ADVERTISEMENT

2ಎ ಮೀಸಲಾತಿಗೆ ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿಲ್ಲ

ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:35 IST
Last Updated 4 ಜನವರಿ 2022, 6:35 IST
ಕೂಡಲ ಸಂಗಮದಲ್ಲಿ ಪಾದಯಾತ್ರೆಯ ವರ್ಷಾಚರಣೆ ಅಂಗವಾಗಿ ದಾವಣಗೆರೆಯ ಸದ್ಯೋಜಾತ ಶಿವಾಚಾರ್ಯ ಹಿರೇಮಠದ ಆವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್, ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಜಿ. ಅಜಯ್‌ಕುಮಾರ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕೂಡಲ ಸಂಗಮದಲ್ಲಿ ಪಾದಯಾತ್ರೆಯ ವರ್ಷಾಚರಣೆ ಅಂಗವಾಗಿ ದಾವಣಗೆರೆಯ ಸದ್ಯೋಜಾತ ಶಿವಾಚಾರ್ಯ ಹಿರೇಮಠದ ಆವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್, ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ಜಿ. ಅಜಯ್‌ಕುಮಾರ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿಲ್ಲ. ಶಾಶ್ವತ ಹಿಂದುಳಿದ ವರ್ಗ ನೀಡಿರುವ ವರದಿಯೇ ಸಾಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲ ಸಂಗಮದಲ್ಲಿ ಪಾದಯಾತ್ರೆಯ ವರ್ಷಾಚರಣೆ ಅಂಗವಾಗಿ ಸೋಮವಾರ ಇಲ್ಲಿನ ಸದ್ಯೋಜಾತ ಶಿವಾಚಾರ್ಯ ಹಿರೇಮಠದ ಆವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಲು ಕುಲಶಾಸ್ತ್ರೀಯ ಅಧ್ಯಯನ ಅಗತ್ಯವಿದೆ. ಶಿಕ್ಷಣ ಹಾಗೂ ಸಾಮಾಜಿಕವಾಗಿ ಮೀಸಲಾತಿ ಕೇಳುತ್ತಿದ್ದೇವೆ. ಹಿಂದುಳಿದ ವರ್ಗದ ಆಯೋಗ ವರದಿ ಆಧಾರದಲ್ಲಿ ಮೀಸಲಾತಿ ನಿಗದಿಯಾಗುತ್ತದೆ. ಸರ್ಕಾರ ಹಾಗೂ ಆಯೋಗ ಮನಸ್ಸು ಮಾಡಿದರೆ 15 ದಿನಗಳಲ್ಲಿ ವರದಿ ನೀಡಬಹುದು. ಚುನಾವಣೆ ಇದ್ದುದರಿಂದ ಕೆಲವು ಕಡೆ ಸಮೀಕ್ಷೆಗೆ ಹಿನ್ನಡೆಯಾಗಿದೆ. ಶೇ 99ರಷ್ಟು ಸಮೀಕ್ಷೆ ಮುಗಿದಿದ್ದು, ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ADVERTISEMENT

ಸಂಕ್ರಾಂತಿಗೆ ಎಳ್ಳುಬೆಲ್ಲದ ನಿರೀಕ್ಷೆ

ಜ.14ರಂದು ಪಾದಯಾತ್ರೆಯ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮೀಸಲಾತಿ ಘೋಷಿಸುವ ವಿಶ್ವಾಸವಿದ್ದು, ಸಂಕ್ರಾಂತಿ ಹಬ್ಬದ ಎಳ್ಳು–ಬೆಲ್ಲ ಸಿಗುವ ನಿರೀಕ್ಷೆ ಇದೆ. ಇದು ತಪ್ಪಿದರೆ ಯುಗಾದಿ, ಇಲ್ಲವೇ ಬಸವಜಯಂತಿ ವೇಳೆಗೆ ಸಿಗುವ ವಿಶ್ವಾಸವಿದೆ’ ಎಂದು ಹೇಳಿದರು.

