ADVERTISEMENT

ಪೌರಕಾರ್ಮಿಕರು, ನೌಕರರ ಕಲ್ಯಾಣಕ್ಕೆ ಆದ್ಯತೆ

ಬಜೆಟ್ ಪೂರ್ವಭಾವಿ ಸಭೆ: ಆಯುಕ್ತೆ ಜಿ. ರೇಣುಕಾ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:04 IST
Last Updated 31 ಜನವರಿ 2023, 4:04 IST
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಜಿ. ಮಾತನಾಡಿದರು. ಮೇಯರ್ ಜಯಮ್ಮ ಗೋಪಿನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಇದ್ದರು–ಪ್ರಜಾವಾಣಿ ಚಿತ್ರ
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಜಿ. ಮಾತನಾಡಿದರು. ಮೇಯರ್ ಜಯಮ್ಮ ಗೋಪಿನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಇದ್ದರು–ಪ್ರಜಾವಾಣಿ ಚಿತ್ರ   

ದಾವಣಗೆರೆ: ಪೌರಕಾರ್ಮಿಕರು ಹಾಗೂ ‘ಡಿ’ ಗ್ರೂಪ್‌ ನೌಕರರ ಕಲ್ಯಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಮಹಾ ನಗರಪಾಲಿಕೆ ಆಯುಕ್ತೆ ಜಿ. ರೇಣುಕಾ ಭರವಸೆ ನೀಡಿದರು.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ 2ನೇ ಪೂರ್ವಭಾವಿ ಸಭೆಯಲ್ಲಿ ಅವರು, ‘ಶೇ 80ರಷ್ಟು ‘ಡಿ’ಗ್ರೂಪ್ ನೌಕರರು ಇದ್ದು, ಅವರಿಗೆ ವಸತಿ ಸೇರಿ ಗರಿಷ್ಠ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ಪೌರಕಾರ್ಮಿಕರಿಗೆ ಮನೆ, ನೌಕರರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಕಲ್ಪಿಸಲಾಗುವುದು. ಉಪಾಹಾರಕ್ಕೆ ಒಂದು ವರ್ಷದ ಅವಧಿಗೆ ₹ 70 ಲಕ್ಷಕ್ಕೆ ಟೆಂಡರ್ ಕರೆದಿದ್ದು, ಮೊಟ್ಟೆಯನ್ನೂ ನೀಡಲಾಗುವುದು’ ಎಂದು ಹೇಳಿದರು.

ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ಎಲ್‌.ಎಂ.ಎಚ್. ಸಾಗರ್ ಮಾತನಾಡಿ, ‘ಹೊರಗುತ್ತಿಗೆ ಹಾಗೂ ಪೌರಕಾರ್ಮಿಕರಿಗೆ ಗುರುತಿನ ಪತ್ರ ನೀಡಬೇಕು. ಗಾಂಧಿನಗರ, ವೆಂಕಾಭೋವಿ ಕಾಲೊನಿ, ಭೋವಿ ಕಾಲೊನಿಗಳಲ್ಲಿ ಇಂದಿಗೂ ನಗರಸಭೆ ಎಂದೇ ಹೆಸರಿದ್ದು, ಅದನ್ನು ಮಹಾನಗರಪಾಲಿಕೆ ಎಂದು ಬದಲಾಯಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಹಾನಗರಪಾಲಿಕೆಯ 45 ವಾರ್ಡ್‌ಗಳಲ್ಲೂ ಗ್ರಂಥಾಲಯ ಆರಂಭಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಹಣ ಮೀಸಲಿಡಬೇಕು. ಅದಕ್ಕೆ ಒಂದು ಸಮಿತಿ ರಚಿಸಬೇಕು. ಜಕಾತಿ ವಸೂಲಿ ವೇಳೆ ಗೂಂಡಾಗಿರಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು’ ಪತ್ರಕರ್ತ ವೀರಪ್ಪ ಎಂ. ಭಾವಿ ಸಲಹೆ ನೀಡಿದರು.

‘45 ವಾರ್ಡ್‌ಗಳಲ್ಲೂ ಗ್ರಂಥಾಲಯ ಆರಂಭ ಕಷ್ಟವಾಗುವುದು. ಹಂತ ಹಂತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಖಾತಾ ಆಂದೋಲನ ಆರಂಭಿಸಲು ಸಚಿವರಿಂದ ಸೂಚನೆ ಬಂದಿದ್ದು, ಶೀಘ್ರ ಆರಂಭಿಸಲಾಗುವುದು. ಜಕಾತಿ ವಸೂಲಿ ಸಂಬಂಧ ನೋಟಿಫಿಕೇಷನ್ ಹೊರಡಿಸಲಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿರುವ ಬಾಡಿಗೆದಾರರ ಪಟ್ಟಿ ಮಾಡಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಅವರಿಗೆ ಕಲ್ಪಿಸಲಾಗುವುದು ಎಂದು’ ಜಿ. ರೇಣುಕಾ ಹೇಳಿದರು.

‘ಪತ್ರಕರ್ತರ ಕುಟುಂಬದವರಿಗೆ ಚಿಕಿತ್ಸೆ ಕೊಡಿಸಲು ಬಜೆಟ್‌ನಲ್ಲಿ ಅನುದಾನ ನೀಡುವುದರ ಬಗ್ಗೆ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ಪಡೆಯಲಾಗುವುದು. ನಗರ ವ್ಯಾಪ್ತಿಯ ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಪತ್ರಿಕಾ ಏಜೆಂಟರಿಗೂ ಇದು ಅನ್ವಯಿಸುತ್ತದೆ’ ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ‘ಮಹಾನಗರ ಪಾಲಿಕೆ ಆವರಣದಲ್ಲಿರುವ ಪುಟ್ಟಣ್ಣ ಕಣಗಾಲ್ ರಂಗಮಂದಿರಕ್ಕೆ ಕಾಯಕಲ್ಪ ನೀಡಬೇಕು. ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಬೇಕು. ನಗರದ ಶಾಲಾ–ಕಾಲೇಜುಗಳ ಎದುರಿನ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್‌ಗಳನ್ನು ಹಾಕಿದ್ದು, ಅವುಗಳನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಸೋಮ್ಲಾಪುರ ಹನುಮಂತಪ್ಪ ಮಾತನಾಡಿ, ‘ಸಮುದಾಯ ಭವನಗಳು ಅಪೂರ್ಣಗೊಂಡಿದ್ದು, ಅವುಗಳನ್ನು ಶೀಘ್ರ ಮುಗಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಹಣ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.