ADVERTISEMENT

ದಾವಣಗೆರೆ | ಆಸ್ತಿ ನೋಂದಣಿ ಶುಲ್ಕ ಹೆಚ್ಚಳದ ಬರೆ

ಚಂದ್ರಶೇಖರ ಆರ್‌.
Published 6 ನವೆಂಬರ್ 2023, 8:31 IST
Last Updated 6 ನವೆಂಬರ್ 2023, 8:31 IST
ಜಗಳೂರಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಬಂದಿರುವ ಜನರು
ಜಗಳೂರಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಬಂದಿರುವ ಜನರು   

ದಾವಣಗೆರೆ: ರಾಜ್ಯ ಸರ್ಕಾರ ಅಕ್ಟೋಬರ್‌ 1ರಿಂದ ಸ್ಥಿರಾಸ್ತಿಗಳ ನೋಂದಣಿಯ ಶುಲ್ಕವನ್ನು ಶೇ 25ರಿಂದ 30ರವರೆಗೂ ಹೆಚ್ಚಳ ಮಾಡಿದ್ದು, ಜಿಲ್ಲೆಯ ಮಧ್ಯಮ ವರ್ಗದವರು ತೊಂದರೆ ಎದುರಿಸುವಂತಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರದ ಈ ಶುಲ್ಕ ಹೆಚ್ಚಳ ಪ್ರಕ್ರಿಯೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ವಂತ ಮನೆ ಹೊಂದಬೇಕೆಂಬ ಮಧ್ಯಮ ವರ್ಗದವರು, ಕೂಲಿಕಾರರಿಗೆ ಶುಲ್ಕ ಏರಿಕೆಯಿಂದ ಸಂಕಷ್ಟ ಎದುರಾಗಿದೆ.

ನೋಂದಣಿ, ಮುದ್ರಾಂಕ ಶುಲ್ಕ ಹೆಚ್ಚಳದ ಜತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಭೂಮಿಗೆ ಹೊಸದಾಗಿ ಜಾರಿಗೆ ಬಂದಿರುವ ಮಾರ್ಗಸೂಚಿ ದರಕ್ಕಿಂತಲೂ ಶೇ 50 ಹಾಗೂ ರಾಜ್ಯ ಹೆದ್ದಾರಿ ಬದಿಯಲ್ಲಿನ ಭೂಮಿಗೆ ಶೇ 35ರಷ್ಟು ಹೆಚ್ಚುವರಿಯಾಗಿ ಮುದ್ರಾಂಕ ಶುಲ್ಕ ನಿಗದಿ ಮಾಡಲಾಗಿದೆ.

ADVERTISEMENT

ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಪ್ರದೇಶಗಳಲ್ಲಿನ ನೋಂದಣಿ ಶುಲ್ಕ ಕಡಿಮೆ ಮಾಡಿ, ಬೇರೆಡೆ ಹೆಚ್ಚು ಮಾಡಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ನೋಂದಣಿ ಶುಲ್ಕ ಆಧರಿಸಿ ಸ್ಥಿರಾಸ್ತಿ ಮಾರುಕಟ್ಟೆ ದರವನ್ನು ಹೆಚ್ಚಿಸಿರುವ ಕಾರಣ ‌ಆಸ್ತಿ ಮೌಲ್ಯವೂ ಹೆಚ್ಚಿದೆ. ಇದರಿಂದ ಮಧ್ಯಮ, ಕೆಳ ಮಧ್ಯಮ  ವರ್ಗದವರ ಆಸ್ತಿ ಖರೀದಿಸುವ ಕನಸಿಗೆ ಅಡ್ಡಿಯಾಗಿದೆ.

