ADVERTISEMENT

ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಬೇಕು

ವಿಶ್ವ ವಿರಳ ರೋಗಿಗಳ ದಿನಾಚರಣೆ* ‘ರೇಸ್ ಫಾರ್ -7’ ವಾಕಥಾನ್ ಗೆ ವಿಜಯ ರಾಘವೇಂದ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 13:12 IST
Last Updated 29 ಫೆಬ್ರುವರಿ 2020, 13:12 IST
ದಾವಣಗೆರೆ ಕರ್ನಾಟಕ ಹಿಮೊಫೀಲಿಯಾ ಸೊಸೈಟಿಯಲ್ಲಿ ‘ರೇಸ್ ಫಾರ್ –7’ ಜಾಗೃತಿ ಜಾಥಾಕ್ಕೆ ನಟ ವಿಜಯರಾಘವೇಂದ್ರ ಚಾಲನೆ ನೀಡಿದರು.
ದಾವಣಗೆರೆ ಕರ್ನಾಟಕ ಹಿಮೊಫೀಲಿಯಾ ಸೊಸೈಟಿಯಲ್ಲಿ ‘ರೇಸ್ ಫಾರ್ –7’ ಜಾಗೃತಿ ಜಾಥಾಕ್ಕೆ ನಟ ವಿಜಯರಾಘವೇಂದ್ರ ಚಾಲನೆ ನೀಡಿದರು.   

ದಾವಣಗೆರೆ: ವಿಶ್ವ ವಿರಳ ರೋಗಿಗಳ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ರೇಸ್ ಫಾರ್ -7 ಅಭಿಯಾನಕ್ಕೆ ಚಿತ್ರನಟ ವಿಜಯ ರಾಘವೇಂದ್ರ ಶನಿವಾರ ಚಾಲನೆ ನೀಡಿದರು.

ಕರ್ನಾಟಕ ಹಿಮೊಫೀಲಿಯಾ ಸೊಸೈಟಿ ಹಾಗೂ ಭಾರತೀಯ ವಿರಳ ರೋಗಿಗಳ ಸಂಸ್ಥೆಯ (ಒಆರ್‍ಡಿಐ) ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಡಿಗೆ ಆರಂಭಿಸಿ ಜನರಿಗೆ ಸ್ಫೂರ್ತಿ ತುಂಬಿದರು. ಜನರು ಅವರೊಡನೆ ಉತ್ಸಾಹದಿಂದ ಹೆಜ್ಜೆ ಹಾಕಿದರು.

ನಂತರ ಮಾತನಾಡಿ, ‘ಇದು ಕೇವಲ ನಡಿಗೆಯಲ್ಲ. ಇದರಲ್ಲಿ ನಮ್ಮ ಜವಾಬ್ದಾರಿ ಇದೆ. ನಾಗರಿಕರಾಗಿ ಎಲ್ಲರಿಗೂ ಒಂದು ಕರ್ತವ್ಯ ಇದೆ. ಎಲ್ಲರಿಗೂ ಒಂದೇ ತರಹದ ಕಷ್ಟಗಳು ಇರುವುದಿಲ್ಲ. ದೇವರು ಅಪರೂಪದ ಕಾಯಿಲೆಗಳನ್ನು ಕೊಟ್ಟಿರುತ್ತಾನೆ. ಹಣ, ಶ್ರೀಮಂತಿಕೆಯನ್ನೂ ಮೀರಿ ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಬೇಕು. ಜನರ ಸಂಕಷ್ಟಕ್ಕೆ ಸ್ಪಂದಿಸುವವರಿಗೆ ಧನ್ಯವಾದ. ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಹಣ ಎಷ್ಟು ಮುಖ್ಯವೋ ಸಂಕಷ್ಟಕ್ಕೆ ಅವರ ಜೊತೆಯಾಗುವುದು ಅಷ್ಟೇ ಮುಖ್ಯ. ನಿಮ್ಮ ಸಂಕಷ್ಟಕ್ಕೆ ಹೆಗಲಾಗಿ ಇರುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

