ಬಸವಾಪಟ್ಟಣ: ಸಮೀಪದ ಕಣಿವೆಬಿಳಚಿಯ ಪರಿಶಿಷ್ಟ ಜಾತಿಯ ಮಹಿಳೆಯರಿಬ್ಬರು ಅಂಬೇಡ್ಕರ್ ಮತ್ತು ಬಸವ ವಸತಿ ನಿಗಮಕ್ಕೆ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಮಂಜೂರಾಗಿಲ್ಲ. ಇದರಿಂದಾಗಿ ಬೀದಿಯಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ಎದುರಾಗಿದೆ.
ಮನೆ ಮಂಜೂರಾಗುವ ಭರವಸೆಯಲ್ಲಿ ಇವರು ಶಿಥಿಲಗೊಂಡಿದ್ದ ಮನೆಗಳನ್ನು ನೆಲಸಮ ಮಾಡಿದ್ದಾರೆ. ಆದರೆ ಈಗ ಮನೆಯೂ ಮಂಜೂರಾಗಿಲ್ಲ, ಬದುಕಲು ಸೂರು ಇಲ್ಲದ ಸ್ಥಿತಿ ಎದುರಾಗಿದೆ. ಒಬ್ಬರು ಟಾರ್ಪಾಲ್ ಬಳಸಿ ನೆರಳು ಮಾಡಿಕೊಂಡಿದ್ದರೆ, ಮತ್ತೊಬ್ಬರು ಚಿಕ್ಕ ಗುಡಿಸಲು ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ.
‘ಅಂಬೇಡ್ಕರ್ ವಸತಿ ನಿಗಮದಿಂದ ಮನೆ ಮಂಜೂರಾಗುತ್ತದೆ ಎಂದು ನಂಬಿದ್ದ ನಾನು, ಇಲ್ಲಿನ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದೆ. ಸಂಪೂರ್ಣ ಶಿಥಿಲಗೊಂಡಿದ್ದ ಮನೆಯನ್ನು ನೆಲಸಮ ಮಾಡಿ, ಸ್ವಂತ ಖರ್ಚಿನಲ್ಲಿ ಅಡಿಪಾಯ ಹಾಕಿಸಿ ನಿಗಮದ ಸಹಾಯ ಧನಕ್ಕೆ ಎದುರು ನೋಡುತ್ತಿದ್ದೇನೆ. ಐವರು ಹೆಣ್ಣು ಮಕ್ಕಳಿದ್ದು, ನಾನು ಮತ್ತು ಪತಿ ದಿನಗೂಲಿ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದೇವೆ. ವಾಸಿಸಲು ಮನೆ ಇಲ್ಲದಾಗಿದೆ. ಟಾರ್ಪಾಲಿನ ಮರೆಯಲ್ಲಿ ಹರೆಯದ ಹೆಣ್ಣು ಮಕ್ಕಳೊಂದಿಗೆ ಕಷ್ಟಕರ ಜೀವನ ಸಾಗಿಸುತ್ತಿದ್ದೇವೆ’ ಎಂದು ಲತಾ ವಾಸುದೇವ ಅಳಲು ತೋಡಿಕೊಂಡರು.
‘ಅಂಬೇಡ್ಕರ್ ನಿಗಮದಡಿ ಮತ್ತು ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದೇವೆ. ಆದರೆ ಇನ್ನೂ ವಸತಿ ಮಂಜೂರಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ಈಗ ದಿಕ್ಕೇ ತೋಚದಾಗಿದೆ’ ಎಂದು ಲತಾ ಹೇಳಿದರು.
‘ನಮ್ಮ ಮನೆ ಬೀಳುವ ಸ್ಥಿತಿಯಲ್ಲಿತ್ತು. ಆದ್ದರಿಂದ ಕೆಡವಿದ್ದೇವೆ. ನಮಗೆ ಅಂಬೇಡ್ಕರ್ ನಿಗಮದಿಂದ ಮನೆ ಮಂಜೂರು ಮಾಡಿಸಿ ಎಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಈವರೆಗೂ ಮಂಜೂರಾತಿ ದೊರೆಯದೇ, ಯಾವ ಸಹಾಯಧನವೂ ಬಾರದೇ ಇರುವುದರಿಂದ ಮನೆಯ ಅಡಿಪಾಯದ ಸಮೀಪದಲ್ಲಿ ಚಿಕ್ಕ ಗುಡಿಸಲು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದೇವೆ. ದಿನಗೂಲಿಯೇ ನಮ್ಮ ಜೀವನಕ್ಕೆ ಆಸರೆ’ ಎಂದು ಪೂಜಾ ಸ್ವಾಮಿ ತಿಳಿಸಿದರು.
‘ಶಾಸಕರು ಮತ್ತು ಹಿರಿಯ ಅಧಿಕಾರಿಗಳು ನಮ್ಮ ಈ ಸ್ಥಿತಿಯನ್ನು ನೋಡಿ ಯಾವುದಾದರೂ ವಸತಿ ನಿಗಮದಿಂದ ಮನೆಯನ್ನು ಮಂಜೂರು ಮಾಡಿಸಬೇಕು’ ಎಂದು ಪೂಜಾ ವಿನಂತಿಸಿದರು.
‘ಅಂಬೇಡ್ಕರ್ ಹಾಗೂ ಬಸವ ವಸತಿ ನಿಗಮಗಳಿಂದ ಯಾವ ಮನೆಗಳೂ ಮಂಜೂರಾಗಿಲ್ಲ. ಒಂದು ತಿಂಗಳ ಹಿಂದೆ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆಗಳ ಮಂಜೂರಾತಿಗಾಗಿ 58 ಜನ ಫಲಾನುಭವಿಗಳ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದೇವೆ. ಅಲ್ಲಿಂದ ಮಂಜೂರಾದರೆ ಮಹಿಳೆಯರಿಬ್ಬರಿಗೂ ಮನೆಗಳು ದೊರೆಯಬಹುದು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಶ್ರೀನಿವಾಸ್, ಪಿಡಿಒ ಮಂಜಪ್ಪ ಮತ್ತು ಕಾರ್ಯದರ್ಶಿ ಹನುಮಂತಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.