1 ಎಕರೆ ಆಸ್ತಿ ಮೌಲ್ಯ ಈ ಹಿಂದೆ ₹ 1 ಲಕ್ಷ ಇದ್ದರೆ ಪ್ರಸ್ತುತ ಈ ದರವನ್ನು ₹ 1.30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನೋಂದಣಿ ಮಾಡಿಸುವವರು ಹಿಂದೆ ₹ 7,000 ಕಟ್ಟಬೇಕಿದ್ದರೆ ಈಗ ಅದು ₹ 9,100ಕ್ಕೆ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಆಸ್ತಿ ನೋಂದಣಿ ಪ್ರಮಾಣ ಇಳಿಮುಖವಾಗಿದೆ. 2023ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ  ಆದಾಯ ಸಂಗ್ರಹ ಕೊಂಚ ಕಡಿಮೆಯಾಗಿದೆ. 2022ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ದಾಖಲೆ– ₹ 16,018, ಮುದ್ರಾಂಕ ಶುಲ್ಕ– ₹ 46.55 ಕೋಟಿ, ನೋಂದಣಿ ಶುಲ್ಕ– ₹ 9.38 ಕೋಟಿ, ದಾಖಲೆಗಳ ಸ್ಕ್ಯಾನಿಂಗ್‌– ₹ 68.05 ಲಕ್ಷ ಸೇರಿದಂತೆ ಒಟ್ಟು ₹ 56.61 ಕೋಟಿ ಆದಾಯ ಸಂಗ್ರಹವಾಗಿದೆ.

2023ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ದಾಖಲೆ– ₹ 13,754, ಮುದ್ರಾಂಕ ಶುಲ್ಕ–₹ 42.39 ಕೋಟಿ, ನೋಂದಣಿ ಶುಲ್ಕ– ₹ 8.30 ಕೋಟಿ, ದಾಖಲೆಗಳ ಸ್ಕ್ಯಾನಿಂಗ್‌–₹ 43 ಲಕ್ಷ ಸೇರಿದಂತೆ ಒಟ್ಟು ₹ 51.13 ಕೋಟಿ ಆದಾಯ ಸಂಗ್ರಹಿಸಲಾಗಿದೆ.

ಶುಲ್ಕ ಏರಿಕೆಯ ಒಂದು ತಿಂಗಳಲ್ಲೇ ಆಸ್ತಿ ಖರೀದಿಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಯುಗಾದಿ ನಂತರ ಆಸ್ತಿ, ಜಮೀನು, ನಿವೇಶನ ಖರೀದಿಯ ಪ್ರಮಾಣ ಹೆಚ್ಚಳವಾಗುವುದು ವಾಡಿಕೆ.

ಕಳೆದ ವರ್ಷ ಹಾಗೂ ಈ ವರ್ಷಕ್ಕೆ ಹೋಲಿಸಿದರೆ ಆದಾಯ ಸಂಗ್ರಹ ಕಡಿಮೆಯಾಗಿದ್ದು, ಇದಕ್ಕೆ ನೋಂದಣಿ ಶುಲ್ಕದ ಹೆಚ್ಚಳದ ಪಾಲೂ ಇದೆ ಎನ್ನುತ್ತಾರೆ ಉಪ ನೋಂದಣಾಧಿಕಾರಿಗಳು.

ರಾಜ್ಯ ಸರ್ಕಾರ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದಕ್ಕೆ ಅನುದಾನ ಹೊಂದಿಸಲು ಹೆಣಗಾಡುತ್ತಿದೆ. ಅದಕ್ಕಾಗಿ  ನೋಂದಣಿ ಶುಲ್ಕ ಹೆಚ್ಚಳ ಸೇರಿದಂತೆ ಹಲವು ಕ್ರಮ ಜಾರಿಗೊಳಿಸುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಈ ಕ್ರಮ ಸರಿಯಲ್ಲ ಎಂದು ಆಸ್ತಿ ನೋಂದಣಿಗೆ ಬಂದಿದ್ದ ದಾವಣಗೆರೆ ತಾಲ್ಲೂಕಿನ ಮಲ್ಲಾಪುರದ ಎಲ್‌. ಸುದರ್ಶನ್‌ ಅಸಮಾಧಾನ ವ್ಯಕ್ತಪಡಿಸಿದರು.

