ADVERTISEMENT

‘ಹಸಿದವನಿಗೆ ಅನ್ನದಂತೆ ಧರ್ಮ’

ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 15:39 IST
Last Updated 23 ಜೂನ್ 2019, 15:39 IST
ದಾವಣಗೆರೆಯ ಜಿಲ್ಲೆಯ ಶ್ಯಾಗಲೆ ಗ್ರಾಮದ ಗುರು ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಇಷ್ಟಲಿಂಗ ಪೂಜೆ ಮಾಡಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಶ್ಯಾಗಲೆ ಗ್ರಾಮದ ಗುರು ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಇಷ್ಟಲಿಂಗ ಪೂಜೆ ಮಾಡಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಧರ್ಮಪ್ರಜ್ಞೆ, ಧಾರ್ಮಿಕ ಸಂಸ್ಕಾರ, ಸಾಮಾಜಿಕ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಜೀವನದಲ್ಲಿ ಸುಖ, ಶಾಂತಿ ಪಡೆಯಲು ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಭಾನುವಾರ ನಡೆದ ಇಷ್ಟಲಿಂಗ ಮಹಾಪೂಜಾ ಹಾಗೂ ಗುರು ಕರಿಸಿದ್ಧೇಶ್ವರ ಶಿಲಾಮೂರ್ತಿ ದಿವ್ಯಾನುಗ್ರಹ ಆಶೀರ್ವಾದ, ಶಿವದೀಕ್ಷೆ ಕಾರ್ಯಕ್ರಮ ಹಾಗೂ ಜನಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಧರ್ಮ, ದೇವರು, ಗುರು, ಇವರನ್ನು ಮರೆಯಬಾರದು. ಅವರ ಆದರ್ಶ ಮತ್ತು ಮಾರ್ಗದರ್ಶನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಸಿದವರಿಗೆ ಅನ್ನ ನೀಡಿದಂತೆ. ಕುರುಡನಿಗೆ ಕಣ್ಣು ಬಂದಂತೆ, ಮನುಷ್ಯನಿಗೆ ಧರ್ಮ ಮುಖ್ಯ. ಪ್ರತಿಯೊಬ್ಬರಿಗೂ ಧರ್ಮದ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಮನುಷ್ಯರಿಗೆ ಸೂರ್ಯ, ನೀರು, ಗಾಳಿ, ಇವುಗಳು ಇಲ್ಲದೇ ಇದ್ದರೆ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಧರ್ಮ ಇಲ್ಲದಿದ್ದರೆ ನಮ್ಮ ಜೀವನ ಸಾಧ್ಯವಿಲ್ಲ. ಯಾರೂ ಧರ್ಮವನ್ನು ಮೀರಿ ನಡೆಯಬಾರದು. ಧರ್ಮದ ಚೌಕಟ್ಟಿನಲ್ಲಿಯೇ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಅವ್ಯಕ್ತಚೇತನ ಶಕ್ತಿಯೇ ದೇವರು. ದೇವನೊಬ್ಬ ನಾಮ ಹಲವು ಎಂಬಂತೆ ದೇವರು ಬೇರೆ ಬೇರೆ ರೂಪದಲ್ಲಿ ಇರುತ್ತಾನೆ. ಮಾನವರು ಇವುಗಳನ್ನು ತಿಳಿದುಕೊಂಡರೆ ಧರ್ಮ ಧರ್ಮಗಳ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ಘರ್ಷಣೆಗಳು ನಡೆಯುವುದಿಲ್ಲ. ವೀರಶೈವ ಧರ್ಮದಲ್ಲಿ ರೇಣುಕಾಚಾರ್ಯರು ಇದನ್ನು ಪ್ರತಿಪಾದಿಸಿದ್ದಾರೆ’ ಎಂದು ಸ್ಮರಿಸಿದರು.

‘ಕಣ್ಣು, ಕಿವಿ ಬದುಕುತ್ತೇನೆ. ದೇಹದ ಅಂಗವನ್ನು ಕಿತ್ತರೆ ಬದುಕುತ್ತೇನೆ. ಆದರೆ ದೇವರು, ಧರ್ಮ ಇಲ್ಲದೇ ಬದುಕುವುದಿಲ್ಲ ಎಂದು ಗಾಂಧೀಜಿ ಹೇಳಿದ್ದಾರೆ. ಅವರೇ ಹೇಳಿರಬೇಕಾದರೆ, ನಾವು ಇದನ್ನು ಪ್ರತಿಪಾದಿಸಬೇಕು’ ಎಂದು ಸಲಹೆ ನೀಡಿದರು.

‘ಗುರುಗಳು ಪರಮಾತ್ಮನ ಸ್ವರೂಪ ಇದ್ದಂತೆ. ಎಲ್ಲಾ ಕಡೆ, ಎಲ್ಲರಲ್ಲೂ ದೇವರನ್ನು ಕಾಣಲು ಸಾಧ್ಯವಿಲ್ಲ. ಗುರುವಿನ ರೂಪದಲ್ಲಿ ಗುರುವಿನಲ್ಲಿ ದೇವರನ್ನು ಕಾಣಬೇಕು. ಸಮರ್ಥ ಗುರುವಿನ ಮಾರ್ಗದರ್ಶನ ಸಿಕ್ಕಾಗ ಮಾತ್ರ ಬದುಕಿನಲ್ಲಿ ಶ್ರೇಯಸ್ಸು ಸಿಗುತ್ತದೆ’ ಎಂದು ಹೇಳಿದರು.

ದಾವಣಗೆರೆಯಲ್ಲಿ ಐತಿಹಾಸಿಕ ದಸರಾ ದರ್ಬಾರ್ ನಡೆಯಲಿದ್ದು, ಹಿಂದೆಂದೂ ನಡೆಯದಂತಹ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ರಂಭಾಪುರಿ ಶ್ರೀಗಳನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.

ಬಸವಾಪಟ್ಟಣ ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ, ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ದುಗ್ಗಾವತಿ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ವೀರಭದ್ರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಮ್ಮ, ಗುರು ಕರಿಸಿದ್ದೇಶ್ವರ ಮಠದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಮಾಧವಯ್ಯ, ಅಧ್ಯಕ್ಷ ತಿಪ್ಪಯ್ಯ ಇದ್ದರು. ಮಂಜುನಾಥಸ್ವಾಮಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.