾಹಿತಿ ಪ್ರೊ.ಪ್ರೇಮಶೇಖರ್ ಅಭಿಪ್ರಾಯಪಟ್ಟರು.
ಸಾಹಿತಿ ಎಸ್.ಜಿ.ಕೋಟಿ ಅಧ್ಯಕ್ಷತೆಯಲ್ಲಿ ಇಲ್ಲಿ ಆಯೋಜಿಸಿರುವ ಎರಡು ದಿನಗಳ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 4ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತದ ಭೌಗೋಳಿಕತೆ ಜನರ ವ್ಯಕ್ತಿತ್ವವನ್ನು ರೂಪಿಸಿದೆ. ಸಿಂದೂ ಮತ್ತು ಗಂಗಾ ನದಿಯ ಫಲವತ್ತಾದ ಭೂಮಿಯಲ್ಲಿ ನೀರು ಮತ್ತು ಆಹಾರಕ್ಕೆ ಕೊರತೆ ಇರಲಿಲ್ಲ. ಹೀಗಾಗಿ ಕಲಹಗಳು ನಡೆದಿರುವ ಬಗ್ಗೆ ಕುರುಹುಗಳು ಸಿಗುವುದಿಲ್ಲ. ಸಿಂದೂ ನಾಗರಿಕತೆಯ ಉತ್ಖನನ ಸ್ಥಳದಲ್ಲಿ ಶಸ್ತ್ರಾಸ್ತ್ರ, ಆಯುಧಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.
‘ಒಂದು ಕಾಲದಲ್ಲಿ ಭಾರತ ಹಿಂಸೆಯನ್ನು ಬಹಳವಾಗಿ ಅನುಭವಿಸಿದೆ. ಹಿಂಸಕರ ವಿರುದ್ಧ ಪ್ರತಿಹಿಂಸೆ ಮಾಡದೇ ಇದ್ದರೆ ದುಷ್ಟಶಕ್ತಿಗಳ ಕೈ ಮೇಲಾಗುತ್ತದೆ. ಶಾಂತಿ ಸ್ಥಾಪನೆಗೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲೇಬೇಕು ಎಂಬುದನ್ನು ಭಾರತೀಯರು ಕಲಿತಿದ್ದಾರೆ. ಇದು ಇತಿಹಾಸದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ’ ಎಂದರು.
ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.