ಹೊನ್ನಾಳಿ: ಹಿಂದೂಗಳ ಪವಿತ್ರ ಹಬ್ಬ ಯುಗಾದಿ, ಹೋಳಿ ಹಾಗೂ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬಗಳು ಹದಿನೈದು ದಿನಗಳ ಅಂತರದಲ್ಲಿ ಬಂದಿದ್ದು, ಉಭಯ ಧರ್ಮದವರು ಶಾಂತಿ ಸೌಹಾರ್ದದಿಂದ ಹಬ್ಬಗಳನ್ನು ಆಚರಿಸಬೇಕು. ಆ ಮೂಲಕ ಭಾವೈಕ್ಯ ಸಾರಬೇಕು ಎಂದು ಸಿಪಿಐ ಸುನಿಲ್‍ಕುಮಾರ್ ಮನವಿ ಮಾಡಿದರು.
ಸೋಮವಾರ ಪೊಲೀಸ್ ಠಾಣೆಯಲ್ಲಿ ನಡೆದ ಹಿಂದೂ ಹಾಗೂ ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಹೊನ್ನಾಳಿ ನಗರ ಹಾಗೂ ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ದಂಧೆ ನಡೆಯುತ್ತಿದೆ ಎನ್ನುವ ದೂರುಗಳು ಬರುತ್ತಿವೆ. ಆದರೆ ನಿಖರ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ. ಗಾಂಜಾ ಎಲ್ಲಿಂದ ಬರುತ್ತಿದೆ, ಎಲ್ಲಿಗೆ ಸಾಗಣೆ ಆಗುತ್ತಿದೆ ಎಂಬ ಬಗ್ಗೆ ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತಿದ್ದೇವೆ. ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇದ್ದರೆ ಕೊಡಬೇಕು. ಅಂಥವರ ಹೆಸರುಗಳನ್ನು ಗೋಪ್ಯವಾಗಿಡಲಾಗುವುದು’ ಎಂದರು.
ಪೋಷಕರು ತಮ್ಮ ಚಿಕ್ಕ ವಯಸ್ಸಿನ ಮಕ್ಕಳಿಗೆ ಬೈಕ್‌ಗಳನ್ನು ಓಡಿಸಲು ಕೊಡಬಾರದು. ಅಂತಹ ಐದು ಪ್ರಕರಣಗಳಿಗೆ ಈಗಾಗಲೇ ದಂಡ ವಸೂಲಿ ಮಾಡಿದ್ದೇವೆ. ಇನ್ನು ಮುಂದೆ ಚಿಕ್ಕ ವಯಸ್ಸಿನ ಮಕ್ಕಳಿಗೆ ಬೈಕ್ ಕೊಟ್ಟರೆ ಅಂತಹ ಪೋಷಕರಿಗೆ ಮುಲಾಜಿಲ್ಲದೆ ₹ 25,000 ದಂಡ ವಿಧಿಸಲಾಗುವುದು ಎಂದರು.
ಪಿಎಸ್‌ಐ ಕುಮಾರ್, ಸಿಬ್ಬಂದಿ ಜಗದೀಶ್, ಚೇತನ್, ಆರ್‌ಎಸ್‍ಎಸ್ ಮುಖಂಡ ಎಚ್.ಎಂ.ಅರುಣ್‍ಕುಮಾರ್, ಬಿಜೆಪಿಯ ಮಂಜುನಾಥ್ ಇಂಚರ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಮಂಜು, ಮುಸ್ಲಿಂ ಮುಖಂಡರಾದ ಬಾಬುಲಾಲ್, ಸಮಿರ್, ಜಾವಿದ್, ಅಮಾನುಲ್ಲಾ, ಬಾಷ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.