ADVERTISEMENT

ಜಗಳೂರಿನೊಂದಿಗೆ ಅಪ್ಪು ನಂಟು: ‘ಹುಡುಗರು’ ಚಿತ್ರೀಕರಣಕ್ಕೆ ಬಂದಿದ್ದ ಪುನೀತ್‌

ಡಿ.ಶ್ರೀನಿವಾಸ
Published 30 ಅಕ್ಟೋಬರ್ 2021, 3:17 IST
Last Updated 30 ಅಕ್ಟೋಬರ್ 2021, 3:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರು ದಶಕದ ಹಿಂದೆ ಚಿತ್ರೀಕರಣಕ್ಕಾಗಿ ಜಗಳೂರಿಗೆ ಭೇಟಿಕೊಟ್ಟಿದ್ದು ಇಲ್ಲಿನ ಅಭಿಮಾನಿಗಳಲ್ಲಿ ಇನ್ನೂ ಹಚ್ಚ ಹಸಿರಾಗಿದೆ.

ತಮಿಳಿನ ‘ನಾಡೋಡಿಗಳ್’ ಚಿತ್ರದ ಕನ್ನಡ ರಿಮೇಕ್ ಚಿತ್ರ ‘ಹುಡುಗರು’ ಚಿತ್ರೀಕರಣಕ್ಕಾಗಿ 2011ರಲ್ಲಿ ಪುನೀತ್ ಪಟ್ಟಣಕ್ಕೆ ಬಂದಿದ್ದರು. ಪುನೀತ್ ಜೊತೆಯಲ್ಲಿ ಶ್ರೀರಾಮಪುರದ ಕಿಟ್ಟಿ ಹಾಗೂ ಯೋಗಿ ಸಹ ಬಂದಿದ್ದರು. ಚಿತ್ರದ ನಾಯಕನ ಸ್ನೇಹಿತನ ಪ್ರೇಯಸಿ ಚಿತ್ರದುರ್ಗ ಸಮೀಪದ ಜಗಳೂರಿನಲ್ಲಿ ವಾಸವಾಗಿರುತ್ತಾಳೆ. ಸ್ನೇಹಿತನಿಗಾಗಿ ನಾಯಕ ಹಾಗೂ ಗೆಳೆಯರು ಜಗಳೂರಿಗೆ ಬಂದು ಆಕೆಯನ್ನು ಕರೆದುಕೊಂಡು ಹೋಗುವ ದೃಶ್ಯ ಅದು.

ಜಗಳೂರಿನಲ್ಲಿ ‘ಹುಡುಗರು’ ಚಿತ್ರದ ಚಿತ್ರೀಕರಣದ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಸಾರ್ವಜನಿಕರು ಗುಂಪು ಸೇರುವುದನ್ನು ತಪ್ಪಿಸುವ ಸಲುವಾಗಿ ಪಟ್ಟಣದ ಮಧ್ಯ ಭಾಗದ ರಸ್ತೆಯ ಕಟ್ಟಡಗಳ ಮೇಲ್ಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಇಟ್ಟು ಚಿತ್ರೀಕರಿಸಲಾಗಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಿಂದ ಪೋಲಿಸ್ ಠಾಣೆವರೆಗೆ ಸಾಮಾನ್ಯರಂತೆ ಪುನೀತ್‌ ಅವರು ಸ್ಕಾರ್ಪಿಯೊ ವಾಹನ ಚಾಲನೆ ಮಾಡಿಕೊಂಡು ಬಂದಿದ್ದರು. ಪೊಲೀಸ್ ಠಾಣೆಯ ಅಂಗಳದಲ್ಲಿ ಕಿರಿದಾದ ಜಾಗದಲ್ಲೇ ವಾಹನವನ್ನು ವೇಗವಾಗಿ ಹಿಮ್ಮುಖವಾಗಿ ಚಾಲನೆ ಮಾಡಿಕೊಂಡು ಮುಖ್ಯರಸ್ತೆಗೆ ತಂದು ನಿಲ್ಲಿಸಿದ್ದರು. ಕಿಟ್ಟಿ, ಯೋಗಿ ಹಾಗೂ ಮತ್ತೊಬ್ಬ ಸಹನಟ ವಾಹನದಲ್ಲಿದ್ದರು.

ADVERTISEMENT

ಪುನೀತ್ ಅವರ ಸಿನಿಮಾ ಹೊರತುಪಡಿಸಿ ಜಗಳೂರಿನಲ್ಲಿ ಇದುವರೆಗೆ ಬೇರಾವುದೇ ಚಿತ್ರೀಕರಣ ನಡೆದಿಲ್ಲ. ಹಿಂದುಳಿದ ಬಯಲುಸೀಮೆಯನ್ನು ಆಯ್ಕೆ ಮಾಡಿದ್ದರಿಂದ ಈ ಭಾಗದಲ್ಲಿ ಅಪ್ಪು ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿತ್ತು.

ಅಲ್ಲದೇ ಜಗಳೂರಿಗೂ ಪುನೀತ್‌ ರಾಜ್‌ಕುಮಾರ್ ಕುಟುಂಬಕ್ಕೂ ಇನ್ನೊಂದು ನಂಟಿದೆ. ಪಟ್ಟಣದ ಪ್ರಸಿದ್ಧ ಎನ್.ಎಂ.ಸಿ. ಹೋಟೆಲ್‌ನಲ್ಲಿ ಅಡುಗೆ ಭಟ್ಟ ಹಾಗೂ ಮಾಣಿಯಾಗಿ 30 ವರ್ಷಗಳ ಹಿಂದೆ ಕೆಲಸ ಮಾಡಿದ್ದ ಕುಂದಾಪುರದ ಮೋಹನ್ ಎಂಬುವವರು ಬೆಂಗಳೂರಿಗೆ ಹೋಗಿ ದೊಡ್ಡ ಫೈನಾನ್ಶಿಯರ್‌ಆಗಿ ಬೆಳೆದಿದ್ದರು. ಅಲ್ಲಿ ಕಪಾಲಿ ಮೋಹನ್ ಎಂದೇ ಹೆಸರಾಗಿದ್ರು. ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಚಿತ್ರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 2 ವರ್ಷಗಳ ಹಿಂದೆ ಹಣಕಾಸು ನಷ್ಟದಿಂದ ಮೋಹನ್ ಆತ್ಮಹತ್ಯೆ ಮಾಡಿಕೊಂಡರು. ಸರಳ, ವಿನಯ ಹಾಗೂ ವಿಧೇಯ ಮನೋಭಾವದ ಪುನೀತ್ ಏಕಾಏಕಿ ನಿರ್ಗಮಿಸಿದ್ದರಿಂದ ಅಪಾರ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.