ಭೂ ಸ್ವಾಧೀನ ಸ್ಥಳಗಳಲ್ಲಿ ಕಡಿಮೆ ದರ

ನೋಂದಣಿ ಶುಲ್ಕ ಹೆಚ್ಚಿಸಿರುವ ಸರ್ಕಾರವು, ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಸ್ಥಿರಾಸ್ತಿ ದರವನ್ನು ಹೆಚ್ಚಿಸಿಲ್ಲ. ಭೂ ಸ್ವಾಧೀನಪಡಿಸಿಕೊಂಡರೆ ಸ್ಥಿರಾಸ್ತಿ ದರಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಿನ ಪರಿಹಾರವನ್ನು ಭೂಮಾಲೀಕರಿಗೆ ನೀಡುವ ನಿಮಯ ಇದೆ. ಹಾಗಾಗಿಯೇ ಸ್ವಾಧೀನ ಮಾಡಿಕೊಳ್ಳುವ ಉದ್ದೇಶ ಇರುವ ಪ್ರದೇಶಗಳಲ್ಲಿ ದರ ಹೆಚ್ಚಿಸದೇ ರೈತರನ್ನು ವಂಚಿಸಲಾಗುತ್ತಿದೆ ಎಂದು ಮೆಳ್ಳೆಕಟ್ಟೆಯ ರೈತ ಹಾಲಪ್ಪ ದೂರಿದರು.

ಗ್ರಾಮ ಠಾಣಾ ವ್ಯಾಪ್ತಿಗೆ ಅವೈಜ್ಞಾನಿಕ ಲೆಕ್ಕಾಚಾರ

ಸ್ಥಿರಾಸ್ತಿ ಪರಿಷ್ಕರಣೆಗೂ ಹಿಂದೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ನಿವೇಶನಗಳ ನೋಂದಣಿಗೆ ಇದ್ದ ದರ ಒಂದೇ ರೀತಿಯಾಗಿತ್ತು. ಆದರೆ, ಈಗ ನಿಗದಿಯಾಗಿರುವ ಸ್ಥಿರಾಸ್ತಿ ದರಕ್ಕಿಂತಲೂ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರ ನಿಗದಿಮಾಡಿರುವ ದರದಲ್ಲೇ ಗ್ರಾಮ ಠಾಣಾದಲ್ಲಿನ ನಿವೇಶನವನ್ನು ನೋಂದಣಿ ಮಾಡಬೇಕು ಎನ್ನುವ ನಿಯಮ ರೂಪಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ರೈತರು ತಮ್ಮ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ನಿವೇಶನಗಳ ನೋಂದಣಿಗೂ ಅಭಿವೃದ್ಧಿ ಪಡಿಸಲಾಗಿರುವ ಬಡಾವಣೆಗಳ ದರದಲ್ಲೇ ಮುದ್ರಾಂಕ ಶುಲ್ಕ ಪಾವತಿ ಮಾಡುವಂತಾಗಿದೆ. ಇದು ಸರಿಯಲ್ಲ. ಇದನ್ನು ಬದಲಾಯಿಸಬೇಕು ಎಂದು ಬೆಳವನೂರಿನ ರೈತ ಕೊಟ್ರೇಶಪ್ಪ ಒತ್ತಾಯಿಸಿದರು.

