ADVERTISEMENT

ನಡೆಯದ ಏಳು ಪಾಲಿಕೆಗಳ ಚುನಾವಣೆ

ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ಜನ

ಬಾಲಕೃಷ್ಣ ಪಿ.ಎಚ್‌
Published 9 ಮೇ 2019, 18:21 IST
Last Updated 9 ಮೇ 2019, 18:21 IST
ವೀರೇಂದ್ರ ಕುಂದಗೋಳ
ವೀರೇಂದ್ರ ಕುಂದಗೋಳ   

ದಾವಣಗೆರೆ: ನಗರಾಡಳಿತಗಳಿಗೆ ಚುನಾವಣೆ ನಡೆಯುತ್ತಿದ್ದರೂ ಮಹಾನಗರ ಪಾಲಿಕೆಗಳಲ್ಲಿ ಮಾತ್ರ ಚುನಾವಣೆಗೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಹಳೇ ಮೀಸಲಾತಿ ಬೇಡ. ಮೀಸಲಾತಿ ಪುನರ್‌ನಿಗದಿ ಮಾಡಬೇಕು ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದೇ ಇದಕ್ಕೆ ಕಾರಣ.

ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಿದ್ದಲ್ಲದೇ ಮೀಸಲಾತಿ ನಿಗದಿ ಪಡಿಸಿ 2018ರ ಜೂನ್‌ನಲ್ಲಿ ಚುನಾವಣಾ ಆಯೋಗ ಮೊದಲ ಪಟ್ಟಿ ಪ್ರಕಟಿಸಿ, ಆಗಸ್ಟ್‌ನಲ್ಲಿ ಅಂತಿಮ ಪಟ್ಟಿ ಪ್ರಕಟಿಸಿತ್ತು. ಇದನ್ನು ಆಕ್ಷೇಪಿಸಿ ಮಂಗಳೂರಿನ ರವೀಂದ್ರ ನಾಯಕ್‌ ಹೈಕೋರ್ಟ್‌ ಮೆಟ್ಟಿಲೇರಿದರು. ದಾವಣಗೆರೆಯಿಂದ ಎಚ್‌. ಜಯಣ್ಣ ಆಕ್ಷೇಪ ಅರ್ಜಿ ದಾಖಲಿಸಿದರು.

ನಗರ ಪಾಲಿಕೆಯ ಕಾಯ್ದೆ ಮತ್ತು ಉಳಿದ ನಗರಾಡಳಿತಗಳ ಕಾಯ್ದೆ ಬೇರೆ ಬೇರೆ ಆಗಿರುವುದರಿಂದ ಪಾಲಿಕೆಗಳನ್ನು ಹೊರತುಪಡಿಸಿ ಉಳಿದ ಕಡೆ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನ ನಿಗದಿ ಮಾಡಿದೆ ಎನ್ನುತ್ತಾರೆ ದಾವಣಗೆರೆ ಪಾಲಿಕೆಯ ಪರಿಷತ್‌ ಕಾರ್ಯದರ್ಶಿ ಗದಿಗೇಶ್‌ ಕೆ. ಶಿರಸಿ.

ADVERTISEMENT

ಪಾಲಿಕೆಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೇ 22ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಿಗದಿಯಾಗಿದೆ. ಅಂದು ಇತ್ಯರ್ಥಗೊಂಡರೆ ಬಳಿಕ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಲಿದೆ.

ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 10 ಮಹಾನಗರ ಪಾಲಿಕೆಗಳಿವೆ. ಅದರಲ್ಲಿ ಮೈಸೂರು, ತುಮಕೂರು ಮತ್ತು ಶಿವಮೊಗ್ಗದಲ್ಲಿ 2018ರಲ್ಲಿ ಚುನಾವಣೆ ನಡೆದಿದೆ. ಹುಬ್ಬಳ್ಳಿ–ಧಾರವಾಡ, ಮಂಗಳೂರು, ಬೆಳಗಾವಿ, ಕಲಬುರ್ಗಿ, ವಿಜಯಪುರ, ದಾವಣಗೆರೆ, ಬಳ್ಳಾರಿ ಪಾಲಿಕೆಗಳು ಚುನಾವಣೆಗೆ ಕಾದುಕುಳಿತಿವೆ.

6 ವರ್ಷ: ಪಾಲಿಕೆಗಳಿಗೆ 2013ರ ಮಾರ್ಚ್‌ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಬಳಿಕ ಮೇಯರ್‌, ಉಪಮೇಯರ್‌ ಮೀಸಲಾತಿ ನಿಗದಿ ಮಾಡಲು ಬಹಳ ಸಮಯ ತೆಗೆದುಕೊಳ್ಳಲಾಯಿತು. ಆಯ್ಕೆಯಾದವರು ಅಧಿಕಾರ ಹಿಡಿಯುವ ಹೊತ್ತಿಗೆ 2014ರ ಫೆಬ್ರುವರಿ ಬಂದಿತ್ತು. ಹೀಗಾಗಿ 2019ರ ಫೆಬ್ರುವರಿ 12ಕ್ಕೆ ಅವಧಿ ಕೊನೆಗೊಂಡಿದೆ. ಅಲ್ಲಿಗೆ ಚುನಾವಣೆಯಾಗಿ 6 ವರ್ಷ ದಾಟಿದೆ. ಮೀಸಲಾತಿ ವಿವಾದದಿಂದಾಗಿ ಇನ್ನೂ ಚುನಾವಣೆ ನಿಗದಿಯಾಗಿಲ್ಲ.

