ADVERTISEMENT

ಸಾರ್ವಜನಿಕ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ

ಖಾಸಗಿ ಲ್ಯಾಬ್‌ಗಳಿಂದ ಬಡರೋಗಿಗಳ ಲೂಟಿ ಆರೋಪ

ಡಿ.ಶ್ರೀನಿವಾಸ
Published 5 ಏಪ್ರಿಲ್ 2022, 5:39 IST
Last Updated 5 ಏಪ್ರಿಲ್ 2022, 5:39 IST
ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ
ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ   

ಜಗಳೂರು: ತಾಲ್ಲೂಕು ಹಾಗೂ ಹೊರಭಾಗದ ವಿವಿಧ ಹಳ್ಳಿಗಳಿಂದ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ರೋಗಿಗಳು ಧಾವಿಸಿ ಚಿಕಿತ್ಸೆ ಪಡೆಯುತ್ತಿರುವ ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧ ಕೊರತೆ ಹಾಗೂ ಪ್ರಯೋಗಾಲಯ ಸಮಸ್ಯೆಯಿಂದ ರೋಗಿಗಳು ಪರದಾಡುವಂತಾಗಿದೆ.

100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ವೈದ್ಯರ ಕೊರತೆಯಾಗಿತ್ತು. ಪ್ರಸ್ತುತ ಚರ್ಮ, ಕಣ್ಣು, ಕಿವಿ, ಮೂಗು ಹಾಗೂ ಮ್ಕಕಳ ತಜ್ಞರು, ಮೂಳೆ ತಜ್ಞರು ಸೇರಿದಂತೆ 14 ವೈದ್ಯರ ನೇಮಕವಾಗಿದ್ದು, ಬಹುತೇಕ ವೈದ್ಯರ ಹುದ್ದೆಗಳು ಭರ್ತಿಯಾಗಿವೆ. ಆದರೆ ತೀರಾ ಅಗತ್ಯವಾಗಿರುವ ಫಿಜಿಶಿಯನ್ ವೈದ್ಯರ ಹುದ್ದೆ ಖಾಲಿ ಇದ್ದು, ಇದರ ಪರಿಣಾಮ ವೆಂಟಿಲೇಟರ್, ಐಸಿಯು ಹಾಗೂ ಪ್ರಯೋಗಾಲಯಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ತೀವ್ರ ಸಮಸ್ಯೆಯಾಗಿದೆ

ಪ್ರತಿದಿನ 1 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹಲವು ತಿಂಗಳಿಂದ ಔಷಧ ಕೊರತೆಯಾಗಿದೆ. ಈ ಬಗ್ಗೆ ಶಾಸಕ ಎಸ್.ವಿ. ರಾಮಚಂದ್ರ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಆರೋಗ್ಯರಕ್ಷಾ ಸಮಿತಿ ಸಭೆಯಲ್ಲಿ ಅಗತ್ಯ ಔಷಧ ಪೂರೈಕೆಯ ಬಗ್ಗೆ ಚರ್ಚೆಯಾಗಿದ್ದು, ಸಭೆಯಲ್ಲಿದ್ದ ಡಿಎಫ್ಒ ಡಾ. ನಾಗರಾಜ್ ಅವರು ರಾಜ್ಯಮಟ್ಟದಲ್ಲಿ ಔಷಧ ಕೊರತೆ ಇರುವ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದರು.

ADVERTISEMENT

ಅಣಬೆಯಂತೆ ಎದ್ದ ಖಾಸಗಿ ಲ್ಯಾಬ್‌ಗಳು: 100 ಹಾಸಿಗೆಯ ಈ ಆಸ್ಪತ್ರೆಯ ಮೂಲೆಯೊಂದರ ಕೊಠಡಿಯಲ್ಲಿ ಲ್ಯಾಬ್ ಇದೆ. ಹೆಸರಿಗಷ್ಟೇ ಹೈಟೆಕ್ ಪ್ರಯೋಗಾಲಯ. ಆದರೆ ನಿತ್ಯ ಚಿಕಿತ್ಸೆಗೆ ಬರುವ ಶೇ 90ರಷ್ಟು ರೋಗಿಗಳಿಗೆ ಇಲ್ಲಿ ರಕ್ತಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಗಳನ್ನು ಕೈಗೊಳ್ಳುವುದಿಲ್ಲ. ಮೂತ್ರಪಿಂಡ, ಲಿವರ್ ಹಾಗೂ ಕೊಲೆಸ್ಟ್ರಾಲ್ ಲಿಕ್ವಿಡ್ ಪ್ರೊಫೈಲ್ ಹಾಗೂ ಮಧುಮೇಹ ಪರೀಕ್ಷೆಗಾಗಿ ಆಸ್ಪತ್ರೆಯ ಮುಂಭಾಗದಲ್ಲಿ ಅಣಬೆಗಳಂತೆ ತಲೆಎತ್ತಿರುವ ಖಾಸಗಿ ಪ್ರಯೋಗಾಲಯಗಳಲ್ಲಿ ದುಪ್ಪಟ್ಟು ಹಣ ತೆತ್ತು ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದಂತಹ ಸ್ಥಿತಿ ಇದೆ.

