ADVERTISEMENT

ಶಿಕ್ಷಣ, ಕೈಗಾರಿಕೋದ್ಯಮ, ಕೌಶಲಕ್ಕೆ ಸಿಗಲಿ ಆದ್ಯತೆ

ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯಲ್ಲಿ ಬೇಡಿಕೆ ಮಂಡಿಸಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 14:40 IST
Last Updated 29 ಏಪ್ರಿಲ್ 2025, 14:40 IST
ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾಮಟ್ಟದ ಸಂವಾದ ಸಭೆಯಲ್ಲಿ ಪ್ರೊ.ಎಂ.ಗೋವಿಂದರಾವ್ ಮಾತನಾಡಿದರು. ಕೆ.ಎಸ್.ಬಸವಂತಪ್ಪ, ಬಸವರಾಜು ಶಿವಗಂಗಾ, ಆರ್.ವಿಶಾಲ್, ಸುರೇಶ್ ಬಿ ಇಟ್ನಾಳ್, ಎಸ್.ಟಿ. ಬಾಗಲಕೋಟಿ, ಉಮಾ ಪ್ರಶಾಂತ್ ಉಪಸ್ಥಿತರಿದ್ದರು  ಪ್ರಜಾವಾಣಿ ಚಿತ್ರ
ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾಮಟ್ಟದ ಸಂವಾದ ಸಭೆಯಲ್ಲಿ ಪ್ರೊ.ಎಂ.ಗೋವಿಂದರಾವ್ ಮಾತನಾಡಿದರು. ಕೆ.ಎಸ್.ಬಸವಂತಪ್ಪ, ಬಸವರಾಜು ಶಿವಗಂಗಾ, ಆರ್.ವಿಶಾಲ್, ಸುರೇಶ್ ಬಿ ಇಟ್ನಾಳ್, ಎಸ್.ಟಿ. ಬಾಗಲಕೋಟಿ, ಉಮಾ ಪ್ರಶಾಂತ್ ಉಪಸ್ಥಿತರಿದ್ದರು  ಪ್ರಜಾವಾಣಿ ಚಿತ್ರ   

ದಾವಣಗೆರೆ: ಪ್ರಾಥಮಿಕ ಹಂತದಿಂದಲೇ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು, ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ ಕೈಗಾರಿಕೋದ್ಯಮಿಗಳಿಗೆ ಅಗತ್ಯ ಆರ್ಥಿಕ ನೆರವು ನೀಡಬೇಕು, ರೈತರಿಗೆ ಸಬ್ಸಿಡಿ ನೀಡುವ ಜೊತೆಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಬೇಕು, ನಿರುದ್ಯೋಗಿ ಯುವಕ –ಯುವತಿಯರಿಗೆ ಕೌಶಲ ತರಬೇತಿಯೊಂದಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಬೇಕು..

ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯ ಎಸ್.ಎಸ್.ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾಮಟ್ಟದ ಸಂವಾದ ಸಭೆಯಲ್ಲಿ ಕೇಳಿಬಂದ ಆಗ್ರಹಗಳಿವು.

ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗದ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು, ರೈತ ಮುಖಂಡರು ಸೇರಿದಂತೆ ನಾಗರಿಕರೂ ಭಾಗವಹಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಏನೆಲ್ಲ ಆಗಬೇಕು ಎಂಬ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು. ಸಾವಿರಾರು ಕೋಟಿ ವ್ಯಯಿಸಿದರೂ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದರು.

ADVERTISEMENT

‘ದಾವಣಗೆರೆ ಜಿಲ್ಲೆಯು ಅಭಿವೃದ್ಧಿ ಹೊಂದಿದ ಪ್ರದೇಶವಾಗಿ ಹೊರ ಹೊಮ್ಮಿದೆ. ಆದರೆ, 0.78 ಸೂಚ್ಯಂಕದೊಂದಿಗೆ ಚನ್ನಗಿರಿ ಅತ್ಯಂತ ಹಿಂದುಳಿದ ತಾಲ್ಲೂಕಾಗಿದೆ. ಜಗಳೂರು ಮತ್ತು ಹೊನ್ನಾಳಿ ಅನುಕ್ರಮವಾಗಿ 0.80 ಮತ್ತು 0.86 ಸೂಚ್ಯಂಕದೊಂದಿಗೆ ಅತೀ ಹಿಂದುಳಿದ ತಾಲ್ಲೂಕು ಪ್ರದೇಶಗಳಾಗಿ ಗುರುತಿಸಿಕೊಂಡಿವೆ’ ಎಂದು ಪ್ರೊ.ಎಂ.ಗೋವಿಂದರಾವ್ ತಿಳಿಸಿದರು.

