ADVERTISEMENT

ಕಳಪೆ ಕೀಟನಾಶಕ: 59 ಪ್ರಕರಣ ದಾಖಲು

ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 2:56 IST
Last Updated 9 ಜೂನ್ 2021, 2:56 IST
ಕೃಷಿ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೈತರನ್ನು ಜಾಗೃತಗೊಳಿಸಲು ಆರಂಭಿಸಿರುವ ‘ಕೃಷಿ ಜಾಗೃತಿ ಅಭಿಯಾನ’ ವಿಶೇಷ ಪ್ರಚಾರ ವಾಹನಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ, ಉಸ್ತುವಾರಿ ಸಚಿವ ಬೈರತಿ ಬಸವರಾಜ ಚಾಲನೆ ನೀಡಿದರು
ಕೃಷಿ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೈತರನ್ನು ಜಾಗೃತಗೊಳಿಸಲು ಆರಂಭಿಸಿರುವ ‘ಕೃಷಿ ಜಾಗೃತಿ ಅಭಿಯಾನ’ ವಿಶೇಷ ಪ್ರಚಾರ ವಾಹನಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ, ಉಸ್ತುವಾರಿ ಸಚಿವ ಬೈರತಿ ಬಸವರಾಜ ಚಾಲನೆ ನೀಡಿದರು   

ದಾವಣಗೆರೆ: ಜಿಲ್ಲೆಯಲ್ಲಿ ಕಳಪೆ ಜೈವಿಕ ಕೀಟನಾಶಕ ನೀಡಿದ 59 ಪ್ರಕರಣಗಳು ದಾಖಲಾಗಿದೆ. ಕೃಷಿ ಪರಿಕರ ಒದಗಿಸುವ 10 ಅಂಗಡಿಗಳ ಲೈಸನ್ಸ್‌ ರದ್ದು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನಕಲಿ ಬೀಜ, ಕಳಪೆ ಗೊಬ್ಬರ ನೀಡಿದರೆ, ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಬೀಜ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದರ ಜತೆಗೆ ಐಪಿಸಿ ಸೆಕ್ಷನ್‌ 420ಯಲ್ಲಿ ವಂಚನೆ ಪ್ರಕರಣ ಕೂಡ ದಾಖಲಿಸಲು ಸೂಚನೆ ನೀಡಿದ್ದೇನೆ. ಇದರಿಂದ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಅವಕಾಶ ಸಿಗಲಿದೆ’ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಈ ವರ್ಷದ ಮುಂಗಾರು ಹಂಗಾಮಿಗೆ 1.63 ಲಕ್ಷ ಕ್ವಿಂಟಲ್‍ನಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನಿದ್ದು, ಬೀಜ ಹಾಗೂ ರಸಗೊಬ್ಬರದ ಯಾವುದೇ ಕೊರತೆಯಿಲ್ಲ. ಸರ್ಕಾರದಿಂದ 14 ಬಗೆಯ ಬೆಳೆಗಳ ಬೀಜಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಬಿತ್ತನೆ ಬೀಜದ ಸಬ್ಸಿಡಿಗಾಗಿ ಸರ್ಕಾರ ಮೊದಲು ₹ 50 ಕೋಟಿ, ಈಗ ₹ 30 ಕೋಟಿ ಒಟ್ಟು ₹ 80 ಕೋಟಿ ಬಿಡುಗಡೆ ಮಾಡಿದೆ ಎಂದರು.

ಚೀನಾದಿಂದ ನಕಲಿ ಬೀಜ ಅನಾಮದೇಯವಾಗಿ ಬರುತ್ತಿದೆ ಎಂದು ಕಳೆದ ವರ್ಷವೂ ಮಾಹಿತಿಗಳು ಹರಿದಾಡಿದ್ದವು. ಈ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಇರುವಂತೆ ಸೂಚಿಸಲಾಗಿತ್ತು. ಅಂಥ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಈ ವರ್ಷ ಮತ್ತೆ ಆ ಮಾಹಿತಿ ಹರಿದಾಡುತ್ತಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಉತ್ತಮವಾಗಿ ಬೆಳೆಯೂ ಬರಬೇಕು. ಅದಕ್ಕಾಗಿ ರೈತರಿಗೆ ಯಾವುದೇ ಬಗೆಯ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೃಷಿ ಸಾಮಗ್ರಿ ಪೂರೈಕೆಗೆ ಸರ್ಕಾರ ಬದ್ಧವಿದೆ ಎಂದು ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದರು.

