ADVERTISEMENT

ದಾವಣಗೆರೆ: ಪರಿಶಿಷ್ಟರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು–ಕೊರತೆ ಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 5:54 IST
Last Updated 9 ಅಕ್ಟೋಬರ್ 2021, 5:54 IST
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕುಂದು–ಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿದರು. ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇದ್ದಾರೆ.
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕುಂದು–ಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿದರು. ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇದ್ದಾರೆ.   

ದಾವಣಗೆರೆ: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸಿ.ಬಿ. ರಿಷ್ಯಂತ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು–ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಜಾತೀಯತೆ ಜೀವಂತವಾಗಿದೆ. ಹಲವು ದೇವಸ್ಥಾನಗಳಲ್ಲಿ ಇಂದಿಗೂ ಪ್ರವೇಶವಿರುವುದಿಲ್ಲ. ಇವರಿಗೆ ಕ್ಷೌರ ಮಾಡಲು ನಿರಾಕರಿಸುತ್ತಾರೆ. ಹೋಟೆಲ್‍ಗಳಲ್ಲಿ ಸವರ್ಣೀಯರೊಂದಿಗೆ ಟೀ, ಕಾಫಿಯನ್ನೂ ನೀಡುತ್ತಿಲ್ಲ. ದೇವದಾಸಿ ಪದ್ಧತಿ, ಬೇವಿನ ಉಡುಗೆಯಂತಹ ಅನಿಷ್ಠ ಪದ್ಧತಿಗಳಿಗೆ ಇವರು ಬಲಿಯಾಗುತ್ತಿದ್ದು, ಅವುಗಳನ್ನು ತಪ್ಪಿಸಲು ಜನಾಂಗಗಳ ಪರವಾಗಿ ಪೊಲೀಸ್ ಇಲಾಖೆ ನಿಲ್ಲಬೇಕು’ ಎಂದು ಮುಖಂಡರು ಆಗ್ರಹಿಸಿದರು.

ADVERTISEMENT

ಜಗಳೂರು ತಾಲ್ಲೂಕಿನ ಮುಖಂಡ ಸತೀಶ್ ಮಾತನಾಡಿ, ‘ತಾಲ್ಲೂಕಿನ ಮಡ್ಡರಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಹಬ್ಬದ ಸಂದರ್ಭ ಹೆಣ್ಣುಮಕ್ಕಳಿಗೆ ಬೇವಿನುಡಿಗೆ, ನಾಲಿಗೆಗೆ ತಂತಿ ಸಿಕ್ಕಿಸಿಕೊಳ್ಳುವಂತಹ ಆಚರಣೆಗಳಲ್ಲಿ ತೊಡಗಿಕೊಳ್ಳುತ್ತಿದ್ದು, ಅಧಿಕಾರಿಗಳ ಮಟ್ಟದಲ್ಲಿ ಅವರಿಗೆ ಸೂಕ್ತ ತಿಳಿವಳಿಕೆ ನೀಡಿ ಇಂತಹ ಅನಿಷ್ಟ ಪದ್ಧತಿಗಳಿಂದ ಹೊರ ತರಲು ಸರ್ಕಾರ ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದರು.

ಜಗಳೂರು ಮುಖಂಡ ಹಾಲೇಶ್ ಬಿಳಿಚೋಡು ಮಾತನಾಡಿ, ‘ಉಚ್ಚಂಗಿದುರ್ಗ ದೇವಸ್ಥಾನದಲ್ಲಿ ನಡೆಯುವ ಕಾರಹುಣ್ಣಿಮೆ ಹಬ್ಬಕ್ಕೆ ದೇವದಾಸಿಯರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ನಮ್ಮ ಭಾಗದಿಂದ ಹೆಚ್ಚು ಜನ ಹೋಗುತ್ತಿದ್ದಾರೆ. ಇದನ್ನು ತಡೆಯಬೇಕು. ಬಿಳಿಚೋಡು ಗ್ರಾಮದ ಸರ್ಕಲ್ ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಮನವಿ ಮಾಡಿದರು.

ಹರಿಹರ ತಾಲ್ಲೂಕಿನ ಮುಖಂಡರು ಮಾತನಾಡಿ, ‘ಬಾನುವಳ್ಳಿ ಗ್ರಾಮದಲ್ಲಿ 12 ಜನ ಮಾಜಿ ದೇವದಾಸಿಯರಿದ್ದು, ಅವರಿಗೆ ಮನೆ ಮಂಜೂರಾದರೂ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ. ಆದಷ್ಟು ಬೇಗ ಪರಿಹಾರ ಕೊಡಿಸಬೇಕು’ ಎಂದು ಮನವಿ ಮಾಡಿದರು.

