ADVERTISEMENT

ದಾವಣಗೆರೆ: ಅಡಿಕೆಯಿಂದ ಉಪ್ಪಿನಕಾಯ, ದೊಡ್ಡಪತ್ರೆಯ ಚಾಕಲೇಟು

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:21 IST
Last Updated 11 ಜನವರಿ 2022, 7:21 IST
ದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಉತ್ಪನ್ನ ಮೇಳದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ವಿಶಿಷ್ಟ ಉತ್ಪನ್ನಗಳನ್ನು ಅತಿಥಿಗಳು ವೀಕ್ಷಿಸಿದರು
ದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಉತ್ಪನ್ನ ಮೇಳದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ವಿಶಿಷ್ಟ ಉತ್ಪನ್ನಗಳನ್ನು ಅತಿಥಿಗಳು ವೀಕ್ಷಿಸಿದರು   

ದಾವಣಗೆರೆ: ನಗರದ ಜಿಎಂಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಉತ್ಪನ್ನ ಮೇಳವು ವಿಶಿಷ್ಟ ಉತ್ಪನ್ನಗಳಿಂದ ಗಮನ ಸೆಳೆಯಿತು.

ಅಡಿಕೆ ಸಿಪ್ಪೆಯಿಂದ ತಯಾರಿಸಲಾದ ಉಪ್ಪಿನಕಾಯಿ, ಇಂಕ್, ಊದುಬತ್ತಿ, ದೊಡ್ಡಪತ್ರೆಯ ಕೆಮ್ಮು ನಿವಾರಕ ಚಾಕಲೇಟು, ರಾಗಿಯ ಮಿಲ್ಕ್ ಶೇಕ್ ಸೇರಿ 43 ಉತ್ಪನ್ನಗಳನ್ನು ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಆರೋಗ್ಯಕ್ಕೆ ಹಿತ, ಪರಿಸರ ಸ್ನೇಹಿ, ರೋಗ ನಿರೋಧಕ ಹಾಗೂ ಶಕ್ತಿ ವರ್ಧಕ ಎಂಬ ನಾಲ್ಕು ವಿಭಾಗಗಳಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.

ಜಿಎಂಐಟಿ ವಿದ್ಯಾಸಂಸ್ತೆಯ ಅಧ್ಯಕ್ಷ ಜಿ.ಎಂ. ಲಿಂಗರಾಜು ಉದ್ಘಾಟಿಸಿ ಮಾತನಾಡಿ, ‘ಸ್ಥಳೀಯವಾಗಿ ಸಿಗುವ ಪದಾರ್ಥಗಳಿಂದಲೇ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಆರೋಗ್ಯಕರವಾಗಿರುವಂತೆ ರೂಪಿಸಲಾಗಿದೆ. ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಉತ್ಪನ್ನಗಳಾಗಿ ಮಾರುಕಟ್ಟೆಗೆ ತರಬೇಕಿದೆ. ಇದಕ್ಕಾಗಿ ಬೆಂಗಳೂರಿನ ನವೋದ್ಯಮಗಳನ್ನು ಸಂಪರ್ಕಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ್, ‘ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ಉತ್ಪನ್ನಗಳಲ್ಲಿ ಕನಿಷ್ಠ ಹತ್ತಾದರೂ ಮಾರುಕಟ್ಟೆಗೆ ಬರುವಂತೆ ಮಾಡಲು ನವೋದ್ಯಮಗಳ ಮೂಲಕ ಕ್ರಮ ತೆಗೆದುಕೊಳ್ಳುವ ಪ್ರಯತ್ನ ನಡೆಸಲಾಗುವುದು’ ಎಂದು ತಿಳಿಸಿದರು.

ದೊಡ್ಡಪತ್ರೆಯನ್ನು ಬಳಸಿ ತಯಾರಿಸಲಾಗಿರುವ ಚಾಕಲೇಟು ಕೆಮ್ಮು - ಶೀತ ನಿವಾರಣೆಯ ಜೊತೆಗೆ ಜೀರ್ಣಶಕ್ತಿ ಸುಧಾರಣೆಗೆ ನೆರವಾಗುತ್ತದೆ ಎಂದು ವಿದ್ಯಾರ್ಥಿ ಎಂ.ಕೆ. ಮಧು ವಿವರಿಸಿದರು. ಈ ಯೋಜನೆಯಲ್ಲಿ ಕೆ.ವಿ. ಯಶಸ್ವಿನಿ, ಬಿ. ಭೂಮಿಕ, ಪಿ.ಎಂ. ಹೊನ್ನು ಹಾಗೂ ಕೆ.ಎಸ್. ವಿಜಯ್ ಕೂಡ ಭಾಗಿಯಾಗಿದ್ದರು.