ಜ್ವರ ಸೇರಿದಂತೆ ಯಾವುದೇ ಕಾಯಿಲೆಗೆ ರಕ್ತಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕಿದ್ದು, ಕೆಲವು ಖಾಸಗಿ ಲ್ಯಾಬ್‌ಗಳಲ್ಲಿ ಹಳೆಯ ಕಳಪೆ ಮಷಿನ್‌ಗಳನ್ನು ಇಟ್ಟುಕೊಂಡು, ರೋಗಿಗಳಿಂದ ದುಪ್ಪಟ್ಟು ಹಣ ಪಡೆದು, ರಕ್ತಪರೀಕ್ಷೆಯ ವರದಿಯನ್ನು ತಪ್ಪಾಗಿ ನೀಡುವ ಮೂಲಕ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಹನುಮಂತಾಪುರ ಗ್ರಾಮದ ಜಿ.ಸಿ. ಅಜಯ್ ಆರೋಪಿಸಿದ್ದಾರೆ.

‘ನಮ್ಮ ತಾಯಿಗೆ ಹಾಗೂ ತಂಗಿಗೆ ವೈದ್ಯರ ಸಲಹೆಯಂತೆ ಇಲ್ಲಿನ ಖಾಸಗಿ ಲ್ಯಾಬ್‌ನಲ್ಲಿ ಕೆಲ ತಿಂಗಳ ಹಿಂದೆ ರಕ್ತಪರೀಕ್ಷೆ ಮಾಡಿಸಿದ್ದೆ. ಆದರೆ ತೀವ್ರ ಏರುಪೇರಿನಿಂದ ಕೂಡಿದ ವರದಿ ಕೊಟ್ಟಿದ್ದರು. ತಾಯಿಗೆ ಮಧುಮೇಹ ಹೆಚ್ಚಿದ್ದರೂ ಕಡಿಮೆ ಇದೆ ಎಂದೂ ಹಾಗೂ ತಂಗಿಗೆ ಹಿಮೋಗ್ಲೋಬಿನ್ ಸರಿ ಇದ್ದರೂ ತೀವ್ರ ಕಡಿಮೆ ಪ್ರಮಾಣದಲ್ಲಿದೆ ಎಂದೂ ವರದಿ ಕೊಟ್ಟಿದ್ದರು. ಸಂಶಯ ಬಂದು ನಂತರ ದಾವಣಗೆರೆಗೆ ತೆರಳಿ ಅಲ್ಲಿನ ಲ್ಯಾಬ್‌ನಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ಈ ವ್ಯತ್ಯಾಸ ತಿಳಿಯಿತು. ಕೇವಲ ಹಣಕ್ಕಾಗಿ ಬೇಕಾಬಿಟ್ಟಿ ವರದಿ ಕೊಡಲಾಗುತ್ತಿದೆ. ಅಣಬೆಗಳಂತಿರುವ ಕಳಪೆ ಖಾಸಗಿ ಲ್ಯಾಬೋರೇಟರ್‌ಗಳಿಗೆ ಕಡಿವಾಣ ಹಾಕಿ ಬಡರೋಗಿಗಳ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸಬೇಕು’ ಎಂದು ಜಿ.ಸಿ. ಅಜಯ್ ಒತ್ತಾಯಿಸಿದ್ದಾರೆ.

ಐಸಿಯು ಘಟಕ ನಿರ್ಮಾಣ

‘ಪ್ರತಿನಿತ್ಯ ಸುಮಾರು 1 ಸಾವಿರ ರೋಗಿಗಳು ಬರುತ್ತಾರೆ. 25 ಹಾಸಿಗೆಯ ಆಸ್ಪತ್ರೆಯಲ್ಲಿ ಫಿಜಿಷಿಯನ್ ಹೊರತು ಎಲ್ಲ ವಿಭಾಗದ 14 ವೈದ್ಯರ ನೇಮಕವಾಗಿದೆ. ಐಸಿಯು ಘಟಕವನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ. 6 ವೆಂಟಿಲೇಟರ್ ಗಳನ್ನು ಸನ್ನದ್ಧವಾಗಿಡಲಾಗಿದೆ. ಹೈಟೆಕ್ ಪ್ರಯೋಗಾಲಯದಲ್ಲಿ ಬಯೋಕೆಮಿಸ್ಟ್ರಿ ಹಾಗೂ ಯೂರಿನ್ ಅನಾಲೈಸರ್ ಅಳವಡಿಸಿ ಮೇಲ್ದರ್ಜೆಗೇರಿಸಬೇಕಿದೆ. ಮಂಜೂರು ಮಾಡುವುದಾಗಿ ಡಿಎಚ್ಒ ಕಚೇರಿಯಿಂದ ಭರವಸೆ ದೊರೆತಿದೆ’ ಎಂದು ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ. ನೀರಜ್ ಮಾಹಿತಿ ನೀಡಿದರು.

‘ಆಧುನಿಕ ಸೌಲಭ್ಯದ ಆಸ್ಪತ್ರೆ ನಿರ್ಮಾಣ’

ತಾಲ್ಲೂಕು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಸ್ತುತ ಆಸ್ಪತ್ರೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಭವಿಷ್ಯದ ದೃಷ್ಟಿಯಿಂದ ವಿಶಾಲವಾದ, ಸುಸಜ್ಜಿತ ನೂತನ ಆಸ್ಪತ್ರೆಯನ್ನು ನಿರ್ಮಿಸುವ ಚಿಂತನೆ ಇದೆ. ಅಗತ್ಯ ಜಾಗದ ಕೊರತೆ ಇದೆ. ಪಟ್ಟಣದ ಹೊರವಲಯದಲ್ಲಿ ಖಾಸಗಿ ಜಮೀನು ಖರೀದಿಸುವ ಅಥವಾ ಮಿನಿ ವಿಧಾನಸೌಧದ ಹಿಂಭಾಗದಲ್ಲಿರುವ ವಿಶಾಲ ಜಾಗ ಸೇರಿದಂತೆ ಸರಿಯಾದ ಜಾಗಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.