ADVERTISEMENT

ಭ್ರಷ್ಟಾಚಾರ ನಡೆದಿದ್ದರೆ ಆಧಾರಸಹಿತ ಸಾಬೀತುಪಡಿಸಿ: ಎಚ್‌ಡಿಕೆಗೆ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 11:31 IST
Last Updated 5 ಜನವರಿ 2025, 11:31 IST
ಎಚ್‌ಡಿಕೆ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ
ಎಚ್‌ಡಿಕೆ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ   

ದಾವಣಗೆರೆ: ವಿರೋಧ ಪಕ್ಷಗಳು ಮಾಡಿದ ಆರೋಪಕ್ಕೆ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಆಧಾರಸಹಿತ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

‘ರಾಜ್ಯ ಸರ್ಕಾರದಲ್ಲಿ 60 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ’ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ದಾವಣಗೆರೆಯಲ್ಲಿ ಭಾನುವಾರ ತಿರುಗೇಟು ನೀಡಿದರು.

‘ವಿರೋಧ ಪಕ್ಷಗಳು ಆರೋಪ ಮಾಡುವಾಗ ದಾಖಲೆ ಇಟ್ಟುಕೊಳ್ಳಬೇಕು. ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳು ಇದ್ದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿ’ ಎಂದು ಹೇಳಿದರು.

ADVERTISEMENT

‘ಡೀಸೆಲ್, ವಾಹನ ದರ ಹಾಗೂ ಹಣದುಬ್ಬರ ಸರಿದೂಗಿಸುವ ನಿಟ್ಟಿನಲ್ಲಿ ಸಾರಿಗೆ ನಿಗಮಗಳ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಸಾರಿಗೆ ನಿಗಮಗಳು ಸಂಕಷ್ಟದಲ್ಲಿದ್ದು, ನೌಕರರ ವೇತನ ಪಾವತಿ ಮಾಡುವ ಕಾಳಜಿ ಕೂಡ ಇದರಲ್ಲಿದೆ. ಬಿಜೆಪಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಕೂಡ ಬಸ್‌ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ರೈಲು ಪ್ರಯಾಣ ದರ ಹೆಚ್ಚಳ ಮಾಡಿಲ್ಲವೇ’ ಎಂದು ಪ್ರಶ್ನಿಸಿದರು.

‘ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಬದಲಾವಣೆಯ ಕುರಿತ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ. ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾಗಿರುವ ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸರ್ಕಾರ ಸಿದ್ಧವಿದೆ. ಆದರೆ, ಈ ವಿಚಾರ ನ್ಯಾಯಾಲಯದ ಮುಂದಿದೆ. ಅಲ್ಲಿ ಇತ್ಯರ್ಥವಾದ ಬಳಿಕ ಚುನಾವಣೆ ನಡೆಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ. ಸತೀಶ್ ಜಾರಕಿಹೊಳಿ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಒಳಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ. ದತ್ತಾಂಶದ ಅಗತ್ಯ ಇದ್ದು, ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ರಚಿಸಲಾಗಿದೆ’ ಎಂದರು.

ಮಾರ್ಚ್‌ನಲ್ಲಿ ಬಜೆಟ್‌ ಮಂಡಿಸಲಾಗುತ್ತದೆ. ಬಜೆಟ್‌ಗೂ ಮುನ್ನ ಪೂರ್ವಭಾವಿ ಸಭೆ ನಡೆಯಲಿದ್ದು, ಆಗ ವಿಶ್ವ ಕನ್ನಡ ಸಮ್ಮೇಳನದ ಅನುದಾನಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಾಗುವುದು
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.