ಚನ್ನಗಿರಿ: ಯಾವ ದೇಶದಲ್ಲಿ ದೇವಸ್ಥಾನದ ಗಂಟೆಗಳಿಗಿಂತ ಶಾಲಾ ಗಂಟೆಗಳು ಹೆಚ್ಚಾಗಿ ಮೊಳಗುತ್ತವೆಯೋ ಅಂತಹ ದೇಶ ಸಂಪೂರ್ಣವಾಗಿ ಪ್ರಗತಿ ಹೊಂದಿದ ದೇಶವಾಗಿರುತ್ತದೆ ಎಂದು ತುಮಕೂರಿನ ಸಾಹಿತಿ ಕೆ.ಬಿ. ಸಿದ್ದಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಶುಕ್ರವಾರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯಿಂದ ನಡೆದ 'ಸಂವಿಧಾನ ಉಳಿವಿಗಾಗಿ' ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಹೆಚ್ಚು ಮಹತ್ವವವನ್ನು ಕೊಟ್ಟವರು ಅಂಬೇಡ್ಕರ್. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಬಹುದಾಗಿದೆಯೇ ಹೊರತು, ಯಾರಿಂದಲೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಸಂವಿಧಾನ ಈ ದೇಶದ ತಂದೆ, ತಾಯಿಯಾಗಿದೆ. ಸಂವಿಧಾನ ಇಲ್ಲದಿದ್ದರೆ ಈ ದೇಶ ಅನಾಥವಾಗುತ್ತಿತ್ತು. ಸಂವಿಧಾನವೇ ನಮ್ಮ ದೇಶದ ಅತ್ಯಂತ ದೊಡ್ಡ ಶಕ್ತಿ. ಬ್ರಿಟಿಷರ ಆಡಳಿತದಲ್ಲಿ ದೇಶದಲ್ಲಿ 'ಕಾಡಿನ ನ್ಯಾಯ' ಇತ್ತು. ಆದರೆ ಸ್ವಾತಂತ್ರ್ಯ ಸಿಕ್ಕ ನಂತರ 'ನಾಡಿನ ನ್ಯಾಯ' ಜಾರಿಗೆ ಬಂದಿದೆ. ಈ ನಾಡಿನ ನ್ಯಾಯವನ್ನು ಉಳಿಸುವುದಕ್ಕಾಗಿ ಸಂವಿಧಾನ ಉಳಿಯಬೇಕಾಗಿದೆ ಎಂದು ಹೇಳಿದರು.
ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಬೇಕೆಂದು ಕೆಲವು ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಭಗವದ್ಗೀತೆಯ ಬದಲು ಸಂವಿಧಾನದ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವುದು ಅವಶ್ಯಕವಾಗಿ ಆಗಬೇಕಾಗಿದೆ. ಸ್ತ್ರೀ ಹಾಗೂ ಪುರುಷರು ಸಮಾನವಾಗಿ ಸಂವಿಧಾನದ ಆಶಯದಂತೆ ಬದುಕಬೇಕಾಗಿದೆ. ಡಿಎಸ್ಎಸ್ ಸಂಘಟನೆ ಯಾವುದೇ ಕಾರಣಕ್ಕೂ ದುರ್ಬಲವಾಗಿಲ್ಲ. ಕೇವಲ ವಿವಿಧ ಸಂಘಟನೆಗಳು ರಚನೆಯಾಗಿ ಶಕ್ತಿಯ ವಿಭಜನೆಯಾಗಿದೆ. ರಕ್ಷಣೆ, ಸ್ವಾತಂತ್ರ್ಯ ಹಾಗೂ ಗೌರವವನ್ನು ನೀಡುವುದು ಅಗತ್ಯ ಎಂದು ಹೇಳಿದರು.
ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ‘ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ 15 ಜನರು ಬಲಿಯಾಗಿದ್ದಾರೆ. ಇದು ನಮ್ಮಲ್ಲಿರುವ ಮೌಢ್ಯ ಕಾರಣವಾಗಿದೆ. ಆದ್ದರಿಂದ ಮೊದಲು ನಾವೆಲ್ಲಾ ಮೌಢ್ಯದಿಂದ ಹೊರಬರುವುದು ಅವಶ್ಯ. 'ಹನುಮಂತ' ದಲಿತ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಹನುಮಂತ ದಲಿತ ಎಂಬ ಕಾರಣಕ್ಕಾಗಿ ಮಂಗನಂತೆ ಚಿತ್ರೀಕರಿಸಲಾಗಿದೆ ಎಂಬ ಅನುಮಾನ ಜನರಲ್ಲಿ ಉಂಟಾಗಿದೆ. ದೇಶದಲ್ಲಿರುವ ಎಲ್ಲಾ ಹನುಮಂತ ದೇವರ ದೇವಾಲಯಗಳನ್ನು ಬಾಗಿಲು ಹಾಕಿಸಲು ಈ ಮುಖ್ಯಮಂತ್ರಿ ಕೈಯಲ್ಲಿ ಸಾಧ್ಯವಾಗುತ್ತದೆಯೇ’ ಎಂದು ಪ್ರಶ್ನಿಸಿದರು.
‘ಕಿತ್ತು ಹೋಗಿರುವ ಜನಿವಾರವನ್ನು ಬೇಗ ಬದಲಾಯಿಸಬಹುದು. ಆದರೆ ಸಂವಿಧಾನವನ್ನು ಬದಲಾಯಿಸಲು ಯಾವ ಪಕ್ಷದಿಂದಲೂ ಸಾಧ್ಯವಾಗುವುದಿಲ್ಲ. ದಲಿತರು ಮತವನ್ನು ಆಸೆ, ಆಮಿಷಗಳಿಗೆ ಬಲಿಯಾಗಿ ಮಾರಿಕೊಳ್ಳದೇ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಬಳಸಿಕೊಳ್ಳಿ. ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್, ತಹಶೀಲ್ದಾರ್ ಎನ್.ಜೆ. ನಾಗರಾಜ್, ಸಿಪಿಐ ಕೆ.ಎನ್. ಗಜೇಂದ್ರಪ್ಪ, ಮಾದಿಗ ಸಮಾಜದ ಅಧ್ಯಕ್ಷ ಬಿ. ಮಂಜುನಾಥ್, ಜಿಲ್ಲಾ ದಸಂಸ ಸಂಚಾಲಕ ಕುಂದುವಾಡ ಮಂಜುನಾಥ್, ಸಿದ್ಧರಾಮಪ್ಪ, ಸಿ. ಸಿದ್ದಪ್ಪ, ಶಿವಕುಮಾರ್, ರಮೇಶ್, ಉಸ್ಮಾನ್ ಶರೀಫ್, ಟಿ.ಎಚ್. ಹಾಲೇಶಪ್ಪ, ಪಿ. ರುದ್ರಪ್ಪ ಇದ್ದರು. ತಾಲ್ಲೂಕು ಸಂಚಾಲಕ ಚಿತ್ರಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.