ADVERTISEMENT

ಶಿಕ್ಷಕರು ವಿದ್ಯಾರ್ಥಿಗಳಿಗೆ ಗಟ್ಟಿ ಅಡಿಪಾಯ ಹಾಕಲಿ

ಶಿಕ್ಷಕರ ದಿನಾಚರಣೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:21 IST
Last Updated 5 ಸೆಪ್ಟೆಂಬರ್ 2019, 13:21 IST
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಜಿ.ಎ. ಸಿದ್ದೇಶ್ವರ ಉದ್ಘಾಟಿಸಿದರು
ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಜಿ.ಎ. ಸಿದ್ದೇಶ್ವರ ಉದ್ಘಾಟಿಸಿದರು   

ದಾವಣಗೆರೆ: ವಿದ್ಯಾರ್ಥಿಗಳ ಭವಿಷ್ಯ ಚೆನ್ನಾಗಿರಬೇಕಿದ್ದರೆ ಶಿಕ್ಷಕರು ಹಾಕುವ ಅಡಿಪಾಯ ಗಟ್ಟಿರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯಭವನದಲ್ಲಿ ಗುರುವಾರ ನಡೆದ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಎಲ್ಲರ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಇದೆ. ಸಾಮಾನ್ಯ ವ್ಯಕ್ತಿಯನ್ನು ಸಂಸ್ಕಾರಯುತ, ಸಂಸ್ಕೃತಿಯುತ ಶಿಕ್ಷಣ ನೀಡಿ ದೇಶದ ಅತ್ಯುತ್ತಮ ಪ್ರಜೆಯನ್ನಾಗಿ ಮಾಡುವವರು ಶಿಕ್ಷಕರು ಎಂದು ತಿಳಿಸಿದರು.

ADVERTISEMENT

ಬೆಳಿಗ್ಗೆ 10ಕ್ಕೆ ಪಾಠ ಮಾಡಬೇಕಾದವರು 10.30ಕ್ಕೆ ಬರುವುದು. ಸಂಜೆ 4.30ರ ವರೆಗೆ ಕರ್ತವ್ಯ ನಿರ್ವಹಿಸಬೇಕಿದ್ದರೂ ಬೇಗನೇ ಹೋಗುವವವರು ಅತ್ಯುತ್ತಮ ಶಿಕ್ಷಕರಾಗಲಾರರು. ಹೀಗೆ ಮಾಡುವುದರಿಂದ ಶಿಕ್ಷಕ ವೃತ್ತಿಗೆ ಅಗೌರವ ತೋರಿಸಿದಂತಾಗುತ್ತದೆ. ಫಲಿತಾಂಶವೂ ಚೆನ್ನಾಗಿ ಬರುವಂತೆ, ಕ್ರೀಡೆ, ಸಂಗೀತ, ಕಲೆ ಇನ್ನಿತರ ಕ್ಷೇತ್ರಗಳಲ್ಲಿಯೂ ಸಾಧನೆ ಹೊರಹೊಮ್ಮುವಂತೆ ಶಿಕ್ಷಕರು ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್, ‘ಇಂದು ಜಿಲ್ಲಾ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು ಮಾತ್ರ ಅತ್ಯುತ್ತಮ ಶಿಕ್ಷಕರಲ್ಲ ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕರು ಕೂಡ ಅತ್ಯುತ್ತಮ ಶಿಕ್ಷಕರೇ ಆಗಿದ್ದಾರೆ’ ಎಂದು ಹೇಳಿದರು.

ರೈತರು ಹೊಟ್ಟೆಯ ಹಸಿವನ್ನು ನೀಗಿಸಿದರೆ, ಶಿಕ್ಷಕರು ಜ್ಞಾನದ ಹಸಿವನ್ನು ನೀಗಿಸುತ್ತಾರೆ. ಹಾಗಾಗಿ ಈ ಇಬ್ಬರು ಇಲ್ಲದೇ ಸಮಾಜವಿಲ್ಲ. ದೇಶ ಕಟ್ಟುವುದು ಎಂದರೆ ಎಂಜಿನಿಯರಿಂಗ್‌ ಕೆಲಸವಲ್ಲ. ಯುವಪೀಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡುವುದೇ ದೇಶ ಕಟ್ಟುವ ಕೆಲಸ ಎಂದು ವಿಶ್ಲೇಷಿಸಿದರು.

