ADVERTISEMENT

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‍ ಮಿಶ್ರಣ:ಆತಂಕ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:50 IST
Last Updated 23 ಸೆಪ್ಟೆಂಬರ್ 2021, 3:50 IST
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿತರಿಸುತ್ತಿರುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ‍್ರಣವಾಗಿದೆ ಎಂಬ ಅನುಮಾನದ ಹಿನ್ನೆಲೆ ಬುಧವಾರ ಅಕ್ಕಿ ಪರಿಶೀಲನೆ ನಡೆಸುತ್ತಿರುವ ಗ್ರಾಮಸ್ಥರು ಹಾಗೂ ಸಿಬ್ಬಂದಿ.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿತರಿಸುತ್ತಿರುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ‍್ರಣವಾಗಿದೆ ಎಂಬ ಅನುಮಾನದ ಹಿನ್ನೆಲೆ ಬುಧವಾರ ಅಕ್ಕಿ ಪರಿಶೀಲನೆ ನಡೆಸುತ್ತಿರುವ ಗ್ರಾಮಸ್ಥರು ಹಾಗೂ ಸಿಬ್ಬಂದಿ.   

ಹರಿಹರ: ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸುತ್ತಿರುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ‍್ರಣವಾಗಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ವಿತರಿಸುತ್ತಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್‍ ಅಂಶ ಮಿಶ್ರಣವಾಗಿದೆ. ಈ ಅಕ್ಕಿ ಸೇವಿಸುವ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿರೇಶ್‍ ಪೂಜಾರ್‍ ಆರೋಪಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ವಿತರಿಸುವ ಪಡಿತರದ
ಗುಣಮಟ್ಟದಲ್ಲಿ ವ್ಯತ್ಯಾಸವಾ
ದಲ್ಲಿ ಅನಾರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪಡಿತರದ
ಗುಣಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಈ ಬಾರಿ ವಿತರಿಸಲಾಗಿರುವ ಅಕ್ಕಿಯನ್ನು ಬೇಯಿಸುವಾಗ ಕೆಲವು ಅಕ್ಕಿಗಳು ನೀರಿನಲ್ಲಿ ತೇಲುತ್ತಿವೆ. ಬೆಂದ ನಂತರ, ಅಂಟಿನ ರೀತಿ ಪರಿವರ್ತನೆಗೊಳ್ಳುತ್ತಿರುವದು ಅನುಮಾನ ಮೂಡಿಸಿದೆ. ಕೂಡಲೇ, ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿಸಬೇಕು‘ ಎಂದು ಒತ್ತಾಯಿಸಿದರು.

ಸಿಡಿಪಿಒ ನಿರ್ಮಲಾ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಬಹುತೇಕ ಪದಾರ್ಥಗಳು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಗುಣಮಟ್ಟದ ಪದಾರ್ಥಗಳನ್ನು ಮಾತ್ರ ವಿತರಿಸಲಾಗುತ್ತದೆ. ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿರುವುದರಿಂದ ಅಕ್ಕಿಯ ಮಾದರಿಯನ್ನು
ಸಂಗ್ರಹಿಸಿ ದಾವಣಗೆರೆ ಹಾಗೂ ಶಿವಮೊಗ್ಗದ ಆಹಾರ ಪರಿಶೀಲನಾ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.