ಮಂಜುನಾಥ್ ಸೊಣ್ಣದ್, ಎನ್.ಆರ್. ಚಿನ್ಮಯಿ ಹಾಗೂ ಎಂ. ಜೀವಿತ ಅವರ ತಂಡ ಸೊಯಬೀನ್ ಮೂಲಕ ಮೊಸರಿನ ಪುಡಿ ರೂಪಿಸಿದೆ. ನೈಸರ್ಗಿಕ ವಸ್ತುಗಳಿಂದ ತಯಾರಿಸಲಾದ ಈ ಮೊಸರಿನ ಪುಡಿ, ಮಧುಮೇಹಿಗಳಿಗೂ ಹಿತಕಾರಿ ಎಂದು ತಂಡದ ಸದಸ್ಯರು ತಿಳಿಸಿದರು.

ಭಾವನಾ ಹಿರೇಮಠ್ ಅವರ ತಂಡ ನೈಸರ್ಗಿಕ ಲಿಪ್‌ಸ್ಟಿಕ್‌ ತಯಾರಿಸಿದೆ. ಗುಲಾಬಿ ದಳಗಳನ್ನು ಬಳಸಿ ರೂಪಿಸಲಾಗಿರುವ ಲಿಪ್‌ಸ್ಟಿಕ್‌ಗಳು ಒಡೆದ ತುಟಿ ಸಮಸ್ಯೆಯನ್ನು ನಿವಾರಿಸುತ್ತವೆ. ಆರಕ್ಕೂ ಹೆಚ್ಚು ಬಣ್ಣಗಳನ್ನು ಹೊಂದಿರುವ ಲಿಪ್‌ಸ್ಟಿಕ್‌ಗಳನ್ನು ಅಡ್ಡ ಪರಿಣಾಮ ಇಲ್ಲ ಎಂದು ವಿವರಿಸಿದರು. ಈ ತಂಡದಲ್ಲಿ ಗೌತಮಿ ಹಿರೇಮಠ್, ಎಂ. ವಂದನ, ಎಸ್.ಆರ್. ಮುದ್ದೇಗೌಡ, ಡಿ.ಆರ್. ದೀಕ್ಷಿತ್ ಇದ್ದರು.

ಕೂದಲಿಗೆ ಬಣ್ಣವನ್ನು ಎಂ. ಗೀತಾ, ಸಿ.ವಿ. ಗೌರಮ್ಮ ಹಾಗೂ ಸುಜಾತರನ್ನು ಒಳಗೊಂಡ ತಂಡ ರೂಪಿಸಿತ್ತು. ಶುಂಠಿ, ಭೃಂಗರಾಜ ಪುಡಿ, ಮೆಹಂದಿ ಇತ್ಯಾದಿ ನೈಸರ್ಗಿಕ ವಸ್ತುಗಳನ್ನು ಬಳಸಿ ರೂಪಿಸಿರುವ ಹೇರ್‌ಡೈ ಬಣ್ಣ ನೀಡುವುದಷ್ಟೇ ಅಲ್ಲದೇ, ಕೂದಲನ್ನು ದಪ್ಪ ಮಾಡಲು, ಕೂದಲು ಬೆಳೆಯಲು, ಕೂದಲ ಹೊಟ್ಟು ತಡೆಯುವ ಕೆಲಸ ಮಾಡುತ್ತದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.

ವಿಭಾಗ ಮುಖ್ಯಸ್ಥ ಡಾ. ಪ್ರಕಾಶ್ ಕೆ.ಕೆ., ಮೇಳದ ಆಯೋಜಕಿ ದೀಪ್ತಿ ಪಲ್ಲೇದ, ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಅಧಿಕಾರಿ ತೇಜಸ್ವಿ ಕಟ್ಟಿಮನಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.