ADVERTISEMENT

ಸಾಸ್ವೆಹಳ್ಳಿ | ವೀರಭದ್ರೇಶ್ವರಸ್ವಾಮಿ ಹೂವಿನ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:02 IST
Last Updated 15 ಏಪ್ರಿಲ್ 2025, 14:02 IST
ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆ ವೀರಭದ್ರಸ್ವಾಮಿಯ ಹೂವಿನ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು
ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆ ವೀರಭದ್ರಸ್ವಾಮಿಯ ಹೂವಿನ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು    

ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆ ಗ್ರಾಮದ ವೀರಭದ್ರೇಶ್ವರಸ್ವಾಮಿ ಹೂವಿನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಬೆಳಿಗ್ಗೆ ಅದ್ದೂರಿಯಾಗಿ ನಡೆಯಿತು.

ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದವಸ–ಧಾನ್ಯ ಹಾಗೂ ನಗದು ಹರಕೆ ಸಲ್ಲಿಸಿದರು.

ಮುನ್ನ ವೀರಭದ್ರೇಶ್ವರಸ್ವಾಮಿ, ಬೈರನಹಳ್ಳಿ ಬಸವಣ್ಣ, ವಡೆಯರಪುರದ ಶ್ರೀ ನಂದಿ ಬಸವೇಶ್ವರ, ಅರಸನಘಟ್ಟದ ರುದ್ರಸ್ವಾಮಿ ಉತ್ಸವಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ನಂದಿಕೋಲು, ಕೊಂಬು-ಕಹಳೆ, ಕರಡಿಮಜಲು, ತಮಟೆ ವಾದ್ಯಗಳ ಮೂಲಕ ಕರೆತರಲಾಯಿತು. ರಥಕ್ಕೆ ಪೂಜಾ ಕಾರ್ಯ ನೆರವೇರಿಸಿ ಉತ್ಸವಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ADVERTISEMENT

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥದ ಗಾಲಿಗೆ ಹಿಡಿಗಾಯಿ ಒಡೆದು, ವೀರಭದ್ರೇಶ್ವರ ಸ್ವಾಮಿಗೆ ಜಯವಾಗಲಿ ಎಂದು ಜಯಘೋಷ ಕೂಗುವ ಮೂಲಕ ರಥವನ್ನು ಎಳೆದರು. ವಿವಿಧ ಬಣ್ಣಗಳ ಧ್ವಜ ಹಾಗೂ ಜಾಜಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ ಮತ್ತು ಆಳೆತ್ತರದ ಹೂವಿನ ಹಾರಗಳಿಂದ ಅಲಂಕೃತವಾಗಿದ್ದ ರಥವು ರಾಜಬೀದಿಯಲ್ಲಿ ಸಾಗಿತು.

ಭಕ್ತರು ಬಾಳೆಹಣ್ಣು, ಉತ್ತುತ್ತಿ, ಕಾಳುಮೆಣಸು ಮಂಡಕ್ಕಿಯನ್ನು ರಥದ ಕಳಶಕ್ಕೆ ಎರಚಿ ಭಕ್ತಿ ಸಮರ್ಪಿಸಿದರು.

ಮಧ್ಯಾಹ್ನ ಕೊಲ್ಲಾರಿ ಬಂಡಿ ಉತ್ಸವ ಹಾಗೂ ರಾತ್ರಿ ಗುಂಡಿ ಓಕಳಿ ಸಂಭ್ರಮದಿಂದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.