ADVERTISEMENT

ದಾವಣಗೆರೆ: ಒಂದೇ ದಿನ 600 ಮಂದಿ ಬಿಡುಗಡೆ

318 ಜನರಿಗೆ ಕೊರೊನಾ ದೃಢ * ಐವರ ಸಾವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 16:45 IST
Last Updated 25 ಆಗಸ್ಟ್ 2020, 16:45 IST
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ   

ದಾವಣಗೆರೆ: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಒಂದೇ ದಿನ 600 ಮಂದಿ ಬಿಡುಗಡೆಗೊಂಡಿದ್ದಾರೆ. 318 ಮಂದಿಗೆ ಸೋಂಕು ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ.

ತರಳಬಾಳು ಬಡಾವಣೆಯ 56 ವರ್ಷದ ಪುರುಷ, ಚಿತ್ರದುರ್ಗದ 62 ವರ್ಷದ ವೃದ್ಧ ಮಧುಮೇಹದಿಂದ ಮೃತಪಟ್ಟಿದ್ದಾರೆ. ಎಂಸಿಸಿ ‘ಬಿ’ ಬ್ಲಾಕ್‌ನ 62 ವರ್ಷದ ವೃದ್ಧ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ನಿಧನರಾದರು. ವಿನೋಬನಗರದ 61 ವರ್ಷದ ವೃದ್ಧ ಹೃದಯ ಸಂಬಂಧಿ ಕಾಯಿಲೆಯಿಂದ ಅಸುನೀಗಿದರು. ಇವರೆಲ್ಲರಿಗೂ ಉಸಿರಾಟದ ಸಮಸ್ಯೆ ಇತ್ತು. ಇದಲ್ಲದೇ ಬೇರೆ ಯಾವುದೇ ಕಾಯಿಲೆಗಳಿಲ್ಲದ ಉಸಿರಾಟದ ಸಮಸ್ಯೆ ಮಾತ್ರ ಉಂಟಾಗಿದ್ದ ಕಕ್ಕರಗೊಳ್ಳದ 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಈ ಐವರಿಗೂ ಕೊರೊನಾ ಇರುವುದು ಖಚಿತವಾಗಿದೆ.

ಒಂದು ವರ್ಷದ ಮಗು ಸೇರಿ 27 ಬಾಲಕರಿಗೆ, 10 ಬಾಲಕಿಯರಿಗೆ ಕೊರೊನಾ ಬಂದಿದೆ. 33 ವೃದ್ಧರು ಮತ್ತು 23 ವೃದ್ಧೆಯರಿಗೂ ಸೋಂಕು ತಗುಲಿದೆ. 18ರಿಂದ 59 ವರ್ಷದವರೆಗಿನ 128 ಪುರುಷರಿಗೆ, 97 ಮಹಿಳೆಯರಿಗೆ ವೈರಸ್‌ ಬಂದಿದೆ.

ADVERTISEMENT

ದಾವಣಗೆರೆ ತಾಲ್ಲೂಕಿನಲ್ಲಿ 126 ಮಂದಿಗೆ ಕೊರೊನಾ ಸೋಂಕು ಬಂದಿದೆ. 15 ಮಂದಿ ಚಿಕ್ಕಕೊಗಳೂರು, ಐಗೂರು, ಆಲೂರು, ಹಾಸನಾಯಕಹಳ್ಳಿ, ಶಿರಮಗೊಂಡನಹಳ್ಳಿ, ವಡ್ಡಿನಹಳ್ಳಿ, ಹದಡಿ, ಕಾಡಜ್ಜಿ, ಹಳೇಹಳ್ಳಿ ಮುಂತಾದ ಗ್ರಾಮೀಣ ಭಾಗದವರಾಗಿದ್ದಾರೆ. ಉಳಿದ 111 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು.

ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 71, ಚನ್ನಗಿರಿ ತಾಲ್ಲೂಕಿನಲ್ಲಿ 48, ಹರಿಹರ ತಾಲ್ಲೂಕಿನಲ್ಲಿ 45, ಜಗಳೂರು ತಾಲ್ಲೂಕಿನಲ್ಲಿ 11 ಮಂದಿಗೆ ಕೊರೊನಾ ಇರುವುದು ಖಚಿತವಾಗಿದೆ.

ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಂಧ್ರಪ್ರದೇಶ ರಾಜ್ಯದ ರಾಯದುರ್ಗದ ಇಬ್ಬರು, ಕಲ್ಯಾಣದುರ್ಗದ ಇಬ್ಬರು ಕೊರೊನಾ ಸೋಂಕಿತರಾಗಿದ್ದಾರೆ. ಚಿತ್ರದುರ್ಗ ಚಿಲ್ಲೆಯ ಚಳ್ಳಕೆರೆಯ ನಾಲ್ವರು, ರಾಣೆಬೆನ್ನೂರಿನ ಏಳು ಮಂದಿ, ಕೂಡ್ಲಿಗಿಯ ಒಬ್ಬರು ಹೀಗೆ ವಿವಿಧ ಜಿಲ್ಲೆಗಳ 13 ಮಂದಿಗೆ ಕೊರೊನಾ ಇರುವುದು ಗೊತ್ತಾಗಿದೆ.

ಜಿಲ್ಲೆಯಲ್ಲಿ ಈವರೆಗೆ 7528 ಪ್ರಕರಣಗಳು ಕಂಡುಬಂದಿವೆ. ಮಂಗಳವಾರ ಬಿಡುಗಡೆಗೊಂಡ 600 ಮಂದಿ ಸೇರಿ 5630 ಮಂದಿ ಗುಣಮುಖರಾಗಿದ್ದಾರೆ. 167 ಮಂದಿ ಮೃತಪಟ್ಟಿದ್ದಾರೆ. 1731 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.