ನೋಂದಣಿ ಕೊಂಚ ಕಡಿಮೆ

ಪ್ರತಿ ವರ್ಷವು ಶೇ 10ರಷ್ಟು ಮುದ್ರಾಂಕ ಶುಲ್ಕ ಹೆಚ್ಚಳವಾಗುತ್ತದೆ. ಆದರೆ ಕೋವಿಡ್‌ ಕಾರಣದಿಂದಾಗಿ ಐದು ವರ್ಷಗಳಿಂದ ಸ್ಥಿರಾಸ್ತಿ ದರ ಹೆಚ್ಚಳವಾಗಿರಲಿಲ್ಲ. ನೋಂದಣಿ ಶುಲ್ಕ ಹಾಗೂ ಸ್ಥಿರಾಸ್ತಿ ದರ ಹೆಚ್ಚಳ ಮಾಡಿರುವುದರಿಂದ ಆಸ್ತಿ ನೋಂದಣಿ ಖರೀದಿ ವರ್ಗಾವಣೆ ಕೊಂಚ ಕಡಿಮೆಯಾಗಿದೆ. ಇದು ಆದಾಯ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಆಯಾ ಪ್ರದೇಶದ ಅಂಕಿ ಅಂಶ ಅಭಿವೃದ್ಧಿ ಜಿಲ್ಲೆ ರಾಜ್ಯ ರಾಷ್ಟ್ರೀಯ ಹೆದ್ದಾರಿ ಬೆಳವಣಿಗೆಗೆ ಪೂರಕವಾಗಿ ದರ ನಿಗದಿ ಮಾಡಲಾಗಿದೆ ಎಂದು ಹಿರಿಯ ಉಪನೋಂದಣಾಧಿಕಾರಿ ಎಲ್. ರಾಮಕೃಷ್ಣ ತಿಳಿಸಿದರು. ಚಿಕ್ಕ ಕಚೇರಿಯಲ್ಲೇ ಕಾರ್ಯನಿರ್ವಹಣೆ:  ನಗರದ ಪಿ.ಬಿ. ರಸ್ತೆಯಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ ಕಚೇರಿ ಚಿಕ್ಕದಾಗಿದ್ದು ಯಾವಾಗಲೂ ಜನಸಂದಣಿ ಇರುತ್ತದೆ. ಆಸ್ತಿ ಜಮೀನು ನೋಂದಣಿ ಸಂಬಂಧ ಗ್ರಾಮೀಣ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಪ್ರತಿದಿನ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಆದರೆ ಕಚೇರಿ ಚಿಕ್ಕದಾಗಿದ್ದು ಕುಳಿತುಕೊಳ್ಳಲು ಸಮರ್ಪಕ ಸ್ಥಳವಿಲ್ಲ. ಇದರಿಂದ ರಸ್ತೆಯ ಮೇಲೆ ಹಲವರು ಕುಳಿತುಕೊಳ್ಳುವ ಸ್ಥಿತಿ ಇದೆ. ಕಚೇರಿ ಎದುರು ಸ್ಥಳವಿದ್ದು ನೂತನ ಕಟ್ಟಡ ನಿರ್ಮಿಸಬೇಕು ಎಂದು ಹಿರಿಯ ಉಪನೋಂದಣಾಧಿಕಾರಿ ಎಲ್. ರಾಮಕೃಷ್ಣ ಮನವಿ ಮಾಡಿದರು. ಈಗಿನ ಕಚೇರಿ ಚಿಕ್ಕದಾಗಿರುವ ಕಾರಣ ಈಗಾಗಲೇ ಕಚೇರಿಯನ್ನು ನವೀಕರಣಗೊಳಿಸಿ ಬೃಹತ್‌ ಕಟ್ಟಡ ನಿರ್ಮಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಮಧ್ಯಮ ವರ್ಗದವರಿಗೆ ತೊಂದರೆ