‘ಜಿಲ್ಲೆಯಲ್ಲಿ ಮೆಕ್ಕೆಜೋಳದೊಂದಿಗೆ ತೊಗರಿ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡಬೇಕು. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯವನ್ನು ಅಂತರ ಬೆಳೆಯಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಸೂರ್ಯಕಾಂತಿ, ನೆಲಗಡಲೆಗೂ ಸಬ್ಸಿಡಿ ನೀಡುತ್ತಿದ್ದೇವೆ. ರೈತರು ಮೆಕ್ಕೆಜೋಳದ ಜೊತೆಗೆ ತೊಗರಿಯನ್ನು ಅಂತರ ಬೆಳೆಯಾಗಿ ಹಾಕಬಹುದು. ಬಹುಬೆಳೆಗೆ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ತೊಗರಿ ಬೆಳೆಯಲಾಗುತ್ತಿತ್ತು. ಈ ವರ್ಷ ಒಟ್ಟು 16 ಸಾವಿರ ಹೆಕ್ಟೇರ್‌ ತೊಗರಿ ಕೃಷಿ ಮಾಡುವ ಗುರಿ ಹೊಂದಲಾಗಿದೆ. 1 ಲಕ್ಷ ಕ್ವಿಂಟಲ್‌ ಬೆಳೆದರೆ ಖರೀದಿ ಕೇಂದ್ರ ತೆರೆಯಲು ಅನುಕೂಲವಾಗುತ್ತದೆ. ಇದಕ್ಕಾಗಿಯೇ ಇಲಾಖೆಯಿಂದಲೇ 2 ಕೆ.ಜಿ. ತೊಗರಿ ಬೀಜದ ಪಾಕೆಟ್‍ ಅನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ನೀಡಲಾಗುತ್ತಿದೆ. ಅಲ್ಲದೆ 500 ಹೆಕ್ಟೇರ್‌ ನಲ್ಲಿ ಶೇಂಗಾ ಹಾಗೂ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ಮಾಹಿತಿ ನಿಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಪ್ರಧಾನಿ ಫಸಲ್ ಬಿಮಾ ಯೋಜನೆ ಬಗ್ಗೆ ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಯಾರಿಗೋ ಒಬ್ಬರಿಗೆ ವಿಮೆ ಬಂದಿಲ್ಲ ಎಂದಾಗ ಉಳಿದವರು ಹಿಂದೆ ಸರಿಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಿ ವಿಮೆ ಕಟ್ಟುವಂತೆ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಮೇಯರ್‌ ಎಸ್.ಟಿ. ವೀರೇಶ್, ಕೃಷಿ ಇಲಾಖೆ ಹೆಚ್ಚುವರಿ ಆಯುಕ್ತ ವೆಂಕಟರಾವ್ ಜೆ. ಪಾಟೀಲ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ಹನುಮಂತರಾಯ ಇದ್ದರು.

‘ಸಬ್ಸಿಡಿ ಮುಂದುವರಿಸಿ’

ಹನಿ ನೀರಾವರಿ, ಕೃಷಿ ಪರಿಕರ ಖರೀದಿ ಮಾಡುವ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90, ಉಳಿದವರಿಗೆ ಶೇ 50 ಸಬ್ಸಿಡಿ ಸಿಗುತ್ತಿತ್ತು. ಅದನ್ನು ಕಡಿತಗೊಳಿಸಲಾಗಿದೆ. ಇದರಿಂದ ರೈತರಿಗೆ ಪ್ರೋತ್ಸಾಹ ಕಡಿಮೆಯಾಗಿದೆ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ತಿಳಿಸಿದರು. ಸಬ್ಸಿಡಿ ಮುಂದುವರಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಸಚಿವ ಬಿ.ಸಿ. ಪಾಟೀಲ ಮಾಹಿತಿ ನೀಡಿದರು.

ಸೆಣಬು, ಹಸಿರೆಲೆ ಗೊಬ್ಬರಕ್ಕೆ ಪ್ರೋತ್ಸಾಹ ಧನ ನೀಡಬೇಕು ಎಂದು ಶಾಸಕ ಎಸ್‌.ವಿ. ರಾಮಚಂದ್ರ ಆಗ್ರಹಿಸಿದರು. ಅದಕ್ಕಾಗಿ ₹ 5 ಕೋಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಭತ್ತ ಖರೀದಿ ಕೇಂದ್ರ ಗೊಂದಲ

ಮೇ 5ರ ಒಳಗೆ ನೋಂದಣಿ ಮಾಡಿಕೊಂಡ ರೈತರಿಂದ ಜೂನ್‌ 30ರ ವರೆಗೆ ಭತ್ತ ಖರೀದಿಗೆ ಅವಕಾಶ ಇದೆ ಎಂದು ಸಚಿವ ಬಿ.ಸಿ. ಪಾಟೀಲ ತಿಳಿಸಿದರು. ಜಿಲ್ಲೆಯಲ್ಲಿ ಎಲ್ಲಿ ಖರೀದಿ ಕೇಂದ್ರ ಇದೆ ಎಂಬ ಪ್ರಶ್ನೆಗೆ ಕೃಷಿ ಸಚಿವರು, ಉಸ್ತುವಾರಿ ಸಚಿವರು, ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ.

ಮೇ 5ರ ಒಳಗೆ 3 ಮಂದಿ ಮಾತ್ರ ಹೆಸರು ನೋಂದಾಯಿಸಿದ್ದರಿಂದ ಖರೀದಿ ಕೇಂದ್ರ ತೆರೆದಿಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.