ADVERTISEMENT

ಮಗಳನ್ನು ಮದುವೆ ಮಾಡಿ ಕೊಡಲ್ಲವೆಂದ ಪ್ರೀಯತಮೆಯ ತಂದೆಗೆ ಗುಂಡು ಹಾರಿಸಿದ ಯೋಧನ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2019, 9:17 IST
Last Updated 25 ಮೇ 2019, 9:17 IST
ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆಯಲ್ಲಿ ಪ್ರಕಾಶ್‌ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಯೋಧ ದೇವರಾಜ್‌ನನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆಯಲ್ಲಿ ಪ್ರಕಾಶ್‌ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಯೋಧ ದೇವರಾಜ್‌ನನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.   

ಹೊನ್ನಾಳಿ (ದಾವಣಗೆರೆ ಜಿಲ್ಲೆ): ತಾಲ್ಲೂಕಿನ ಬಿದರಗಡ್ಡೆಯಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದಯೋಧ ದೇವರಾಜ್‌, ಆಕೆಯ ತಂದೆ ಪ್ರಕಾಶ್‌ ಅವರ ಮೇಲೆ ಶುಕ್ರವಾರ ರಾತ್ರಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಬಿದರಗಡ್ಡೆಯ ಪ್ರಕಾಶ್‌ ಅವರಿಗೆ ಎರಡು ಗುಂಡುಗಳು ತಗಲಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಒಂದು ಗುಂಡನ್ನು ಹೊರಗೆ ತೆಗೆಯಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿದರಗಡ್ಡೆಯ ಗ್ರಾಮದ ದೇವರಾಜ್‌ ಎಂಟು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಎನ್ನಲಾಗಿದೆ. ಮೂರು–ನಾಲ್ಕು ವರ್ಷಗಳಿಂದ ಪ್ರಕಾಶ್‌ ಅವರ ಮಗಳನ್ನು ಈತ ಪ್ರೀತಿಸುತ್ತಿದ್ದ. ಪ್ರಕಾಶ್‌ ಅವರ ಮಗಳು ದಾವಣಗೆರೆಯ ಕಾಲೇಜೊಂದರಲ್ಲಿ ಓದುತ್ತಿದ್ದಳು. ದೇವರಾಜ್‌ ಜೊತೆಗೆ ಮದುವೆ ಮಾಡಿಕೊಡಲು ಪ್ರಕಾಶ್‌ ಕುಟುಂಬದವರಿಗೆ ಮನಸ್ಸಿರಲಿಲ್ಲ. ಮನೆಯತ್ತ ಸುಳಿಯದಂತೆ ದೇವರಾಜ್‌ಗೆ ತಾಕೀತು ಮಾಡಿದ್ದರು.

ADVERTISEMENT

ರಜೆಯ ಮೇಲೆ ಬಂದಿದ್ದ ದೇವರಾಜ್‌ ಶುಕ್ರವಾರ ರಾತ್ರಿ 11 ಗಂಟೆಯ ಹೊತ್ತಿಗೆ ಪ್ರಕಾಶ್‌ ಅವರ ಮನೆಯ ಬಳಿ ಬಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಬಳಿಕ ಮನೆಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಪ್ರಕಾಶ್‌ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಹೊಟ್ಟೆ ಹಾಗೂ ಇನ್ನೊಂದು ಎದೆಯ ಬಳಿ ತಗುಲಿದೆ. ಹೀಗಿದ್ದರೂ ಪ್ರಕಾಶ್‌ ಅವರು ದೇವರಾಜ್‌ನನ್ನು ಬೆನ್ನಟ್ಟಿ ಸುಮಾರು 150 ಮೀಟರ್‌ ದೂರಕ್ಕೆ ಹೋಗಿದ್ದಾರೆ. ಆದರೆ, ಬಳಿಕ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಗೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತು.

ಈ ನಡುವೆ ಪ್ರಕಾಶ್‌ ಅವರ ಪತ್ನಿ ರತ್ನಮ್ಮ ಅವರ ಮೊಬೈಲ್‌ಗೆ ಕರೆ ಮಾಡಿದ ದೇವರಾಜ್‌, ಎಲ್ಲಿರುವುದಾಗಿ ವಿಚಾರಿಸಿದ್ದಾನೆ. ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿರುವುದಾಗಿ ಅವರು ಸುಳ್ಳು ಹೇಳಿದ್ದಾರೆ. ಬಳಿಕ ದೇವರಾಜ್‌ ತಡ ರಾತ್ರಿ ಹೊನ್ನಾಳಿ ಠಾಣೆಗೆ ಪಿಸ್ತೂಲ್‌ನೊಂದಿಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.