ಶಿಕ್ಷಕರು ಮನೆ, ಸೈಟು ಮಾಡಿಕೊಂಡಿದ್ದರೆ ಅದು ಆಸ್ತಿಯಲ್ಲ. ನೀವು ಕಲಿಸಿದ ವಿದ್ಯಾರ್ಥಿಗಳು ಸಾಧನೆ ಮಾಡಿದರೆ ಅದೇ ನಿಮ್ಮ ಆಸ್ತಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ವಿಶೇಷ ಉಪನ್ಯಾಸ ನೀಡಿ, ‘ಸರ್ವಪಳ್ಳಿ ರಾಧಾಕೃಷ್ಣ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆವರ ಅಪೇಕ್ಷೆಯಂತೆ ಆಚರಿಸಲಾಗುತ್ತಿದೆ. ವಿಶ್ವ ಶಿಕ್ಷಕರ ದಿನ ಅ.5 ಾಗಿರುತ್ತದೆ’ ಎಂದು ವಿವರ ನೀಡಿದರು.

ಇಂದಿನ ಶಿಕ್ಷಣ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಮೊಬೈಲ್‌, ಕಂಪ್ಯೂಟರ್‌ಗಳ ಮೂಲಕ ಅಂತರ್ಜಾಲವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮಗೆ ಬೇಕಾದ ಪಠ್ಯವನ್ನು ಕಲಿಯುತ್ತಿದ್ದಾರೆ. ಅಂತರ್ಜಾಲದ ಮೂಲಕ ಜ್ಞಾನ ಸಿಗಬಹುದು. ಆದರೆ ಜ್ಞಾನದರ್ಶನ ಆಗದು. ಸ್ವಂತಿಕೆ, ನಾಯಕತ್ವ ಗುಣ, ಅಂತರಂಗದ ಚಿಂತನೆ, ಅಧ್ಯಯನಶೀಲತೆ ಸಿಗಬೇಕಿದ್ದರೆ ಶಿಕ್ಷಕರ ಮೂಲಕವೇ ಕಲಿಯಬೇಕು ಎಂದರು.

ಶಿಕ್ಷಣ ಎಂದರೆ ಮಾಹಿತಿ ತುಂಬುವುದಲ್ಲ. ವಿವೇಚನೆ, ವಿವೇಕ ತುಂಬುವುದು ಶಿಕ್ಷಣ. ನೈತಿಕ ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ವಿರುದ್ಧ ದಿಕ್ಕಿನಲ್ಲಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ದಂಡಿಸಿ ತಿದ್ದುತ್ತಿದ್ದರು. ಈಗ ಬೆತ್ತ ಹಿಡಿದರೆ ಹೆತ್ತವರು ಕೈಗೆ ಸಿಕ್ಕಿದ್ದನ್ನು ಹಿಡಿದುಕೊಂಡು ಬರುತ್ತಿದ್ದಾರೆ. ಶಿಕ್ಷಕರ ಕೈಯಲ್ಲಿದ್ದ ಬೆತ್ತಕ್ಕೆ ಕೆಲಸ ಕಡಿಮೆಯಾಗಿದ್ದರಿಂದ ಪೊಲೀಸರ ಬೆತ್ತಕ್ಕೆ ಹೆಚ್ಚು ಕೆಲಸವಾಗಿದೆ. ಕೋರ್ಟ್‌ ಪ್ರಕರಣಗಳು ಜಾಸ್ತಿಯಾಗಿವೆ ಎಂದು ವಿಶ್ಲೇಷಿಸಿದರು.

ಅನುಕರಣೆಯ ಶಿಕ್ಷಣಕ್ಕಿಂತ ಅನುಭವದ ಶಿಕ್ಷಣ ನೀಡಬೇಕು. ವಿದ್ವತ್ತಿಗಿಂತ ವಿವೇಕಕ್ಕೆ ಪ್ರಾಮುಖ್ಯ ನೀಡಬೇಕು. ನಿನ್ನೆಯ ಅನುಭವ, ಇಂದಿನ ಪ್ರಜ್ಞೆ, ನಾಳೆಯ ಪರಿಕಲ್ಪನೆ ಇದ್ದರಷ್ಟೇ ಅರಿವಿನ ಶಿಕ್ಷಣ ನೀಡಬಹುದು ಎಂದರು.

21 ಶಿಕ್ಷಕರನ್ನು ಸನ್ಮಾನಿಸಲಾಯಿತು. ನಲಿಕಲಿ ವಿಭಾಗದ ಶಿಕ್ಷಕರನ್ನೂ ಗುರುತಿಸಲಾಯಿತು. ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಗಂಗಾನಾಯ್ಕ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಕ್ಷಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಿ.ಆರ್.ಪರಮೇಶ್ವರಪ್ಪ, (ಅಭಿವೃದ್ಧಿ) ಲಿಂಗರಾಜು, ಮಂಜುನಾಥಯ್ಯ, ಮುಬಾರಕ್, ತಿಪ್ಪೇಶ್, ಸಿದ್ದೇಶ್, ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಬಿಇಒಗಳಾದ ಸಿದ್ದಪ್ಪ ಮತ್ತು ಕೊಟ್ರೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.