ADVERTISEMENT

ಸೈನ್ಯ ಸೇರಲು ರಾಜ್ಯದ ಯುವಕರ ನಿರಾಸಕ್ತಿ

ಪೊಲೀಸ್ ಬ್ಯಾಂಡ್ ಪ್ರದರ್ಶನದಲ್ಲಿ ಬಸವಪ್ರಭು ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 10:09 IST
Last Updated 19 ಅಕ್ಟೋಬರ್ 2019, 10:09 IST
ದಾವಣಗೆರೆಯ ಜಯದೇವ ವೃತ್ತದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಬುಧವಾರ ಹುತಾತ್ಮ ಯೋಧರ ಮತ್ತು ಪೊಲೀಸ್ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಯದೇವ ವೃತ್ತದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಬುಧವಾರ ಹುತಾತ್ಮ ಯೋಧರ ಮತ್ತು ಪೊಲೀಸ್ ಕುಟುಂಬ ವರ್ಗದವರನ್ನು ಸನ್ಮಾನಿಸಲಾಯಿತು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಜ್ಯದ ಯುವಕರು ಸೈನ್ಯಕ್ಕೆ ಸೇರುವಲ್ಲಿ ನಿರಾಸಕ್ತಿ ವಹಿಸುತ್ತಿರುವುದು ವಿಷಾದದ ಸಂಗತಿ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಜಯದೇವ ವೃತ್ತದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಹುತಾತ್ಮ ಯೋಧರ ಕುಟುಂಬ ವರ್ಗದವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಪೊಲೀಸ್ ಬ್ಯಾಂಡ್ ಪ್ರದರ್ಶನದಲ್ಲಿ ಅವರು ಮಾತನಾಡಿದರು.

‘ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಂದ ಹೆಚ್ಚಿನ ಯುವಕರು ಸೈನ್ಯ ಸೇರುತ್ತಿದ್ದು, ಒಂದು ಕಾಲದಲ್ಲಿ ಕರ್ನಾಟಕದವರು ಹೆಚ್ಚು ಇದ್ದರು. ಅದರಲ್ಲೂ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳ ಯುವಕರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು. ದಾವಣಗೆರೆಯ ತೋಳಹುಣಿಸೆಯಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬ ಸೈನಿಕ ಆಗಿರುವ ಉದಾಹರಣೆ ಇದೆ. ಆದರೆ ಇಂದು ಡಾಕ್ಟರ್ ಹಾಗೂ ಎಂಜಿನಿಯರ್ ಆಗಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಅದು ತಪ್ಪಲ್ಲ. ಹುತಾತ್ಮ ಎಂಬ ಬಿರುದು ಸಿಗುವುದು ಸೈನಿಕ ಹಾಗೂ ಪೊಲೀಸ್ ಇಲಾಖೆಯಲ್ಲಿ ಮಾತ್ರ. ಸಾವು ಬಂದೇ ಬರುತ್ತದೆ. ಆದರೆ ಸಾವು ಮನೆಗೋಸ್ಕರ ಆಗದೇ ದೇಶಕ್ಕೋಸ್ಕರ ಆಗಬೇಕು. ಹುತಾತ್ಮರಾದವರು ಅಮರರಾಗಿ ಇರುತ್ತಾರೆ’ ಎಂದು ಹೇಳಿದರು.

ADVERTISEMENT

‘ದೇಶದ 140 ಕೋಟಿ ಜನರು ಸುಖ, ನೆಮ್ಮದಿಯಾಗಿ ಬಾಳುತ್ತಿರುವುದಕ್ಕೆ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಅವರನ್ನು ಮರೆಯಲು ಸಾಧ್ಯವಿಲ್ಲ. ಶತ್ರು ರಾಷ್ಟ್ರ ಪಾಕೀಸ್ತಾನ ಪದೇ ಪದೇ ಹಿಂಬಾಗಿಲ ಮೂಲಕ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಜನರ ಮೇಲೆ ದಾಳಿ ಮಾಡುತ್ತಿದ್ದು, ಅಂತಹ ಭಯೋತ್ಪಾಕರನ್ನು ಮಟ್ಟ ಹಾಕುವ ಕೆಲಸವನ್ನು ಸೈನಿಕರು ಮಾಡುತ್ತಿದ್ದಾರೆ ಅವರ ತ್ಯಾಗ ಹಾಗೂ ಬಲಿದಾನವನ್ನು ಮರೆಯುವಂತಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ‘ಇಂದಿನ ದಿನಗಳಲ್ಲಿ ಯೋಧರ ಕುಟುಂಬಗಳನ್ನು ಕೀಳಾಗಿ ಕಾಣುತ್ತಿರುವುದು ನೋವಿನ ಸಂಗತಿ. ಅದು ಹೋಗಬೇಕು. ಯೋಧರಿಗೆ ಸಲ್ಲಬೇಕಾದ ಗೌರವ ಹಾಗೂ ಪ್ರಾಮುಖ್ಯತೆ ಕೊಟ್ಟರೆ ಮಾತ್ರ ಸಾಮಾನ್ಯ ಜನರು ಸಮಾಧಾನದ ವಾತಾವರಣದಲ್ಲಿ ಜೀವನ ನಡೆಸಲು ಸಾಧ್ಯ. ಯೋಧರು ಗಡಿ ಕಾದು ನಮ್ಮನ್ನು ರಕ್ಷಿಸದೇ ಇದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಅಯೋಮಯವಾಗುತ್ತದೆ. ಯುವಕರು ಯೋಧರ ಮಹತ್ವವನ್ನು ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಪ್ರತಿ ವರ್ಷ ಅ.21ರಂದು ಹುತಾತ್ಮ ಯೋಧರ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕರಿಗೆ ಯೋಧರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಜಯದೇವ ವೃತ್ತದಲ್ಲಿ ಆಯೋಜಿಸಲಾಗಿದೆ. ಪೊಲೀಸ್ ಮುಖ್ಯ ಅಧಿಕಾರಿಗಳ ಸೂಚನೆಯ ಮೇರೆಗೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹುತಾತ್ಮ ಕುಟುಂಬದವರಿಗೆ ಪೊಲೀಸ್ ಬ್ಯಾಂಡ್ ಮೂಲಕ ಗೌರವ ಸಲ್ಲಿಸಿದ್ದೇವೆ. ಅವರ ಕರ್ತವ್ಯ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳಬೇಕು. ನಾಗರಿಕರಿಗೆ ಯುವಕರಿಗೆ ದೇಶಭಕ್ತಿಯ ಕರ್ತವ್ಯಗಳನ್ನು ನೆನೆಯಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದರು.

ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಡಿವೈಎಸ್‌ಪಿ ಮಂಜುನಾಥ್‌ ಗಂಗಲ್ ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.