ADVERTISEMENT

ದಾವಣಗೆರೆ: ದ್ವಿತೀಯ ಪಿಯುಸಿ ಪರೀಕ್ಷೆ ನಿರಾತಂಕ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 14:13 IST
Last Updated 4 ಮಾರ್ಚ್ 2020, 14:13 IST
ದ್ವೀತಿಯ ಪಿಯುಸಿ ಪರೀಕ್ಷೆ ಅಂಗವಾಗಿ ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಕೊನೆ ಕ್ಷಣದ ತಯಾರಿಯಲ್ಲಿರುವ ವಿದ್ಯಾರ್ಥಿಯರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದ್ವೀತಿಯ ಪಿಯುಸಿ ಪರೀಕ್ಷೆ ಅಂಗವಾಗಿ ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಕೊನೆ ಕ್ಷಣದ ತಯಾರಿಯಲ್ಲಿರುವ ವಿದ್ಯಾರ್ಥಿಯರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲೆಯ 31 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿವಸವಾದ ಬುಧವಾರ ನಿರಾಂತಕವಾಗಿ ನಡೆಯಿತು.

ಭೌತವಿಜ್ಞಾನ ವಿಷಯದಲ್ಲಿ 7,878 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅವರಲ್ಲಿ 137 ಮಂದಿ ಗೈರು ಹಾಜರಾಗಿದ್ದರು. 7,741 ಮಂದಿ ಪರೀಕ್ಷೆ ಬರೆದಿದ್ದಾರೆ. ಇತಿಹಾಸ ವಿಷಯದಲ್ಲಿ 7,151 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು ಅವರಲ್ಲಿ 6,723 ಮಂದಿ ಪರೀಕ್ಷೆ ಬರೆದಿದ್ದು, 428 ಮಂದಿ ಗೈರು ಹಾಜರಾಗಿದ್ದರು. ಬೇಸಿಕ್‌ ಮ್ಯಾಥಮೆಟಿಕ್ಸ್ ವಿಷಯದಲ್ಲಿ 13 ಮಂದಿ ನೋಂದಾಯಿಸಿದ್ದು, ಎಲ್ಲರೂ ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಯು ನಾಗರಾಜ‍ಪ್ಪ ಆರ್. ತಿಳಿಸಿದರು.

‘ಪರೀಕ್ಷೆಯಲ್ಲಿ ಯಾವುದೇ ನಕಲು ನಡೆದಿಲ್ಲ. ಯಾರನ್ನೂ ಡಿಬಾರ್ ಮಾಡಿಲ್ಲ. ಪೊಲೀಸ್‌ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಿರಾತಂಕವಾಗಿ ಪರೀಕ್ಷೆ ನಡೆದಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಮೊದಲ ದಿವಸವಾದ್ದರಿಂದ ಪರೀಕ್ಷಾ ಕೇಂದ್ರದ ಆವರಣದಲ್ಲಿ ಗಡಿಬಿಡಿ, ಧಾವಂತ, ಕೊಠಡಿ ಹುಡುಕುವ ಅವಸರ ಕಂಡುಬಂತು. ಸೂಚನಾ ಫಲಕದಲ್ಲಿ ವಿದ್ಯಾರ್ಥಿಗಳ ಪ್ರವೇಶಪತ್ರದ ಸಂಖ್ಯೆ, ಪರೀಕ್ಷಾ ಕೊಠಡಿಯ ಮಾಹಿತಿಯನ್ನು ನೀಡಲಾಗಿತ್ತು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಯಾವ ಕೊಠಡಿಗೆ ಹೋಗಬೇಕು ಎಂಬ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳ ಜತೆಗೆ ಬಂದಿದ್ದ ಪಾಲಕರು ಸ್ವಲ್ಪ ಹೊತ್ತು ಪರೀಕ್ಷಾ ಕೇಂದ್ರದ ಆವರಣದಲ್ಲೇ ಇದ್ದು ತಮ್ಮ ಮಕ್ಕಳಿಗೆ ಧೈರ್ಯ ತುಂಬಿದರು. ಸಮಯ ಆಗುತ್ತಿದ್ದಂತೆಯೇ ಪಾಲಕರನ್ನು ಪರೀಕ್ಷಾ ಕೇಂದ್ರದ ಆವರಣದಿಂದ ಹೊರಗೆ ಕಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.