ADVERTISEMENT

‘15 ದಿನದೊಳಗೆ ಸಮಸ್ಯೆಗೆ ಪರಿಹಾರ ದೊರೆಕಿಸಿ’

ಜಗಳೂರು ತಾಲ್ಲೂಕಿನಲ್ಲಿ ಅಧಿಕಾರಿಗಳಿಂದ ಗ್ರಾಮ ಭೇಟಿ ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:19 IST
Last Updated 25 ಜೂನ್ 2019, 15:19 IST
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಗೆ ದಾವಣಗೆರೆಯ ವಾರ್ತಾ ಇಲಾಖೆಯ ಅಧಿಕಾರಿ ಅಶೋಕ್ ಭೇಟಿ ನೀಡಿ ಸಮಸ್ಯೆ ಆಲಿಸಿದರು
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಗೆ ದಾವಣಗೆರೆಯ ವಾರ್ತಾ ಇಲಾಖೆಯ ಅಧಿಕಾರಿ ಅಶೋಕ್ ಭೇಟಿ ನೀಡಿ ಸಮಸ್ಯೆ ಆಲಿಸಿದರು   

ದಾವಣಗೆರೆ: ಜಗಳೂರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ‘ಗ್ರಾಮ ಭೇಟಿ’ ಮಾಡುವ ಮೂಲಕ ಜನರ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿದರು.

ಬಳಿಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಗ್ರಾಮ ಭೇಟಿಯಲ್ಲಿ ಕಂಡು ಬಂದ ಸಮಸ್ಯೆಗಳಿಗೆ ಪರಿಹಾರ ಕ್ರಮಗಳ ಕುರಿತು ಚರ್ಚಿಸಿದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಮಾತಾನಾಡಿ, ‘ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಾರೇಹಳ್ಳಿ ಗ್ರಾಮದಲ್ಲಿ ಪ್ರಮುಖವಾಗಿ ಜಾನುವಾರಿಗೆ ಮೇವಿನ ಸಮಸ್ಯೆ ಇದ್ದು, ಮೇವು ಬ್ಯಾಂಕ್ ತೆರೆಯಬೇಕು ಎಂದು ಜನರು ಬೇಡಿಕೆಯನ್ನು ಇಟ್ಟಿದ್ದಾರೆ’ ಎಂದರು.

ADVERTISEMENT

‘ಆಶ್ರಯ ವಸತಿ ಯೋಜನೆಯಡಿ ನಿರ್ಮಾಣವಾದ ಮನೆಗಳಿಗೆ ಹಣ ಬಿಡುಗಡೆಯಾಗಿರುವುದಿಲ್ಲ. ಸೂರಗೊಂಡನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ಮತ್ತು ಜನರಿಗೆ ಬಸ್‌ ಸೌಲಭ್ಯವಿಲ್ಲ. ಇವುಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮವಹಿಸಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ‘ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಶಾಲೆಯಲ್ಲಿ ನಿರ್ಮಿಸಿದ ಶೌಚಾಲಯಕ್ಕೆ ಸರಿಯಾಗಿ ನೀರಿನ ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದವರಿಗೂ ಹಣ ಬಿಡುಗಡೆಯಾಗಿಲ್ಲ. ಜನರು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲು ಒತ್ತಾಯಿಸಿದರು’ ಎಂದರು.

ನೀರು ಸರಬರಾಜು ಮಾಡಿದವರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ರಾಜು ಅವರಿಗೆ ಸಿಇಒ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ, ‘ಹಾಲೇಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆ ಬಾರದ ಕಾರಣ ನೀರಿನ ಸಮಸ್ಯೆ ಇದೆ. ದನಕರುಗಳಿಗೆ ಮೇವಿನ ಸಮಸ್ಯೆಯಾಗಿದೆ’ ಎಂದು ತಿಳಿಸಿದರು.

ಬೋರ್‌ವೆಲ್‌ನಿಂದ ಗ್ರಾಮದವರೆಗೆ ಪೈಪ್ ಲೈಲ್ ಅಳವಡಿಸುವ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಪಂಚಾಯಿತಿಯ ಇಒ ಜಾನಕಿರಾಮ್ ಅವರಿಗೆ ಸಿಇಒ ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರೇವಣ್ಣ, ‘ನರನಹಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಹಾಗೂ ಜಾನುವಾರಿಗೆ ಮೇವು ಮತ್ತು ದನ ಕರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಕಾರ್ಯವಾಗಬೇಕೆಂದು’ ತಿಳಿಸಿದರು.

ಡಿಎಚ್‍ಓ ಡಾ.ತ್ರಿಪುಲಾಂಬ, ‘ನಾನು ಭೇಟಿ ನೀಡಿದ ಗ್ರಾಮಗಳಲ್ಲಿ ಎಸ್‌ಸಿ, ಎಸ್‌ಟಿ ಕಾಲೊನಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಗ್ರಾಮದ ಜನರು ಮನವಿ ಮಾಡುತ್ತಿದ್ದಾರೆ. ಅಂಗನವಾಡಿಗಳು ಶಿಥಿಲಾವಸ್ಥೆ ತಲುಪಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯ ಮಾಡಿಸಬೇಕು’ ಎಂದರು.

ಸಭೆಯಲ್ಲಿ 40ಕ್ಕೂ ಹೆಚ್ಚು ಅಧಿಕಾರಿಗಳು ತಾವು ಭೇಟಿ ನೀಡಿದ ಗ್ರಾಮಗಳ ಸಮಸ್ಯೆಯನ್ನು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌. ಬಸವರಾಜೇಂದ್ರ ‘ಗ್ರಾಮಗಳಿಗೆ ಭೇಟಿ ನೀಡಿದಾಗ ಸಮಸ್ಯೆಗಳು ಮೂಲದಿಂದ ಅರ್ಥವಾಗುವುದರಿಂದ ಅವುಗಳಿಗೆ ಪರಿಹಾರವನ್ನು ಸೂಚಿಸಲು ಅನುಕೂಲವಾಗುತ್ತದೆ. 15 ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕಾರ್ಯ ಆಗಬೇಕು. ಮತ್ತೊಮ್ಮೆ ಸಭೆ ನಡೆಸಿ ಪುನರ್‍ವಿಮರ್ಶೆ ಮಾಡಲಾಗುವುದು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಾನಾಯ್ಕ, ಜಗಳೂರು ತಾಲ್ಲೂಕು ಪಂಚಾಯಿತಿ ಇಒ ಜಾನಕೀರಾಂ, ತಹಶೀಲ್ದಾರ್ ತಿಮ್ಮಣ್ಣ, ದೂಡಾ ಆಯುಕ್ತ ಆದಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.