ನೋಂದಣಿ ಶುಲ್ಕ ಹೆಚ್ಚಿಸಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದವರು ಭೂಮಿ ಖರೀದಿಸುವುದು ದುಸ್ತರವಾಗಿದೆ. ಶ್ರೀಮಂತರಿಗೆ ಅನುಕೂಲವಾಗುವಂತಾಗಿದೆ. ದಿನೇದಿನೇ ಸ್ಥಿರಾಸ್ತಿಗಳ ಮಾರುಕಟ್ಟೆ ದರ ಹೆಚ್ಚಳವಾಗುತ್ತಿದೆ. ಈಗ ಶುಲ್ಕ ಹೆಚ್ಚಳದ ಹೊರೆಬಿದ್ದಿದೆ. ಇದರಿಂದ ಮಧ್ಯಮ ವರ್ಗದವರ ಮನೆ ನಿವೇಶನ ಖರೀದಿ ಆಸೆಗೆ ತಣ್ಣೀರು ಎರಚಿದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಹೇಳಿದರು. ಕಂದಾಯ ಭೂಮಿ ಖರೀದಿಸಿದವರಿಗೆ ಹಕ್ಕುಪತ್ರ ನೀಡಿದರೆ ಉಳಿದವರಿಗೆ ಜಮೀನು ಖರೀದಿಗೆ ಅನುಕೂಲವಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಆದಾಯದ ಮೂಲ ಹೊರೆಯಾಗದಿರಲಿ ಸರ್ಕಾರ ಜನಸಾಮಾನ್ಯರ ಮೇಲೆ ಶುಲ್ಕ ಹೆಚ್ಚಳದಂತಹ ಕ್ರಮ ಕೈಗೊಂಡು ಆದಾಯ ವೃದ್ಧಿಯ ಮಾರ್ಗ ಕಂಡುಕೊಳ್ಳುವುದು ಸರಿಯಲ್ಲ. ಮಧ್ಯಮ ವರ್ಗದವರ ಮೇಲೆ ಬರೆ ಎಳೆದು ಆದಾಯದ ಮೂಲ ಹುಡುಕುವುದು ಖಂಡನೀಯ. ಕೆಲ ಜನರು ತಮ್ಮ ಅಗತ್ಯಕ್ಕೆ ಆಸ್ತಿ ಮಾರಾಟ ಮಾಡುತ್ತಾರೆ. ಕೆಲವರು ಭವಿಷ್ಯದ ದೃಷ್ಟಿಯಿಂದ ಆಸ್ತಿ ಜಮೀನು ಖರೀದಿ ಮಾಡುತ್ತಾರೆ. ಶುಲ್ಕ ಹೆಚ್ಚಳದಿಂದ ಎಲ್ಲದಕ್ಕೂ ಸಮಸ್ಯೆಯಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್‌.ಎಚ್‌. ಅರುಣಕುಮಾರ್‌ ದೂರಿದರು.

