ADVERTISEMENT

ಅನ್ವೇಷಣೆಕ್ಕಿಂತ ಆವಿಷ್ಕಾರಕ್ಕೆ ಒತ್ತು ನೀಡುವ ಜನ

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪಕ್ಷಿ ತಜ್ಞ ಡಾ. ಎಸ್. ಶಿಶುಪಾಲ ವಿಷಾದ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 16:00 IST
Last Updated 6 ಮಾರ್ಚ್ 2021, 16:00 IST
ದಾವಣಗೆರೆ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಪ್ರೊ. ಮುರಿಗೇಂದ್ರಪ್ಪ ಉದ್ಘಾಟಿಸಿದರು
ದಾವಣಗೆರೆ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಪ್ರೊ. ಮುರಿಗೇಂದ್ರಪ್ಪ ಉದ್ಘಾಟಿಸಿದರು   

ದಾವಣಗೆರೆ: ಸತ್ಯದ ಅನ್ವೇಷಣೆ ಮತ್ತು ಸುಖದ ಬದುಕು ನಡುವೆ ಎರಡನೇಯದ್ದಕ್ಕೆ ‍ಪ್ರಾಮುಖ್ಯ ನೀಡುತ್ತಿದ್ದೇವೆ. ವಿಜ್ಞಾನ ಸತ್ಯದ ಅನ್ವೇಷಣೆಯ ಮಾರ್ಗವಾದರೆ ತಂತ್ರಜ್ಞಾನ ಸುಖಮಯ ಜೀವನಕ್ಕೆ ಬೇಕಾದ ಆವಿಷ್ಕಾರ ಆಗಿರುತ್ತದೆ. ತಂತ್ರಜ್ಞಾನಕ್ಕಿಂತ ಅಧಿಕ ಒತ್ತನ್ನು ವಿಜ್ಞಾನಕ್ಕೆ ನೀಡಬೇಕಿತ್ತು. ವಿಜ್ಞಾನದ ಕಡೆಗೆ ಮನಸ್ಸು ಮಾಡುತ್ತಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗ ಪ್ರೊಪೆಸರ್, ಪಕ್ಷಿ ತಜ್ಞ ಡಾ. ಎಸ್. ಶಿಶುಪಾಲ ಹೇಳಿದರು.

ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದ ಬಳಕೆಗೆ ಅಧಿಕ ಒತ್ತು ನೀಡಿ ಸತ್ಯದ ಅನ್ವೇಷಣೆಯಲ್ಲಿ ಹಿಂದೆ ಬಿದ್ದಿದ್ದೇವೆ. ಪ್ರಶ್ನಿಸುವುದು, ಕುತೂಹಲದಿಂದ ತಿಳಿವಳಿಕೆ ಹೆಚ್ಚಿಸಿಕೊಳ್ಳುವುದು, ಗಮನಿಸುವುದು, ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುವುದು ಇದೇ ವಿಜ್ಞಾನ. ಆದರೆ ಪ್ರಶ್ನಿಸುವ, ಗಮನಿಸುವ, ಸಂಶೋಧನೆ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ADVERTISEMENT