‘ನಟನೆ, ನೃತ್ಯ, ಹಾಡಿನ ಮೂಲಕವೇ ಕಾಲ ಕಳೆಯುತ್ತಿರುವ ನಮಗೆ ವಾಕಥಾನ್ ಆರಂಭಕ್ಕೆ ಚಾಲನೆ ನೀಡುವ ಸದಾವಕಾಶ ಸಿಕ್ಕಿರುವುದು. ಇದು ಸಹಾಯವಲ್ಲ. ಕರ್ತವ್ಯ ಎಂದು ಭಾವಿಸುತ್ತೇನೆ. ಇಂತಹ ಸಂದರ್ಭ ಯಾವಾಗಲೂ ಬರುವುದಿಲ್ಲ. ಬಂದಾಗ ಬಳಸಿಕೊಳ್ಳಬೇಕು. ನನ್ನ ಸಹೋದ್ಯೋಗಿಗಳಿಗೂ ಇದನ್ನು ಹೇಳುತ್ತೇನೆ. ನಿಮ್ಮೆಲ್ಲರ ಆಶೀರ್ವಾದ. ಯಾವುದೇ ಸಮಯದಲ್ಲೂ ಸಹಾಯಕ್ಕೆ ನಾನು ಸಿದ್ಧನಿದ್ದೇನೆ’ ಎಂದು ಭರವಸೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ವಿರಳ ರೋಗಿಗಳಿಗೆ ಹೆಚ್ಚಿನ ಮಟ್ಟದಲ್ಲಿ, ಇಲ್ಲವೇ ನನ್ನ ಅನುದಾನದಲ್ಲಿ ಸಹಾಯ ಮಾಡುತ್ತೇನೆ. ಅಲ್ಲದೇ, ಸಂಸ್ಥೆಯವರು ನೀಡಿರುವ ಮನವಿಯನ್ನು ಸಂಸತ್ತಿನಲ್ಲಿ ಚರ್ಚೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಕರ್ನಾಟಕ ಹಿಮೊಫೀಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ, ‘ಹಿಮೊಫೀಲಿಯಾ ರೋಗಿಗಳಿಗೆ ಸರ್ಕಾರದಿಂದ ಉಚಿತ ಔಷಧ ನೀಡುತ್ತಿದ್ದು, ಇದು 30 ವರ್ಷಗಳ ಫಲ. ಒಂದೇ ಸೂರಿನಡಿ, ವಸತಿ, ಚಿಕಿತ್ಸೆ, ಬ್ಲಡ್ ಬ್ಯಾಂಕ್ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಸಂಚರಿಸಿ ರೋಗಗಳನ್ನು ತಡೆ ಹಿಡಿಯುವ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.

ಹಿಮೊಫೀಲಿಯಾ ಸೊಸೈಟಿಯಿಂದ ಆರಂಭವಾದ ಜಾಥಾ ಬಿಎಸ್‍ಎನ್ ಕಚೇರಿ, ಪಿ.ಬಿ. ರಸ್ತೆಯ ಮೂಲಕ ರೇಣುಕ ಮಂದಿರ, ಎವಿಕೆ ಕಾಲೇಜು ರಸ್ತೆ, ಸಿಜಿ. ಆಸ್ಪತ್ರೆಯ ಮೂಲಕ ಸೊಸೈಟಿಗೆ ತಲುಪಿತು. ಆರಂಭದಲ್ಲಿ ನೃತ್ಯ ತರಬೇತುದಾರರಾದ ಅನಿಲ್ ಹಾಗೂ ಫೆರ್ರಿ ಅವರು ಅಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಜುಂಬಾ ನೃತ್ಯ ಹೇಳಿಕೊಟ್ಟರು. ಎಸ್‌ಪಿ ಹನುಮಂತರಾಯ ಸೇರಿ ಅಲ್ಲಿದ್ದವರು ಜುಂಬಾ ನೃತ್ಯದ ಮೂಲಕ ಜಾಗೃತಿ ಮೂಡಿಸಿದರು.

ಮೇಯರ್ ಬಿ.ಜಿ.ಅಜಯ್ ಕುಮಾರ್, ಕಲಾವಿದ ಆರ್.ಟಿ. ಅರುಣ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಘವೇಂದ್ರ ಸ್ವಾಮಿ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶಪ್ಪ, ಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಬಿ.ಎಸ್., ಮಕ್ಕಳ ತಜ್ಞ ಎನ್.ಕೆ. ಕಾಳಪ್ಪನವರ್, ಪಾಲಿಕೆ ಸದಸ್ಯೆ ರೇಖಾ ಸುರೇಶ್‌, ನಿವೇಶನ ದಾನಿ ಕಿರುವಾಡಿ ಗಿರಿಜಮ್ಮ, ಜಯಕುಮಾರ್, ಬಿ.ಟಿ. ಅಚ್ಚುತ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.