ADVERTISEMENT

ಖಾಸಗಿ ಹಾಸ್ಟೆಲ್‌ಗಳಿಂದ ವಂಚನೆ: ತನಿಖೆಗೆ ಜಿ.ಪಂ. ಸದಸ್ಯ ಬಸವರಾಜ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 14:36 IST
Last Updated 5 ಆಗಸ್ಟ್ 2019, 14:36 IST
ಕೆ.ಎಸ್. ಬಸವರಾಜ್
ಕೆ.ಎಸ್. ಬಸವರಾಜ್   

ದಾವಣಗೆರೆ: ‘ಜಿಲ್ಲೆಯ ಕೆಲವು ಖಾಸಗಿ ಹಾಸ್ಟೆಲ್‌ಗಳು ನಿಗದಿತ ಪ್ರಮಾಣದಲ್ಲಿ ಮಕ್ಕಳಿಲ್ಲದಿದ್ದರೂ ಸುಳ್ಳು ಲೆಕ್ಕ ತೋರಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಪಡೆದು ವಂಚಿಸುತ್ತಿವೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವರಾಜ ಒತ್ತಾಯಿಸಿದರು.

ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವನ್ನು ಕಲ್ಪಿಸಿಕೊಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಸರ್ಕಾರಿ ಹಾಸ್ಟೆಲ್‌ ಭರ್ತಿಯಾದ ಬಳಿಕ ಖಾಸಗಿ ಹಾಸ್ಟೆಲ್‌ಗಳಲ್ಲಿ ಆಶ್ರಯ ಪಡೆಯುವ ಒಬ್ಬ ವಿದ್ಯಾರ್ಥಿಗೆ ₹ 1,100 ಸಹಾಯಧನ ನೀಡಲಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ಊಟ ನೀಡಲು ಹಾಸ್ಟೆಲ್‌ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಕ್ಕಿ ವಿತರಿಸಲಾಗುತ್ತದೆ. ಹಾಸ್ಟೆಲ್‌ಗೆ ಹೋಗಿ ಪರಿಶೀಲಿಸಿದರೆ ಬರೀ ಬೀಗ ಹಾಕಿದ ಟ್ರಂಕ್‌ಗಳೇ ಇರುತ್ತವೆ. ವಿದ್ಯಾರ್ಥಿಗಳೇ ಕಾಣಿಸಿಕೊಳ್ಳುವುದಿಲ್ಲ’ ಎಂದು ಆಕ್ಷೇಪಿಸಿದರು.

‘ಶೇ 20ರಷ್ಟು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಶೇ 80ರಷ್ಟು ಭೋಗಸ್‌ ಬಿಲ್‌ ಪಡೆಯಲಾಗುತ್ತಿದೆ. ಪ್ರತಿ ವರ್ಷ ₹ 11 ಲಕ್ಷ ಬಿಲ್‌ ಹಣ ಪಾವತಿಸಲಾಗುತ್ತಿದೆ. ಪ್ರಭಾವಿ ರಾಜಕಾರಣಿಗಳೇ ಖಾಸಗಿ ಹಾಸ್ಟೆಲ್‌ಗಳನ್ನು ನಡೆಸುತ್ತಿದ್ದು, ಬಿಲ್‌ ಪಾಸು ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜ್ಯದಾದ್ಯಂತ ಇದೇ ಪರಿಸ್ಥಿತಿ ಇದೆ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಂಡರೆ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ’ ಎಂದು ಬಸವರಾಜ ತಿಳಿಸಿದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಾನಂದ ಕುಂಬಾರ, ‘ಇಲಾಖೆಯ ನೆರವಿನಿಂದ 21 ಖಾಸಗಿ ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿತ್ತು. ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ಕಾರಣಕ್ಕೆ ಮೂರಕ್ಕೆ ಅನುದಾನ ನೀಡುವುದನ್ನು ನಿಲ್ಲಿಸಲಾಗಿದ್ದು, ಉಳಿದ 18ಕ್ಕೆ ಮಾತ್ರ ಅನುದಾನ ಕೊಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಿಇಒ ಎಚ್‌. ಬಸವರಾಜೇಂದ್ರ, ‘ಈ ಬಗ್ಗೆ ಕೆಲ ದೂರುಗಳು ಬರುತ್ತಿವೆ. ತಂಡ ರಚಿಸಿಕೊಂಡು ಸಂಜೆ ವೇಳೆ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಹೆಚ್ಚು ವಿದ್ಯಾರ್ಥಿಗಳನ್ನು ದಾಖಲೆಯಲ್ಲಿ ತೋರಿಸಿದ್ದರೆ ಅಂಥ ಹಾಸ್ಟೆಲ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ತಪ್ಪು ಲೆಕ್ಕ ತೋರಿಸಿ ವಂಚಿಸಿರುವ ಹಣವನ್ನು ಅವರಿಂದ ವಸೂಲಿ ಮಾಡುವ ಕೆಲಸವೂ ಆಗಬೇಕು ಎಂದು ಬಸವರಾಜ ಒತ್ತಾಯಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ, ‘ಎಲ್ಲಾ ಖಾಸಗಿ ಹಾಸ್ಟೆಲ್‌ಗಳನ್ನು ತಪಾಸಣೆ ನಡೆಸಬೇಕು. 15 ದಿನಗಳ ಒಳಗೆ ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.