‘ಸೆಪ್ಟೆಂಬರ್ 18ರೊಳಗೆ ಮೀಸಲಾತಿ ನೀಡುವುದಾಗಿ ಯಡಿಯೂರಪ್ಪ ಅವರು ಘೋಷಿಸಿದ್ದರು. ಆದರೆ ಅವರು ಅಧಿಕಾರದಿಂದ ಕೆಳಗಿಳಿದರು. ಯಡಿಯೂರಪ್ಪ ಅವರು ಅಧಿವೇಶನದಲ್ಲಿ ನೀಡಿದ ಭರವಸೆ ಈಡೇರಿಸಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದು, ಸಚಿವರಾದ ಸಿ.ಸಿ. ಪಾಟೀಲ, ಬಸನಗೌಡ ಯತ್ನಾಳ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ್ದಾರೆ. ಇದರಿಂದಾಗಿ ಮೀಸಲಾತಿಗೆ ಡೆಡ್‌ಲೈನ್ ನೀಡಿಲ್ಲ. ಒಂದು ವೇಳೆ ನೀಡದೇ ಇದ್ದರೆ 20 ಲಕ್ಷ ಜನರನ್ನು ಸೇರಿಸಿ ಮತ್ತೆ ಹೋರಾಟ ನಡೆಸುತ್ತೇವೆ.ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಸಿದರು.

‘ಮೀಸಲಾತಿ ಪಡೆಯಲು ಶಕ್ತಿ, ಯುಕ್ತಿ ಹಾಗೂ ಭಕ್ತಿಯಿಂದ ಹೋರಾಟ ಮಾಡಲಾಗುವುದು. ಈಗ ಸಂಭ್ರಮಿಸುವ ಕಾಲವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯಿಂದ 10 ಸಾವಿರ ಜನರ ನಿರೀಕ್ಷೆ:

ಮಾಜಿ ಶಾಸಕ ಎಚ್‌.ಎಸ್. ಶಿವಶಂಕರ್ ಮಾತನಾಡಿ, ‘ಕೂಡಲ ಸಂಗಮದಲ್ಲಿ ಪಾದಯಾತ್ರೆಯ ವರ್ಷಾಚರಣೆಗೆ ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲು ಸಿದ್ಧತೆ ನಡೆದಿದೆ. ‘ಕೂಡಲ ಸಂಗಮಕ್ಕೆ ಬನ್ನಿ ಹೋರಾಟದಲ್ಲಿ ಕೈಜೋಡಿಸಿ’ ಎಂದು ಕರೆ ನೀಡಲಾಗುವುದು’ ಎಂದು ಹೇಳಿದರು.

ಅಖಿಲ ಭಾರತ ಲಿಂಗಾತಯ ಪಂಚಮಸಾಲಿ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜಿ. ಅಜಯ್‌ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಸಮಾಜದ ಮುಖಂಡರಾದ ಗಂಗಾಧರಪ್ಪ, ಎಸ್‌.ಓಂಕಾರಪ್ಪ, ಮಂಜಣ್ಣ ಪೂಜಾರಿ, ಬಸವರಾಜಪ್ಪ ಇದ್ದರು.

14ರಂದು ಪಾದಯಾತ್ರೆ ವರ್ಷಾಚರಣೆ

ದಾವಣಗೆರೆ: 2ಎ ಮೀಸಲಾತಿ ಹೋರಾಟಕ್ಕೆ ವರ್ಷ ತುಂಬಿದ ನಿಮಿತ್ತ ಜನವರಿ 14ರಂದು ಕೂಡಲ ಸಂಗಮದಲ್ಲಿ ಪಾದಯಾತ್ರೆಯ ವರ್ಷಾಚರಣೆ, ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ, ಸಮುದಾಯದ ಶಾಸಕರು, ಮಾಜಿ ಶಾಸಕರು ಹಾಗೂ ವಿವಿಧ ಮಠಾಧೀಶರು ಪಾಲ್ಗೊಳ್ಳುವರು.

‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆ ಮಾಡಲು ಒಂದು ಸಮಿತಿ ರಚಿಸಿದ್ದು, ರೈತರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಿದೆ. ಎರಡು ದಿನಗಳಲ್ಲಿ ಹೆಸರು ಘೋಷಿಸಲಾಗುವುದು’ ಎಂದು ಹೇಳಿದರು.

‘ಹರಮಾಲೆ ಎಂದರೆ ಗೊತ್ತಿಲ್ಲ’

ಹರಜಾತ್ರೆ ಅಂಗವಾಗಿ ನಡೆಯುವ ಹರಮಾಲೆ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ನಮಗೆ ರುದ್ರಾಕ್ಷಿ ಮಾಲೆ ಬಿಟ್ಟು ಬೇರೆ ಯಾವುದೂ ನನಗೆ ಗೊತ್ತಿಲ್ಲ. ಆಯಾ ಮಠಗಳಿಗೆ ಒಂದೊಂದು ಸಂಪ್ರದಾಯವಿರುತ್ತದೆ. ಅದನ್ನು ಅವರು ಪಾಲಿಸುತ್ತಾರೆ. ಲಿಂಗ, ವಿಭೂತಿ, ರುದ್ರಾಕ್ಷಿ ನಮ್ಮ ಸಂಪ್ರದಾಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.