ದಾವಣಗೆರೆಯ ಸಮಸ್ಯೆ ಏನು?
‘ಇಲ್ಲಿನ 6ನೇ ವಾರ್ಡ್‌ ಆಗಿದ್ದ ಅಹ್ಮದ್‌ನಗರ ವಾರ್ಡ್‌ಗೆ ಬಿಸಿಎಂ (ಎ) ಮೀಸಲಾತಿ 2007ರಲ್ಲಿ ನಿಗದಿ ಮಾಡಲಾಗಿತ್ತು. ಪ್ರತಿ ಚುನಾವಣೆಗೆ ಮೀಸಲಾತಿಯನ್ನು ಸರತಿ ಪ್ರಕಾರ ಪುನರ್‌ ನಿಗದಿಗೊಳಿಸಬೇಕು. ಅದರಂತೆ 2013ರಲ್ಲಿ ಎಸ್‌ಸಿಗೆ ಮೀಸಲಾಯಿತು. ಆದರೆ ಆಗಿನ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿಂದಿನ ಮೀಸಲಾತಿಯಂತೆ ಚುನಾವಣೆ ನಡೆಸಲು ಕೋರ್ಟ್‌ ಆದೇಶ ನೀಡಿತು.

ಹಾಗಾಗಿ 2007ರ ಮೀಸಲಾತಿಯೇ ಮುಂದುವರಿಯಿತು. 2017ರಲ್ಲಿ ದಾವಣಗೆರೆ ಪಾಲಿಕೆಯ 41 ವಾರ್ಡ್‌ಗಳನ್ನು 45ಕ್ಕೆ ಹೆಚ್ಚಿಸಲಾಗಿದೆ. ಅಹ್ಮದ್‌ನಗರ 12ನೇ ವಾರ್ಡ್‌ ಆಗಿದೆ. ಆದರೆ ಮೀಸಲಾತಿ ಮಾತ್ರ ಎಸ್‌ಸಿಗೆ ಬಂದಿಲ್ಲ. ಈ ವಾರ್ಡ್‌ನಲ್ಲಿ ಮುಸ್ಲಿಮರು ಮೊದಲ ಸ್ಥಾನದಲ್ಲಿದ್ದರೆ, ಎಸ್‌ಸಿ ಸಮುದಾಯ ಎರಡನೇ ಸ್ಥಾನದಲ್ಲಿದೆ. ಮುಸ್ಲಿಮರಿಗೆ ಅವಕಾಶ ಸಿಕ್ಕಿದೆ. ರೊಟೇಶನ್‌ ಮಾದರಿಯಲ್ಲಿ ಮೀಸಲಾತಿ ಪುನರ್‌ನಿಗದಿ ಮಾಡಿ ಎಂದು ನ್ಯಾಯಾಲಯಕ್ಕೆ ಹೋಗಿದ್ದೇನೆ’ ಎನ್ನುತ್ತಾರೆ ಎಚ್‌. ಜಯಣ್ಣ.

***

ಮೀಸಲಾತಿಯನ್ನು ರೊಟೇಶನ್‌ ಮಾದರಿಯಲ್ಲಿ ಬದಲಾಯಿಸುತ್ತಾ ಹೋಗಬೇಕು. ಆದರೆ ನಮ್ಮ ವಾರ್ಡ್‌ನಲ್ಲಿ ಎಸ್‌ಸಿಗಳಿಗೆ ಅವಕಾಶ ಸಿಕ್ಕಿಲ್ಲ. ಇದು ಈ ಬಾರಿಯಾದರೂ ಸರಿಯಾಗಲಿ.
-ಎಚ್‌. ಜಯಣ್ಣ, ಅರ್ಜಿದಾರರು

**

ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಚುನಾವಣೆ ಘೋಷಣೆಯಾಗಲಿದೆ. ಚುನಾವಣೆ ನಡೆಸಲು ನಾವು ಸನ್ನದ್ಧರಾಗಿದ್ದೇವೆ.
–ವೀರೇಂದ್ರ ಕುಂದಗೋಳ,ಪಾಲಿಕೆ ಆಯುಕ್ತ

**

ಜನಪ್ರತಿನಿಧಿಗಳು ಇಲ್ಲದೇ ಇದ್ದರೆ ಅಧಿಕಾರಿಗಳು ಜನರ ಕೆಲಸ ಮಾಡಲು ಮುತುವರ್ಜಿ ವಹಿಸುವುದಿಲ್ಲ. ಅದಕ್ಕಾಗಿ ಆದಷ್ಟು ಬೇಗ ಚುನಾವಣೆ ನಡೆಸಬೇಕು.
-ಕೆ.ಚಮನ್‌ಸಾಬ್‌,ಮಾಜಿ ಉಪ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.