ದಾವಣಗೆರೆ: ರೈತರು ಸಮತೋಲಿತ ರಸಗೊಬ್ಬರ ಬಳಕೆ ಮಾಡದ ಪರಿಣಾಮವಾಗಿ ಮಣ್ಣಿಗೆ ಪೊಟ್ಯಾಷ್ ಪೋಷಕಾಂಶದ ಕೊರತೆ ಕಾಡತೊಡಗಿದೆ. ಇದರಿಂದ ಕೃಷಿ ಬೆಳೆಗಳ ಇಳುವರಿ ಕುಂಠಿತವಾಗುತ್ತಿದ್ದು, ರೋಗ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ನಿರಂತರ ಮಣ್ಣು ಪರೀಕ್ಷೆಯಿಂದ ಮಣ್ಣಿನ ಆರೋಗ್ಯ ಹದಗೆಟ್ಟಿರುವ ಮಾಹಿತಿ ಕೃಷಿ ಇಲಾಖೆಗೆ ಲಭ್ಯವಾಗಿದೆ. ಮುಸುಕಿನ ಜೋಳಕ್ಕೆ ಹೆಚ್ಚುತ್ತಿರುವ ರೋಗಬಾಧೆ ಅವಲೋಕಿಸಿದಾಗ ಪೊಟ್ಯಾಷ್ ಪೋಷಕಾಂಶಗಳ ಕೊರತೆ ಇರುವುದು ದೃಢಪಟ್ಟಿದೆ. ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ (ಕಾಂಪ್ಲೆಕ್ಸ್) ರಸಗೊಬ್ಬರ ಬಳಸುವಂತೆ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಮುಂದಾಗಿದೆ.
ಜಿಲ್ಲೆಯಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ಕೆಂಪು ಗೋಡು ಮಣ್ಣಿನ ಕೃಷಿ ಪ್ರದೇಶ ಹೆಚ್ಚು. ಇದರಲ್ಲಿ ನೈಸರ್ಗಿಕವಾಗಿ ಪೊಟ್ಯಾಷ್ ಪೋಷಕಾಂಶ ವಿರಳ. ಪೊಟ್ಯಾಷ್ ಹಿಡಿದಿಡುವ ಸಾಮರ್ಥ್ಯ ಕೂಡ ಈ ಮಣ್ಣಿಗೆ ಕಡಿಮೆ. ಇದರಿಂದ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಕುಂದಿ, ಕೀಟ ಬಾಧೆಗಳು ಕಾಣಿಸಿಕೊಳ್ಳುತ್ತಿವೆ. ಬೆಳೆಯ ತಳಭಾಗದ ಎಲೆ ಅಥವಾ ಎಲೆಯ ಅಂಚು ಸುಟ್ಟಿರುವ ಲಕ್ಷಣ ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ವರ್ಷಗಳಿಂದ ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದೆ. 1.26 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈ ಬೆಳೆಗೆ ಬಹುತೇಕ ರೈತರು ಮೂಲಗೊಬ್ಬರವಾಗಿ ಡಿಎಪಿ ಮಾತ್ರವೇ ಬಳಸುತ್ತಿದ್ದಾರೆ. ಸಮತೋಲಿತ ರಸಗೊಬ್ಬರ ಬಳಕೆ ಮಾಡದಿರುವುದು ಮಣ್ಣಿನ ಆರೋಗ್ಯಕ್ಕೆ ತೀವ್ರ ಸಮಸ್ಯೆಯುಂಟು ಮಾಡಿದೆ.
‘ಬೆಳೆಗಳಿಗೆ ಸಾರಜನಿಕ, ರಂಜಕ ಮತ್ತು ಪೊಟ್ಯಾಷ್ ಪ್ರಧಾನ ಪೋಷಕಾಂಶಗಳು. ಡಿಎಪಿ ರಸಗೊಬ್ಬರವನ್ನು ಮಾತ್ರ ಬಳಸಿದರೆ ರಂಜಕದ ಅಂಶ ಮಣ್ಣಿನಲ್ಲಿ ಹೆಚ್ಚಾಗುತ್ತದೆ. ಇದು ಮಣ್ಣಿನಲ್ಲಿರುವ ಲಘು ಪೋಷಕಾಂಶಗಳಾದ ಜಿಂಕ್ ಮತ್ತು ಕಬ್ಬಿಣದ ಅಂಶಗಳನ್ನು ಸ್ವೀಕರಿಸಲು ಬೆಳೆಗೆ ಅವಕಾಶ ನೀಡುವುದಿಲ್ಲ. ಹೀಗಾಗಿ, ಪೊಟ್ಯಾಷ್ ಅಂಶವನ್ನು ಹೊಂದಿರುವ ಸಂಯುಕ್ತ ರಸಗೊಬ್ಬರವನ್ನು ನೀಡುವ ಅಗತ್ಯವಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಡಿಎಪಿ ರಸಗೊಬ್ಬರ ಅಧಿಕ ಸಬ್ಸಿಡಿ ದರದಲ್ಲಿ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಪೊಟ್ಯಾಷ್ ಪೋಷಕಾಂಶ ಹೊಂದಿದ ರಸಗೊಬ್ಬರಕ್ಕೆ ಅಧಿಕ ಬೆಲೆ ಇದೆ. ಇದರಿಂದ ರೈತರು ಸುಲಭವಾಗಿ ಡಿಎಪಿ ಬಳಕೆ ಮಾಡುತ್ತಿದ್ದಾರೆ. ಪೊಟ್ಯಾಷ್ ಪೋಷಕಾಂಶ ದಶಕಗಳಿಂದ ಮಣ್ಣಿಗೆ ಸರಿಯಾಗಿ ಸಿಕ್ಕಿಲ್ಲ. ಬೆಳೆಗಳಲ್ಲಿ ರೋಗನಿರೋಧಕ ಅಂಶ ಕಡಿಮೆಯಾಗಲು ಇದು ಪ್ರಧಾನ ಕಾರಣ ಎಂಬುದನ್ನು ಕೃಷಿ ಇಲಾಖೆ ಗುರುತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.