ದೇವಾಲಯದೊಳಗಡೆ ಪ್ರವೇಶ ನಿರ್ಬಂಧ:‘ನೀರ್ಥಡಿ ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯದಲ್ಲಿ ಇಂದಿಗೂ ಮಾದಿಗರನ್ನು ಒಳಗಡೆ ಪ್ರವೇಶಿಸಲು ಬಿಡುತ್ತಿಲ್ಲ. ಅವರಿಗೆ ರಕ್ಷಣೆ ಒದಗಿಸಬೇಕು. ತಾನು ಹುಟ್ಟಿದ್ದು, ಇಲ್ಲೇ ಆದರೂ ಇದುವರೆಗೂ ದೇವಸ್ಥಾನದ ಒಳಗಡೆ ಪ್ರವೇಶಿಸಲಾಗಿಲ್ಲ‘ ಎಂದು ಮಂಜುನಾಥ್ ಅವರು ತಮ್ಮ ಅಳಲು ತೋಡಿಕೊಂಡರು.

ಎಸ್.ಪಿ. ಪ್ರತಿಕ್ರಿಯಿಸಿ ‘ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಸೂಕ್ರ ಕ್ರಮ ಕೈಗೊಳ್ಳಿ’ ಎಂದರು.

ಕುಂದುವಾಡ ಮಂಜುನಾಥ್ ಮಾತನಾಡಿ, ‘ಪರಿಶಿಷ್ಟರ ಮೇಲೆ ಮುಂದುವರಿದ ಜನಾಂಗಗಳವರು ಸುಳ್ಳು ದೂರು ನೀಡುತ್ತಾರೆ. ಹಾಗಾಗಿ ತಕ್ಷಣ ಎಫ್‍ಐಆರ್ ಆಗುತ್ತದೆ. ಹಾಗಾಗದಂತೆ ತಡೆಯಿರಿ’ ಎಂದಾಗ ಎಸ್.ಪಿ ಅವರು ಪ್ರತಿಕ್ರಿಯಿಸಿ ದೂರು ನೀಡಿದ ಮೇಲೆ ಎಫ್.ಐ.ಆರ್ ಮಾಡಲು ಬರುವುದಿಲ್ಲ. ರಾಜಿ ಪಂಚಾಯತಿಗೆ ಅವಕಾಶವಿಲ್ಲ ಎಂದರು.

ಹಿಂಡಸಘಟ್ಟ ಹನುಮಂತಪ್ಪ ಮಾತನಾಡಿ, ‘ಮನೋಜ್ ಎಂಬ ಪರಿಶಿಷ್ಟ ಜಾತಿಯ ಯುವಕ ಅಂತರಜಾತಿ ವಿವಾಹವಾಗಿದ್ದು, ಹುಡುಗಿ ಕಡೆಯವರು ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಇಬ್ಬರು ವಯಸ್ಕರಾಗಿದ್ದು, ಯುವಕನಿಗೆ ನ್ಯಾಯ ಒದಗಿಸಿ’ ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ, ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖ ಅಧಿಕಾರಿ ಕೆ.ಎಚ್. ವಿಜಯ್‍ಕುಮಾರ್ ಪರಿಶಿಷ್ಟ ಜಾತಿ ಪಂಗಡಗಳ ಸಂಘಟನೆ ಮುಖಂಡರಾದ ಗುಮ್ಮನೂರು ಮಲ್ಲಿಕಾರ್ಜುನ, ಹೆಗ್ಗೆರೆ ರಂಗಪ್ಪ, ಆವರಗೆರೆ ವಾಸು, ತಿಮ್ಮಣ್ಣ, ಹನುಮಂತಪ್ಪ, ರುದ್ರೇಶ್, ಹರೀಶ್, ಸೋಮಲಾಪುರ ಹನುಮಂತಪ್ಪ, ಪಂಚಾಕ್ಷರಯ್ಯ, ಜ್ಯೋತಿ ಕುಮಾರ್, ಉಪಸ್ಥಿತರಿದ್ದರು.

ಪರಿಶಿಷ್ಟರ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಜೈಲು
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಂತ್ಯಕ್ರಿಯೆ ಮಾಡಲು ಭೇದ ಮಾಡಿದರೆ ಅವರ
ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದರು.