ವಿಜ್ಞಾನ ಎಂದರೆ ಸಮಯಪ್ರಜ್ಞೆ, ವೈಜ್ಞಾನಿಕ ಮನೋಭಾವ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ಸೂಕ್ಷ್ಮ ಜೀವಿಗಳಾಗಿರುತ್ತಾರೆ. ಕೊರೊನಾ ಬಂದ ಮೇಲೆ ವಿಜ್ಞಾನದ ಮಹತ್ವವು ಎಲ್ಲರಿಗೂ ತಿಳಿಯಿತು. ಶುದ್ಧ ಗಾಳಿಗೆ ಎಷ್ಟು ಬೆಲೆ ಇದೆ ಎಂದು ಅರ್ಥವಾಯಿತು. ಪರಿಸರ ಸಂರಕ್ಷಣೆಯ ಅಗತ್ಯ ಮನದಟ್ಟಾಯಿತು. ಪರಿಸರ ಎಲ್ಲರಿಗೂ ಜೀವನದ ಭಾಗ ಆಗಿರಬೇಕು ಹೊರತು ವಿಭಾಗಿಸುವ ಕೆಲಸ ಆಗಬಾರದು ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ, ‘ವಿದ್ಯಾರ್ಥಿಗಳು ಸಾಮಾಜಿಕ ವಿಚಾರಗಳಿಗೆ ಪ್ರತಿಭಟನೆ ಮಾಡುವ ಮನೋಭಾವನೆ ಕಳೆದುಕೊಂಡಿದ್ದಾರೆ. ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಒಳಗೊಂಡಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಇಂಥ ಮನೋಭಾವ ಬಂದರೆ ಸಮಾಜದಲ್ಲಿ ಕಟ್ಟದ್ದೇ ವಿಜ್ರಂಭಿಸುತ್ತದೆ’ ಎಂದು ಎಚ್ಚರಿಸಿದರು.

ಎವಿಕೆ ಕಾಲೇಜ್‍ನ ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶಿವಕುಮಾರ್, ಜಿ.ಎಸ್. ಲೋಕೇಶ್ವರಪ್ಪ, ರಾಮಚಂದ್ರ, ಪ್ರಭಾವತಿ, ಅನುರಾಧ, ಆರ್.ಸಿ. ಗೌಡ, ಫಾಲಾಕ್ಷಪ್ಪ, ಕಾರ್ಯದರ್ಶಿ ಸುಷ್ಮಾ ಉಪಸ್ಥಿತರಿದ್ದರು.

ಸಹನಾ ಪ್ರಾರ್ಥಿಸಿದರು. ಶಫೀಯಾ ಆಜಂ ಸ್ವಾಗತಿಸಿದರು. ಸಂಜನಾ ಅತಿಥಿಗಳನ್ನು ಪರಿಚಯಿಸಿದರು. ಐ.ಕೆ. ಸಂಗೀತಾ ಮತ್ತು ಶಿವಾನಿ ಕಾರ್ಯಕ್ರಮ ನಿರೂಪಿಸಿದರು. ಸುಮನ್ ವಂದಿಸಿದರು. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿಯಲ್ಲಿ 10ನೇ ರ‍್ಯಾಂಕ್ ಪಡೆದ ಎಸ್.ಎಂ. ಉಷಾ ಅವರನ್ನು ಸನ್ಮಾನಿಸಿದರು.

193 ಪಕ್ಷಿ ಪ್ರಭೇದ

ದಾವಣಗೆರೆಯಲ್ಲಿ 193 ಪಕ್ಷಗಳ ಪ್ರಭೇದಗಳು ದಾಖಲಾಗಿವೆ. ಕಳೆದ ನವಂಬರ್‌ನಲ್ಲಿ ಮಂಗೋಲಿಯಾದಿಂದ 232 ಹಕ್ಕಿಗಳು ಕುಂದವಾಡ ಕೆರೆಗೆ ಬಂದಿದ್ದವು. ಇವುಗಳ ಬಗ್ಗೆ ಮಾಹಿತಿ ಕಲೆಹಾಕಿದಾಗ ಈ ಹಕ್ಕಿಗಳು ಎಂಟು ದಿನದಲ್ಲಿ 4,900 ಕಿ.ಮೀ. ಕ್ರಮಿಸಿದ್ದವು. ಅದು ಹಿಮಾಲಯದ ಮೇಲೆನಿಂದ ಬಂದಿದ್ದು ಎನ್ನುವುದು ಮತ್ತಷ್ಟು ಕುತೂಹಲ ಉಂಟು ಮಾಡಿದೆ. ಕಳೆದ 5 ವರ್ಷಗಳಿಂದ ಪಕ್ಷಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಡಾ. ಶಿಶುಪಾಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.