ದಾವಣಗೆರೆ: ವಿಧಾನಪರಿಷತ್‌ನ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ 2026ರ ಜೂನ್ ತಿಂಗಳಲ್ಲಿ ನಿಗದಿಯಾಗಿರುವ ಚುನಾವಣೆಗೆ ಕೋಲಾರ ಜಿಲ್ಲೆಯ ವೈದ್ಯ ಡಾ.ಕೆ.ನಾಗರಾಜ್ ಅವರು ಜೆಡಿಯು ಅಭ್ಯರ್ಥಿ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.
‘ಜೆಡಿಯು ರಾಜ್ಯ ಯುವ ಘಟಕದ ಅಧ್ಯಕ್ಷರೂ ಆಗಿರುವ ನಾಗರಾಜ್ ಅವರನ್ನು ಕಣಕ್ಕೆ ಇಳಿಸುತ್ತಿದ್ದೇವೆ. ಈಗಾಗಲೇ ಎರಡು ಬಾರಿ ಚುನಾವಣೆ ಎದುರಿಸಿರುವ ಅವರಿಗೆ ಅನುಭವ ಇದೆ. ಹಣ, ಹೆಂಡ, ಉಡುಗರೆ ಹಂಚದೇ ಚುನಾವಣೆ ಮಾಡುತ್ತಿದ್ದೇವೆ. ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಪಕ್ಷ ಈಗಿನಿಂದಲೇ ತಯಾರಿ ನಡೆಸಿದೆ. ಚುನಾವಣೆ ಸರಳ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬುದು ಪಕ್ಷದ ಅಪೇಕ್ಷೆ. ಎಎಪಿ, ರೈತ ಸಂಘ ಸೇರಿ ಸೂಕ್ಷ್ಮತೆ ಉಳಿಸಿಕೊಂಡ ರಾಜಕಾರಣಿಗಳು ಬೆಂಬಲ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಆಡಳಿತದಲ್ಲಿ ಹೊಸ ವ್ಯವಸ್ಥೆ ರೂಪಿಸಲು ಇರುವ ಸಾಧ್ಯತೆ ಪರಿಶೀಲಿಸುತ್ತಿದ್ದೇವೆ. ಜನಪರ ಆಲೋಚನೆ ಇರುವ ಎಲ್ಲರೂ ಒಗ್ಗೂಡಿ ಚಳವಳಿ ಶುರು ಮಾಡಿದ್ದೇವೆ. ಪರಿಸರ ತಜ್ಞರು, ಮಠಾಧೀಶರು ಸೇರಿ ಎಲ್ಲರನ್ನೂ ಒಳಗೊಂಡು ಸರ್ವೋದಯ ಚಿಂತನೆ ಮೇಲೆ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದರು.
ಅಭ್ಯರ್ಥಿ ಡಾ.ಕೆ.ನಾಗರಾಜ್, ಜೆಡಿಯು ಧಾರವಾಡ ಜಿಲ್ಲಾ ಅಧ್ಯಕ್ಷ ಶ್ರೀಶೈಲಗೌಡ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಯ್ಯ, ಜಿಲ್ಲಾ ಕಾರ್ಯದರ್ಶಿ ಡಿ.ಆರ್.ಶಿವಯೋಗಿ, ಎಂ.ಡಿ.ನೀಲಗಿರಿಯಪ್ಪ, ರೈತ ಘಟಕದ ಅಧ್ಯಕ್ಷ ಡಿ.ಕೆ.ಶ್ರೀನಿವಾಸ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶಕುಂತಲಾ, ಮುಖಂಡರಾದ ಮಂಜುನಾಥ್ ಸುಗ್ಗಿ, ದೇವರಾಜ ಶಿಂಧೆ ಹಾಜರಿದ್ದರು.
ದೇಶದ ಜನರು ಅಸಹಾಯಕತೆಯಲ್ಲಿ ತೊಳಲಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ವ್ಯಾಪರಿ ಕೇಂದ್ರಗಳಾಗಿವೆ. ಆಸ್ಪತ್ರೆಗಳು ಕೂಡ ಹಣ ಮಾಡು ಕೇಂದ್ರಗಳಾಗಿವೆಮಹಿಮಾ ಪಟೇಲ್ ರಾಜ್ಯ ಘಟಕದ ಅಧ್ಯಕ್ಷ ಜೆಡಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.