ADVERTISEMENT

ಸಾವರ್ಕರ್ ಬಗ್ಗೆ ಹೇಳಿಕೆ: ಡಿ.ಬಸವರಾಜ್‌ಗೆ ಮತ್ತೊಮ್ಮೆ ಬೆದರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:24 IST
Last Updated 24 ಜನವರಿ 2020, 16:24 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ಸಾವರ್ಕರ್‌ಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅವರಿಗೆ ಮತ್ತೊಮ್ಮೆ ಪ್ರಾಣ ಬೆದರಿಕೆಯ ಪತ್ರ ಬಂದಿದೆ.

ಅನಾಮಧೇಯ ವ್ಯಕ್ತಿಯೊಬ್ಬ ಪತ್ರ ಬರೆದು ಪ್ರಾಣ ಬೆದರಿಕೆ ಹಾಕಿದ್ದಾರೆ. ಕಳೆದ ಡಿ. 23 ರಂದು ದೂರವಾಣಿ ಕರೆ ಮಾಡಿ ಸಾರ್ವಕರ್ ಬಗ್ಗೆ ಮಾತನಾಡಿದ್ದಕ್ಕೆ ಪ್ರಾಣ ಬೆದರಿಕೆಯ ಕರೆ ಮಾಡಿದ್ದ ವ್ಯಕ್ತಿ ಇದೀಗ ಡಿ.ಬಸವರಾಜ್ ಅವರು ನೀಡಿರುವ ಹೇಳಿಕೆ ವಾಪಸ್ ಪಡೆಯಬೇಕು. ಹಾಗೂ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೇಳಬೇಕು ಎಂದು ಬೆದರಿಕೆಯ ಪತ್ರ ಬರೆದಿದ್ದಾರೆ.

‘ಜ. 30ರವರೆಗೆ ಕಾಲವಕಾಶ ನೀಡಿದ್ದೇನೆ. ಅಷ್ಟರೊಳಗೆ ಸಾವರ್ಕರ್‌ಗೆ ಮಾಡಿದ ಅಪಮಾನಕ್ಕೆ ಕ್ಷಮೆ ಕೇಳಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ ನಿಮ್ಮ ನಾಯಕರಾದ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗೂಂಡುರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬಿಡುವುದಿಲ್ಲ ಕ್ಷಮೆ ಕೇಳುವ ಹಾಗೆ ಮಾಡುತ್ತೇನೆ’ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾನೆ.

ADVERTISEMENT

‘ಕಳೆದ ಬಾರಿ ಕರೆ ಮಾಡಿದ್ದಕ್ಕೆ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದೀರಾ ಈ ಬಗ್ಗೆ ನನಗೆ ಯಾವುದೇ ತೊಂದರೆಯಿಲ್ಲ. ನಿಮ್ಮ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ಅದಕ್ಕೆ ನಿಮಗೆ ಪತ್ರದ ಮೂಲಕ ಕ್ಷಮೆ ಕೇಳುವಂತೆ ಕೋರುತ್ತಿದ್ದೇನ. ನನ್ನ ಮಾತನ್ನು ತಮಾಷೆ ಎಂದು ತಿಳಿದುಕೊಂಡರೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಪತ್ರದಲ್ಲಿ ಎಚ್ಚರಿಸಿದ್ದಾನೆ.

‘ಕಳೆದ ಬಾರಿ ಫೋನ್ ಮಾಡಿದ್ದ ವ್ಯಕ್ತಿ ಈ ಬಾರಿ ಮನೆಗೆ ಪತ್ರ ಬರೆದಿದ್ದಾನೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್‌ ಅವರಿಗೆ ದೂರು ನೀಡಿದ್ದು, ಶೀಘ್ರ ತನಿಖೆ ನಡೆಸುವಂತೆ ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ಅವರಿಗೆ ಸೂಚಿಸಿದ್ದಾರೆ’ ಎಂದು ಡಿ.ಬಸವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.