ADVERTISEMENT

ದಾವಣಗೆರೆ: ವೈಭವದ ಸಿದ್ಧರಾಮೇಶ್ವರ ರಥೋತ್ಸವ

ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಉತ್ಸವ, ರಥ ಎಳೆದು ಪುನೀತರಾದ ಭಕ್ತರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:44 IST
Last Updated 29 ಜುಲೈ 2025, 5:44 IST
ದಾವಣಗೆರೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ನಗರದ ವೆಂಕಾಭೋವಿ ಕಾಲೊನಿಯ ಸಿದ್ಧರಾಮೇಶ್ವರ ದೇವಸ್ಥಾನದ ಬಳಿ ಶಿವಯೋಗಿ ಸಿದ್ಧರಾಮೇಶ್ವರ ದೇವರ ರಥೋತ್ಸವ ಸೋಮವಾರ ವೈಭವದಿಂದ ನೆರವೇರಿತು. ನಾಡಿನ ವಿವಿಧ ಮಠಾಧೀಶರು ರಥ ಎಳೆದು ಉತ್ಸವಕ್ಕೆ ಚಾಲನೆ ನೀಡಿದರು.

ಶಿವಯೋಗಿ ಸಿದ್ಧರಾಮೇಶ್ವರ ದೇವರ 63ನೇ ರಥೋತ್ಸವ ಹಾಗೂ ಸಿದ್ದರಾಮೇಶ್ವರ ಸ್ವಾಮೀಜಿ ಅವರ 23ನೇ ಸಂಸ್ಮರಣೋತ್ಸವವನ್ನು ಭೋವಿ ಗುರುಪೀಠದ ವತಿಯಿಂದ ಸೋಮವಾರ ಆಯೋಜಿಸಲಾಗಿತ್ತು. ಸಿದ್ಧರಾಮೇಶ್ವರ ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಸಿದ್ಧರಾಮೇಶ್ವರ ದೇವಸ್ಥಾನದ ಬಳಿಯಿಂದ ಆರಂಭವಾದ ರಥವು ಮಾಗನಹಳ್ಳಿ ರಸ್ತೆ, ಕೆ.ಆರ್. ರಸ್ತೆ, ಅರಳಿಮರ ವೃತ್ತ, ಚಾಮರಾಜಪೇಟೆ ರಸ್ತೆ ಮೂಲಕ ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ ರಸ್ತೆ, ಹಾಸಬಾವಿ ವೃತ್ತದ ಮೂಲಕ ದೇವಸ್ಥಾನಕ್ಕೆ ಮರಳಿತು.

ADVERTISEMENT

ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡ ರಥ ಕಣ್ಮನ ಸೆಳೆಯುತ್ತಿತ್ತು. ರಥದ ಮುಂಭಾಗದಲ್ಲಿ ಗೊರವರ ಕುಣಿತ, ಕೀಲು ಗೊಂಬೆ, ಉರುಮೆ, ಮರಗೋಲು ಕುಣಿತ, ಡೊಳ್ಳು ಕುಣಿತ ಗಮನ ಸೆಳೆದವು. ನಾದಸ್ವರ, ನಾಸಿಕ್ ಡೋಲು, ಕಂಸಾಳೆ ಸೇರಿದಂತೆ ಇತರ ಕಲಾ ತಂಡಗಳು ಉತ್ಸವ ಕಳೆಗಟ್ಟುವಂತೆ ಮಾಡಿದವು. ರಥೋತ್ಸವದ ಅಂಗವಾಗಿ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