ವಿಂಡ್‌ ಮಿಲ್‌ ಕಂಪನಿಗೆ ತಟ್ಟದ ಬಿಸಿ

ಜಗಳೂರು: ಜಿಲ್ಲೆಯಲ್ಲೇ ಅತಿ ಕಡಿಮೆ ಮಳೆ ಬೀಳುವ ತಾಲ್ಲೂಕು ಎಂದೇ ಜಗಳೂರು ಹೆಸರಾಗಿದೆ. ನೀರಾವರಿಗಾಗಿ ನದಿ ಅಥವಾ ಯಾವುದೇ ಜಲ ಮೂಲಗಳಿಲ್ಲದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಬಹುರಾಷ್ಟ್ರೀಯ ಪವನ ವಿದ್ಯುತ್‌ ಉತ್ಪಾದನಾ ಕಂಪನಿಗಳ ಭೂಮಿ ಖರೀದಿ ಹಾವಳಿ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮುಂದುವರಿದಿದೆ.  ಸರ್ಕಾರದ ಉಪ ನೋಂದಣಿ ಶುಲ್ಕ ಹೆಚ್ಚಳ ಈ ಕಂಪನಿಗಳ ಮೇಲೆ ಪರಿಣಾಮ ಬೀರಿಲ್ಲ. ಆದರೆ ಬರಪೀಡಿತ ತಾಲ್ಲೂಕಿನ ರೈತರು ಸಣ್ಣ ರೈತರಿಗೆ ಹೊರೆಯಾಗಿದೆ. ರೈತರ ಭೂಮಿ ಖರೀದಿ ಮೇಲೆ ಕೊಂಚ ಪರಿಣಾಮ ಬೀರಿದೆ. ಬರಪೀಡಿತ ಪ್ರದೇಶವಾಗಿರುವ ಇಲ್ಲಿ ಅತ್ಯಂತ ಕಡಿಮೆ ಇದ್ದ ಭೂಮಿಯ ಬೆಲೆ ಕಳೆದ ನಾಲ್ಕೈದು ವರ್ಷಗಳಿಂದ ಗಗನಕ್ಕೇರಿದೆ. ಪವನ ವಿದ್ಯುತ್‌ ಮತ್ತು ಸೌರ ವಿದ್ಯುತ್‌ ಉತ್ಪಾದನಾ ಕಂಪನಿಗಳು ಪೈಪೋಟಿಯಲ್ಲಿ ರೈತರ ಜಮೀನುಗಳನ್ನು ಖರೀದಿಸುತ್ತಿವೆ. ಸರ್ಕಾರದ ವರಮಾನ ಹೆಚ್ಚಿಸುವ ಉದ್ದೇಶದಿಂದ ತಾಲ್ಲೂಕಿನಲ್ಲೂ ಭೂಮಿಯ ದರವನ್ನು ಶೇ 50ರವರೆಗೆ ಹೆಚ್ಚಿಸಲಾಗಿದೆ. ಭೂಮಿ ಮಾರಾಟ ವಹಿವಾಟು ಭರಾಟೆ ತಾಲ್ಲೂಕಿನಲ್ಲಿ ಜೋರಾಗಿದ್ದರೂ ಕೇವಲ ಪವನ ವಿದ್ಯುತ್‌ ಮತ್ತು ಸೌರ ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ಮೀಸಲಾಗಿದೆ. ಐದಾರು ಬಹುರಾಷ್ಟ್ರೀಯ ಕಂಪನಿಗಳು ನಾಲ್ಕು ವರ್ಷಗಳಲ್ಲಿ ರೈತರ 4000ಕ್ಕೂ ಅಧಿಕ ಭೂಮಿಯನ್ನು ಖರೀದಿಸಿದ್ದು ಸಾವಿರಾರು ಗಾಳಿ ಯಂತ್ರಗಳು ತಲೆ ಎತ್ತಿವೆ. ಭೂಮಿಯ ದರ ದುಪ್ಪಟ್ಟಾದರೂ ಈ ಕಂಪನಿಗಳಿಗೆ ಜಮೀನುಗಳನ್ನು ಖರೀದಿಸಲು ಯಾವುದೇ ಅಡ್ಡಿಯಾಗಿಲ್ಲ. ಆದರೆ ಸಣ್ಣ ಪುಟ್ಟ ಖರೀದಿದಾರರು ನಿವೇಶನ ಖರೀದಿಸುವವರಿಗೆ ಶುಲ್ಕ ಹೆಚ್ಚಳ ನೀತಿ ಹೊರೆಯಾಗಿ ಪರಿಣಮಿಸಿದೆ. ‘ಭೂಮಿ ಬೆಲೆ ಹೆಚ್ಚಿಸಿರುವ ಸರ್ಕಾರದ ಹೊಸ ಸುತ್ತೋಲೆಯಿಂದ ತಾಲ್ಲೂಕಿನಲ್ಲಿ ಖರೀದಿ ವಹಿವಾಟಿಗೆ ಯಾವುದೇ ತೊಂದರೆಯಾಗಿಲ್ಲ. ತಾಲ್ಲೂಕಿಗೆ ₹ 1.4 ಕೋಟಿ ಆದಾಯ ಸಂಗ್ರಹದ ನಿಗದಿ ಮಾಡಿದ್ದು ಪ್ರತಿ ತಿಂಗಳು ಆದಾಯ ಸಂಗ್ರಹವಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯ ಸಿಬ್ಬಂದಿ ಹೇಳಿದರು. ‘ಕೆಲವು ಭೂಮಿ ಖರೀದಿದಾರರು ಆದಾಯ ತೆರಿಗೆ ಇಲಾಖೆಗೆ ತೋರಿಸಲು ಹಾಗೂ ಇತರ ಕಾರಣಗಳಿಂದಾಗಿ ಸರ್ಕಾರಿ ದರಕ್ಕಿಂತ ನಾಲ್ಕು ಐದು ಪಟ್ಟು ಹೆಚ್ಚು ಬೆಲೆಯನ್ನು ತಾವೇ ನಿಗದಿ ಮಾಡಿ ಭೂಮಿ ಖರೀದಿಸುತ್ತಿದ್ದಾರೆ. ವಿಶೇಷವಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ವರ್ತಕರು ಹೀಗೆ ಕೃತಕವಾಗಿ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಖರೀದಿಸುತ್ತಿದ್ದಾರೆ. ಇಂತವರಿಗೆ ಸರ್ಕಾರದ ದರ ಹೆಚ್ಚಳ ನೀತಿ ಅನುಕೂಲವಾಗಿದೆ’ ಎಂದು ಅವರು ಸತ್ಯವನ್ನು ಬಿಚ್ಚಿಟ್ಟರು.

