ADVERTISEMENT

ದಾವಣಗೆರೆ: ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಬೆಂಬಲ

ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಮುಖಂಡರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 14:39 IST
Last Updated 27 ಸೆಪ್ಟೆಂಬರ್ 2020, 14:39 IST
ಕರ್ನಾಟಕ ಬಂದ್ ಅಂಗವಾಗಿ ದಾವಣಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಮೇಯರ್ ಬಿ.ಜಿ ಅಜಯ್‌ಕುಮಾರ್ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ಕರ್ನಾಟಕ ಬಂದ್ ಅಂಗವಾಗಿ ದಾವಣಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಮೇಯರ್ ಬಿ.ಜಿ ಅಜಯ್‌ಕುಮಾರ್ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ದಾವಣಗೆರೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ಕಾನೂನು ತಿದ್ದುಪಡಿಗಳ ವಿರುದ್ಧ ಸೋಮವಾರದ ನಡೆಯಲಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿವೆ.

ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ನಡೆದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಹತ್ತಾರು ಕನ್ನಡ ಪರ ಸಂಘಟನೆಗಳು ಒಂದೇ ವೇದಿಕೆಯಡಿ ಸೇರಿ ಇನ್ನು ಮುಂದೆ ನೆಲ, ಜಲ, ಭಾಷೆ, ಅನ್ನದಾತನ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಲು ನಿರ್ಧರಿಸಲಾಯಿತು.

ಹಿರಿಯ ರಂಗಕರ್ಮಿ ಎ.ಭದ್ರಪ್ಪ ಮಾತನಾಡಿ, ‘ಇಂದಿನ ಯುವಕರಲ್ಲಿ ಹೋರಾಟದ ಕಿಚ್ಚಿದೆ. ಆದರೆ ಪ್ರತಿಷ್ಠೆ ಅಡ್ಡ ಬಂದು, ಸಂಘಟನೆಗಳು ಛಿದ್ರವಾಗುತ್ತಿವೆ. ದಾವಣಗೆರೆ ಅನೇಕ ಚಳವಳಿಗಳನ್ನು ಹುಟ್ಟುಹಾಕಿದ ನೆಲ. ಇನ್ನು ಮುಂದಾದರೂ ಎಲ್ಲ ಕನ್ನಡ ಪರ ಸಂಘನೆಗಳು ನಾಡು, ನುಡಿ ವಿಚಾರದಲ್ಲಿ ಒಂದಾಗಿ ಕೆಲಸ ಮಾಡಬೇಕು’ ಎಂದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ‘ವೈಯಕ್ತಿಕ ಹಿತಾಸಕ್ತಿಗಳಿದ್ದರೆ ಸಂಘಟನೆಗಳು ಪ್ರತ್ಯೇಕ ಹೋರಾಟ ಮಾಡಿಕೊಳ್ಳಲಿ. ಆದರೆ ನಾಡು, ನುಡಿಯ ವಿಷಯದಲ್ಲಿ ಎಲ್ಲ ಸಂಘಟನೆಗಳು ಒಕ್ಕೊರಳ ಧ್ವನಿಯಾಗಬೇಕು. ಈ ಒಕ್ಕೂಟಕ್ಕೆ ಗಂಡ, ಹೆಂಡತಿ ಜಗಳ ಬಿಡಿಸಲು ರಾಜಿ ಪಂಚಾಯಿತಿ ಮಾಡುವ ಸಂಘಟನೆಗಳನ್ನು ಸೇರಿಸಿಕೊಳ್ಳುವ ಅಗತ್ಯ ಇಲ್ಲ’ ಎಂದರು.

ರೈತ ಮುಖಂಡ ಹೊನ್ನೂರು ಮುನಿಯಪ್ಪ, ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯ ಸೋಮಶೇಖರ್, ಆಟೊ ಚಾಲಕರ ಸಂಘದ ಅಧ್ಯಕ್ಷ ಕರಿಯಪ್ಪ ಅವರೂ ಮಾತನಾಡಿದರು. ಕನ್ನಡ ಪರ ಹೋರಾಟಗಾರ ಕೆ.ಜಿ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರವೀಣ್ ಶೆಟ್ಟಿ ಬಣ, ನಾರಾಯಣ ಗೌಡ ಬಣ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ, ಅಸಂಘಟಿತ ಕಾರ್ಮಿಕರ ವೇದಿಕೆ, ಕರುನಾಡು ಸಮರ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಡಾ.ರಾಜ್ ಕುಮಾರ್ ಅಭಿಮಾನಿ ಬಳಗ, ಗಜಸೇನೆ ಸೇರಿದಂತೆ ಹತ್ತಕ್ಕೂ ಅಧಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸೋಮವಾರ ಬೆಳಿಗ್ಗೆ 8ಕ್ಕೆ ಜಯದೇವ ವೃತ್ತದಲ್ಲಿ ಒಗ್ಗೂಡಿ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕೃತಿ ದಹನ ಮಾಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮೇಯರ್‌ ಭಾಗಿ

ಈ ಸಭೆಯಲ್ಲಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಭಾಗಿಯಾದರು. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಮಾಡುವ ಪಕ್ಷದಲ್ಲೇ ಇರುವ ಮೇಯರ್‌ಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಅವರು ಉದ್ಘಾಟನೆ ಮಾಡಿ ಹೋಗುವವರೆಗೆ ಬಂದ್‌ ಬಗ್ಗೆ ಚರ್ಚೆ ನಡೆಸದಿರಲು ಸಂಘಟನೆಗಳು ನಿರ್ಧರಿಸಿದವು.

ಸಭೆಯನ್ನು ಉದ್ಘಾಟಿಸಿದ ಮೇಯರ್‌ ಮಾತನಾಡಿ, ‘ಕಳೆದ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಆಗಿಲ್ಲ. ಈ ಬಾರಿ ಪಾಲಿಕೆ ವತಿಯಿಂದ ಅದ್ದೂರಿಯಾಗಿ ಆಚರಿಸಲಾಗುವುದು’ ಎಂದು ತಿಳಿಸಿದರು.

‘ಪಂಪಾಪತಿ ನೆಟ್ಟಿರುವ ಗಿಡಗಳ ನೆರಳಿನಲ್ಲಿ ನಾವು ಬದುಕುತ್ತಿದ್ದೇವೆ. ನಾವು ಗಿಡ ನೆಟ್ಟು ಮುಂದಿನ ಪೀಳಿಗೆಗೆ ಉಪಕಾರ ಮಾಡೋಣ. ಅದಕ್ಕಾಗಿ ಗ್ರೀನ್‌ ಸಿಟಿ ಯೋಜನೆಯಡಿ 1 ಲಕ್ಷ ಗಿಡ ನೆಡಲಾಗುವುದು’ ಎಂದರು.

ನಗರದಲ್ಲಿ ಭುವನೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಸಂಘಟನೆಗಳು ಸ್ಥಳ ತೋರಿಸಿದರೆ ಅಲ್ಲಿ ನಿರ್ಮಾಣ ಮಾಡಲಾಗುವುದು. ಜಯದೇವ ವೃತ್ತದಲ್ಲಿ ಕುವೆಂಪು, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್ ಅವರ ಪುತ್ಥಳಿ ನಿರ್ಮಾಣಕ್ಕೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.