‘ಸಿದ್ಧರಾಮೇಶ್ವರರು ಜಾತಿ, ಧರ್ಮ, ವರ್ಣಾಶ್ರಮದ ವಿರುದ್ಧ ಬಂಡೆದ್ದು ಮಾನವ ಜಾತಿ, ಧರ್ಮ ಒಂದೇ ಎಂಬುದಾಗಿ ಸಾರಿದರು. ಅದನ್ನು ನಿಜಜೀವನದಲ್ಲಿಯೂ ಕಾರ್ಯರೂಪಕ್ಕೆ ತಂದರು. ತನು, ಮನ, ಆತ್ಮ ಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ತಿಳಿಸಿದರು. ಸಂಸ್ಕೃತ, ಪ್ರಾಸ, ಛಂದಸ್ಸುಗಳ ಹಂಗಿಲ್ಲದೇ ಜನರ ಆಡುಭಾಷೆಯಲ್ಲಿ ವಚನ ರಚಿಸಿದರು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಮದ್ದಳೆ ನುಡಿಸುತ್ತಿದ್ದ ಅಲ್ಲಮಪ್ರಭು ಶುನ್ಯಪೀಠದ ಪ್ರಥಮ ಅಧ್ಯಕ್ಷರಾಗಿದ್ದರು. ಚನ್ನಬಸವಣ್ಣ 2ನೇ ಹಾಗೂ ಸಿದ್ಧರಾಮೇಶ್ವರರು 3ನೇ ಪೀಠಾಧ್ಯಕ್ಷರಾಗಿದ್ದರು. ಇಂದಿನ ಪೀಠಗಳು ಸ್ವಜಾತಿಯನ್ನು ಮೀರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಪುರಷೋತ್ತಮಾನಂದಪುರಿ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ನಾರಾಯಣಗುರು ಮಹಾಸಂಸ್ಥಾನದ ಆರ್ಯ ರೇಣುಕಾನಂದ ಸ್ವಾಮೀಜಿ, ಬಸವ ಬೃಂಗೇಶ್ವರ ಸ್ವಾಮೀಜಿ, ವೇಮನಾನಂದ ಸ್ವಾಮೀಜಿ, ಬಸವ ಕುಂಬಾರಗುಂಡಯ್ಯಾ ಸ್ವಾಮೀಜಿ, ಅನ್ನಧಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಭೋವಿ ಸಮುದಾಯದ ಮುಖಂಡರಾದ ಎಚ್. ಜಯಣ್ಣ, ಡಿ. ಬಸವರಾಜ್, ಬಿ.ಟಿ. ಸಿದ್ಧಪ್ಪ, ಎಚ್. ವೆಂಕಟೇಶ್, ವಿ.ಗೋಪಾಲ್, ಎನ್. ಆನಂದಪ್ಪ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಗರಗ ರಾಜಪ್ಪ, ಅರ್ಜುನಪ್ಪ ಪಾಲ್ಗೊಂಡಿದ್ದರು.

ದಾವಣಗೆರೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ನಾಡಿನ ವಿವಿಧ ಮಠಾಧೀಶರು –ಪ್ರಜಾವಾಣಿ ಚಿತ್ರ
ಸಿದ್ದರಾಮೇಶ್ವರರ ತತ್ವ ಆದರ್ಶಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯವನ್ನು ಲಿಂಗೈಕ್ಯ ಸಿದ್ಧರಾಮೇಶ್ವರ ಸ್ವಾಮೀಜಿ ಮಾಡಿದ್ದಾರೆ. ರಥೋತ್ಸವದ ವೈಭವ ಇಮ್ಮಡಿಯಾಗುತ್ತಿದೆ
ನಿರಂಜನಾನಂದಪುರಿ ಸ್ವಾಮೀಜಿ ಕನಕ ಗುರುಪೀಠ
ಸಿದ್ದರಾಮೇಶ್ವರರು ಜಗತ್ತಿಗೆ ಸಮಾನತೆ ಸಂದೇಶವನ್ನು ಸಾರಿದರು. ಭಕ್ತಿಯೇ ಬಸವಲಿಂಗ ಎಂಬುದಾಗಿ ವಚನ ಸಾಹಿತ್ಯವನ್ನು ನಾಡಿಗೆ ಪರಿಚಯಿಸಿದರು
ಪ್ರಸನ್ನಾನಂದಪುರಿ ಸ್ವಾಮೀಜಿ ವಾಲ್ಮೀಕಿ ಗುರುಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.