ಆಸ್ತಿ ನೋಂದಣಿ ಪ್ರಮಾಣ ಕುಸಿತ

ಚನ್ನಗಿರಿ: ಸರ್ಕಾರ ನೋಂದಣಿ ಶುಲ್ಕವನ್ನು ಶೇ 30ರಷ್ಟು ಹೆಚ್ಚಿಸಿರುವ ಕಾರಣ ತಾಲ್ಲೂಕಿನಲ್ಲಿ ಆಸ್ತಿ ನೋಂದಣಿ ಪ್ರಮಾಣ ಕುಸಿದಿದೆ. ಆಸ್ತಿ ಮೌಲ್ಯ ಮತ್ತು ಶುಲ್ಕ ಹೆಚ್ಚಿಸಿರುವ ಕಾರಣ ಮಧ್ಯಮ ವರ್ಗದವರು ಆಸ್ತಿ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ನೋಂದಣಿ ಕೇಂದ್ರದಲ್ಲಿ ₹ 30 ಲಕ್ಷ ನೋಂದಣಿ ಶುಲ್ಕ ಸಂಗ್ರಹವಾಗಿದ್ದು ಅಕ್ಟೋಬರ್ ತಿಂಗಳಲ್ಲಿ ಆಸ್ತಿ ಮೌಲ್ಯ ಮತ್ತು ನೋಂದಣಿ ಶುಲ್ಕ ಹೆಚ್ಚಳವಾಗಿದ್ದರೂ ₹ 15 ಲಕ್ಷ ಮಾತ್ರ ಸಂಗ್ರಹವಾಗಿದೆ. ಈ ಹಿಂದಿನ ದಿನಗಳಲ್ಲಿ ನೋಂದಣಿ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಈಗ ನೋಂದಣಿ ಮಾಡಿಸುವವರ ಸಂಖ್ಯೆ ಕುಸಿದಿದೆ ಎಂದು ಉಪ ನೋಂದಣಾಧಿಕಾರಿ ಪಿ. ಹರೀಶ್‌ಕುಮಾರ್ ಮಾಹಿತಿ ನೀಡಿದರು. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಶುಲ್ಕ ಏರಿಕೆ ಮತ್ತಿತರ ಹೊರೆ ಹಾಕುತ್ತಿದೆ. ರೈತರಿಂದ ಖರೀದಿಸುವ ನಂದಿನಿ ಹಾಲಿನ ದರವನ್ನು ದಿಢೀರ್ ₹ 2 ಕಡಿಮೆ ಮಾಡಿದೆ. ಮತ್ತೊಂದೆಡೆ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ನೋಂದಣಿ ಶುಲ್ಕ ಹೆಚ್ಚಿಸಿದೆ. ಹೆಚ್ಚಿನ ಶುಲ್ಕ ಹಾಗೂ ಆಸ್ತಿ ಮೌಲ್ಯ ಹೆಚ್ಚಳದಿಂದ ಆಸ್ತಿ ಮಾರಾಟ ಮಾಡಲು ಹಿಂದೇಟು ಹಾಕುವಂತಾಗಿದೆ ಎಂದು ನಿಲೋಗಲ್ ಗ್ರಾಮದ ಸಿದ್ದಪ್ಪ ಬೇಸರಿಸಿದರು.

ಚನ್ನಗಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಬಂದಿರುವ ಜನರು
ದಾವಣಗೆರೆಯ ಹಿರಿಯ ಉಪನೋಂದಣಾಧಿಕಾರಿ ಕಚೇರಿಯ ಹೊರಗೆ ಕಾಯುತ್ತಿರುವ ಜನರು  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ದಾವಣಗೆರೆಯ ಹಿರಿಯ ಉಪನೋಂದಣಾಧಿಕಾರಿ ಕಚೇರಿಯ ಹೊರಗೆ ಕಾಯುತ್ತಿರುವ ಜನರು  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ದಾವಣಗೆರೆಯ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಬಂದಿರುವ ಜನರು  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ದಾವಣಗೆರೆಯ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಬಂದಿರುವ ಜನರು  –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.