ನ್ಯಾಮತಿ ತಾಲ್ಲೂಕಿನ ಮುಖಂಡ ರಂಗನಾಥ ಎ.ಕೆ. ಮಾತನಾಡಿ, ‘ಒಂದೂವರೆ ಎಕರೆ ಪ್ರದೇಶದಲ್ಲಿಹಿಂದೂ ಸ್ಮಶಾನ ನಿರ್ಮಿಸಿದ್ದು, ಪರಿಶಿಷ್ಟ ಜಾತಿಯ ಹೆಣ ಸುಡಲು ಸ್ಮಶಾನಕ್ಕೆ ಹೋದರೆ ಸುಡಲು ಅನುಮತಿ ನೀಡುತ್ತಿಲ್ಲ. ಈ ಹಿಂದೆ ಅಂತ್ಯಕ್ರಿಯೆ ಮಾಡಲು ಹೋದಾಗ ಶವವನ್ನು ಹೊರ ಹಾಕಿದ ನಿದರ್ಶನ ಉಂಟು. ಇದರಿಂದ ಸಾಕಷ್ಟು ಬೇಸತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ‘ಮನುಷ್ಯ ಬದುಕಿದ್ದಾಗ ಸಮಾನತೆಯಿಂದ ಬದುಕಲ್ಲ, ಸತ್ತ ಮೇಲಾದರೂ ಸಮಾನತೆಯಿಂದ ಇರಬೇಕು ಎಂಬ ಆಶಯದೊಂದಿಗೆ ಇರುವ ಸುತ್ತೋಲೆ ಮೇರೆಗೆ ಹಿಂದು ರುದ್ರಭೂಮಿ ಒದಗಿಸಲಾಗಿದೆ’ ಎಂದರು.

‘ಗ್ರಾಮದೊಳಗೆ ಚಪ್ಪಲಿ ಧರಿಸುವಂತಿಲ್ಲ’
‘ಮಲ್ಲಹಳ್ಳಿ ಗ್ರಾಮದಲ್ಲಿ ಹಬ್ಬ ಹರಿದಿನಗಳಲ್ಲಿ ಪರಿಶಿಷ್ಟರು ಊರ ಒಳಗೆ ಚಪ್ಪಲಿ ಹಾಕಿಕೊಂಡು ಹೋಗುವುದನ್ನು ಅಲ್ಲಿನ ಗ್ರಾಮಸ್ಥರು ನಿಷೇಧಿಸಿದ್ದು, ಅಪ್ಪಿತಪ್ಪಿ ಒಳ ಹೋದರೆ ಜಾತಿ ನಿಂದನೆ ಮಾಡುತ್ತಾರೆ. ಈ ಗ್ರಾಮದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು, ಪರಿಶಿಷ್ಟರ ಕುಟುಂಬದ ಮನೆಗೆ ಬೆಂಕಿ ಹಚ್ಚಿದ್ದು, ಸೂಕ್ತ ತನಿಖೆ ನಡೆಸಬೇಕು’ ಎಂದು ಮುಖಂಡರು ಆಗ್ರಹಿಸಿದರು.

‘ಬೆಳಿಗ್ಗೆ 6ಕ್ಕೆ ಮದ್ಯದಂಗಡಿ ಓಪನ್’
ಚನ್ನಗಿರಿಯ ಗೋವಿಂದಪ್ಪ ಮಾತನಾಡಿ, ಮದ್ಯದ ಅಂಗಡಿಗಳನ್ನು ಬೆಳಿಗ್ಗೆ 6 ಗಂಟೆಗೆ ತೆರೆಯುತ್ತಿದ್ದು, ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ನಿಯಮದಂತೆ ಬೆಳಿಗ್ಗೆ 10ರ ನಂತರ ಮದ್ಯದ ಅಂಗಡಿ ತೆರೆಯಲು ಸೂಚಿಸಬೇಕೆಂದು ಮನವಿ ಮಾಡಿದರು.

ಮೂರು ತಿಂಗಳಿಗೊಮ್ಮೆ ಸಭೆ
‘ಯಾವುದೇ ಅಪರಾಧ ಪ್ರಕರಣಗಳು ಕಂಡುಬಂದರೆ ತಕ್ಷಣ 112ಕ್ಕೆ ಕರೆಮಾಡಿ. ಬೇಕಿದ್ದರೆ ತಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಹೀಗೆ ಕರೆ ಮಾಡುವುದರಿಂದ ಪೊಲೀಸರು ತಕ್ಷಣ ಸ್ಪಂದಿಸುತ್ತಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

‘ಮುಂದಿನ ಸಭೆಗಳು ಮೂರು ತಿಂಗಳಿಗೊಮ್ಮೆ ನಾಲ್ಕನೇ ಶನಿವಾರ ಕಡ್ಡಾಯವಾಗಿ ನಡೆಯಲಿದ್ದು, ಈ ಕುರಿತು ಪತ್ರಿಕೆ ಹೇಳಿಕೆ ನೀಡಲಾಗುವುದು. ಯಾವುದೇ ಮುಖಂಡರಿಗೆ ಕರೆ ಮಾಡಲಾಗುವುದಿಲ್ಲ. ಹಾಗಾಗಿ ಪತ್ರಿಕೆ ಸುದ್ದಿ ನೋಡಿಕೊಂಡು ಸಭೆಗೆ ಹಾಜರಾಗಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.