‘ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯದ 175 ತಾಲ್ಲೂಕುಗಳನ್ನು ಅಧ್ಯಯನ ಮಾಡಿ ಡಿ.ಎಂ.ನಂಜುಂಡಪ್ಪ ಅವರು 39 ಅತ್ಯಂತ ಹಿಂದುಳಿದ ತಾಲ್ಲೂಕುಗಳು, 40 ಅತಿ ಹಿಂದುಳಿದ ತಾಲ್ಲೂಕುಗಳು ಹಾಗೂ 35 ಹಿಂದುಳಿದ ತಾಲ್ಲೂಕುಗಳನ್ನು ಗುರುತಿಸಿದ್ದರು. ಇದರಲ್ಲಿ ಉತ್ತರ ಕರ್ನಾಟಕದ 26 ಅತ್ಯಂತ ಹಿಂದುಳಿದ ತಾಲ್ಲೂಕುಗಳಾಗಿದ್ದರೆ, ದಕ್ಷಿಣ ಕರ್ನಾಟಕದ 13 ತಾಲ್ಲೂಕುಗಳು ಇದ್ದವು. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಸರ್ಕಾರವು ಜಿಲ್ಲೆಗೆ 2007-08 ರಿಂದ 2023-24ರ ವರೆಗೆ ₹821 ಕೋಟಿ ಹಂಚಿಕೆ ಮಾಡಿತ್ತು. ಇದರಲ್ಲಿ ₹698 ಕೋಟಿ ಬಿಡುಗಡೆಯಾಗಿದ್ದು, ₹640 ಕೋಟಿ ಖರ್ಚಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿವೆ. ಉಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿಯು ವೇಗ ಪಡೆದಿಲ್ಲ. ಮೂಲಸೌಕರ್ಯ, ವಿದ್ಯುತ್, ರಸ್ತೆ, ಹಣಕಾಸು, ಶಿಕ್ಷಕರು ಮತ್ತು ವಿದ್ಯಾರ್ಥಿ ಅನುಪಾತ, ಸಾಕ್ಷರತೆ, ವೈದ್ಯಕೀಯ ವ್ಯವಸ್ಥೆ, ಕೈಗಾರಿಕೆ, ನೀರಾವರಿ, ಕೃಷಿ, ಸೇವಾ ವಲಯ ಸೇರಿದಂತೆ 32 ಸೂಚ್ಯಂಕಗಳನ್ನು ಆಧರಿಸಿ ಆಯೋಗ ವರದಿ ಸಂಗ್ರಹಿಸಲಿದೆ. ಆಯೋಗ ಪ್ರತಿ ಜಿಲ್ಲೆಗೆ ಭೇಟಿ ನೀಡಿ, ಜನರ ಅಭಿಪ್ರಾಯ ಪಡೆದು, ಸಂಗ್ರಹಿಸಿದ ಮಾಹಿತಿ, ಅಧ್ಯಯನದ ವರದಿಗಳ ಆಧಾರದಲ್ಲಿ ಅಸಮತೋಲನ ನಿವಾರಣೆ ಹಾಗೂ ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು.

ಪ್ರಭಾರಿ ಜಿಲ್ಲಾಧಿಕಾರಿ ಸುರೇಶ್ ಬಿ ಇಟ್ನಾಳ್, ‘6 ವರ್ಷದೊಳಗಿನ ಮಕ್ಕಳಿಗೆ ಪ್ರಾರಂಭಿಕ ಶಿಕ್ಷಣ ನೀಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಶೈಕ್ಷಣಿಕ ತರಬೇತಿಯ ಅವಶ್ಯಕತೆ ಇದೆ. ಸರ್ಕಾರಿ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಪ್ರತ್ಯೇಕ ಶಿಕ್ಷಕರ ಅವಶ್ಯಕತೆ ಹೆಚ್ಚಾಗಿದೆ’ ಎಂದು ತಿಳಿಸಿದರು. 

ಆಯೋಗದ ಸದಸ್ಯ ಕಾರ್ಯದರ್ಶಿ ಆರ್. ವಿಶಾಲ್, ಸದಸ್ಯ ಎಸ್.ಟಿ. ಬಾಗಲಕೋಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಜಿಲ್ಲಾ ಶಸ್ತ್ರಚಿಕಿತ್ಸಕ ನಾಗೇಂದ್ರಪ್ಪ, ಪ್ರಭಾರಿ ಡಿಡಿಪಿಐ ರಾಜಶೇಖರ್, ಕೃಷಿ ಮತ್ತು ಕೈಗಾರಿಕಾ ಉಪನಿರ್ದೇಶಕ ಶಿವಲಿಂಗಪ್ಪ ಕುಂಬಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚನ್ನಗಿರಿ ಹಾಗೂ ಮಾಯಕೊಂಡ ಕ್ಷೇತ್ರಗಳ ಶಾಸಕರನ್ನು ಹೊರತುಪಡಿಸಿ ಜಿಲ್ಲೆಯ ಇನ್ನಿತರ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು, ಸಂಸದರು ಸಭೆಗೆ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.